ರಾಜಕಾರಣದಿಂದ ಬಹುತ್ವದ ನಾಶ: ಪ್ರೊ.ಎಸ್.ಜಿ. ಸಿದ್ದರಾಮಯ್ಯ

Update: 2019-03-08 15:57 GMT

ಬೆಂಗಳೂರು, ಮಾ. 8: ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಬಹುತ್ವವನ್ನು ನಾಶ ಮಾಡುವ ರೀತಿಯಲ್ಲಿ ರಾಜಕೀಯ ಬೆಳೆಯುತ್ತಿದೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಕನ್ನಡ ಸಂಪಿಗೆ’ ಕನ್ನಡ ದಿನಪತ್ರಿಕೆಯ ಬೆಂಗಳೂರು ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಹುತ್ವದ ಸಂಸ್ಕೃತಿ, ಆಚಾರ- ವಿಚಾರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ- ರಾಜ್ಯಗಳ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಬಹುತ್ವವನ್ನು ಸಾರುವ ನಿಟ್ಟಿನಲ್ಲಿ ಪತ್ರಿಕಾ ಧರ್ಮವನ್ನು ಪಾಲಿಸಬೇಕು ಸಲಹೆ ಮಾಡಿದರು.

ನೆಲ, ಜಲದ ನಿಷ್ಠೆ ಬಿಟ್ಟು, ರಾಜಕೀಯ ಪಕ್ಷಗಳು ಅನ್ಯ ಧರ್ಮದಲ್ಲಿ ದ್ವೇಷವನ್ನು ಬೆಳೆಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಇಂತಹ ಹೀನಾಯ ಕೃತ್ಯಗಳನ್ನು ಜನ ಸಾಮಾನ್ಯನಿಗೆ ತಿಳಿಸಿ, ಸಮಾಜಮುಖಿಯಾಗಿ ಪತ್ರಿಕಾರಂಗ ಬೆಳೆಯಬೇಕು. ಆದರೆ, ಮಾಧ್ಯಮ ಕ್ಷೇತ್ರ ಏನಾಗಿದೆ ಇಂದು? ಪತ್ರಿಕೆಗಳು ಪಕ್ಷಕ್ಕೆ, ಧರ್ಮಕ್ಕೆ ಬದ್ಧವಾಗಿದೆಯೋ ಅಥವಾ ಪತ್ರಿಕಾ ಧರ್ಮಕ್ಕೆ ಬದ್ಧವಾಗಿದೆಯೋ ಎಂಬುದೇ ಅನುಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ವಸ್ತು ನಿಷ್ಠತೆ, ವ್ಯಕ್ತಿ ಚಾರಿತ್ರವನ್ನು ತಿರುಚಿ ವಿಶ್ಲೇಷಣೆ ಮಾಡಲಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತವಾಗಿದ್ದು, ವರದಿಗಾರರು ಪ್ರಜ್ಞಾಪೂರ್ವಕವಾಗಿಯೇ ತಪ್ಪು ಎಸಗುತ್ತಿದ್ದಾರೆ. ದರ ಸಮರ (ಟಿಆರ್‌ಪಿ) ಬಂದ ಮೇಲೆಯೇ ಮಾಧ್ಯಮಕ್ಕೆ ಈ ಸ್ಥಿತಿ ಬಂದಿದೆ. ಇದು ಬಹುತ್ವವನ್ನು ಕೊಲ್ಲುವ ದೊಡ್ಡ ಅಪಾಯದ ಸೂಚಕ ಎಂದು ಹೇಳಿದರು.

ಗಂಧದ ಗುಡಿ, ಕನ್ನಡ ಸಂಪಿಗೆ, ಕನ್ನಡ ಕಂಪು ಎಂದು ಕನ್ನಡದ ವೈಭವೀಕರಣ ಪದಗಳನ್ನು ಕೇಳಿದಾಗ ಸಂಕಟವಾಗುತ್ತದೆ. ಏಕೆಂದರೆ ಆ ಶಕ್ತಿಯನ್ನು ನಾವುಗಳು ಉಳಿಸಿಕೊಂಡಿದ್ದೇವಾ? ಹಚ್ಚೇವು ಕನ್ನಡದ ದೀಪ ಎನ್ನುವ ಕವಿ ವಾಣಿಯನ್ನು ಮುಚ್ಚೇವು ಕನ್ನಡದ ಶಾಲೆಗಳನ್ನು ಎನ್ನುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕನ್ನಡ ಸಂಪಿಗೆ ಸಂಪಾದಕ ಟಿ.ತಿಪ್ಪೇಸ್ವಾಮಿ ಸಂಪಿಗೆ ಹಾಗೂ ವ್ಯವಸ್ಥಾಪಕ ಸಂಪಾದಕ ಬಿ.ಎನ್.ರಮೇಶ್ ಉಪಸ್ಥಿತರಿದ್ದರು.

ದೇಶದಲ್ಲಿ ಪ್ರಾದೇಶಿಕತೆ ಕ್ಷೀಣಿಸುತ್ತಿದ್ದು, ಒಂದೇ ಭಾಷೆ, ಒಂದೇ ತತ್ವದಡಿ ಬದುಕಬೇಕೆನ್ನುವ ದನಿ ಹೆಚ್ಚಾಗುತ್ತಿದೆ. ಅದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪತ್ರಿಕಾ ಧರ್ಮ ಕಾರ್ಯ ಪ್ರವೃತ್ತವಾಗಬೇಕು.

-ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News