ಭಗವದ್ಗೀತೆ ಓದಿದರೆ ಕ್ಯಾನ್ಸರ್ ಗುಣಮುಖ: ಡಾ.ವಿಜಯಲಕ್ಷ್ಮೀ ದೇಶಮಾನೆ
ಬೆಂಗಳೂರು, ಮಾ.8: ಭಗವದ್ಗೀತೆ ಓದಿದರೆ ಮಾರಣಾಂತಿಕ ರೋಗ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಬಹುದು ಎಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ ತಿಳಿಸಿದ್ದಾರೆ.
ಶುಕ್ರವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ, ‘ಪ್ರಬುದ್ಧ ಮಹಿಳೆಯರೊಂದಿಗೆ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಗವದ್ಗೀತೆಯಲ್ಲಿ ಆರೋಗ್ಯ ಜಾಗೃತಿ ಕುರಿತು ಉಲ್ಲೇಖ ಮಾಡಲಾಗಿದೆ. ಇದರಿಂದ, ಕ್ಯಾನ್ಸರ್ ರೋಗವನ್ನು ಗುಣಪಡಿಸಿಕೊಳ್ಳಬಹುದು. ಹೀಗಾಗಿ, ಭಗವದ್ಗೀತೆ ಓದುವಂತೆ ಆಗಬೇಕು. ಅದೇ ರೀತಿ, ಮಹಿಳೆಯರು ಮನೆಯಲ್ಲಿಯೇ ಅಡುಗೆ ಮಾಡುವುದರಿಂದ ಆರೋಗ್ಯ ಉತ್ತಮವಾಗಲಿದೆ ಎಂದು ನುಡಿದರು.
ನನ್ನಮ್ಮ ತಮ್ಮ ಮಂಗಳಸೂತ್ರ ಮಾರಿ ನನ್ನನ್ನು ಎಂಬಿಬಿಎಸ್‌ಗೆ ಸೇರಿಸಿದರು. ಅಪ್ಪನ ಆಸೆಯಂತೆ ನಾನು ಕಿದ್ವಾಯಿಯಲ್ಲಿ ಸರ್ಜನ್ ಆದೆ. ಆದರೆ ಅಮ್ಮನಿಗೆ ಕ್ಯಾನ್ಸರ್ ಬಂದು ನಿಧನರಾದಾಗಲೇ ಕ್ಯಾನ್ಸರ್ ಎಂದರೇನು ಎಂಬುದನ್ನು ಅರಿತೆ ಎಂದು ಹೇಳಿ ಭಾವುಕರಾದರು.
ನನ್ನ ತಂದೆ ಬಾಬುರಾವ್ ದೇಶಮಾನೆ ಸ್ವಾತಂತ್ರ್ಯ ಹೋರಾಟಗಾರರು. ತಾಯಿ ರತ್ನಮ್ಮ ಗುಲ್ಬರ್ಗಾದ ಕೊಳೆಗೇರಿಯಲ್ಲಿ ರಸ್ತೆ ಬದಿ ತರಕಾರಿ ಮಾರುತ್ತಿದ್ದರು. ನಾವು ಒಟ್ಟು ಎಂಟು ಮಂದಿ ಮಕ್ಕಳು. ಹಿಂದುಳಿದ ವರ್ಗಕ್ಕೆ ಸೇರಿದವರು ನಾವು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನನಗೆ ಶಿಕ್ಷಕಿಯಾಗಬೇಕೆಂಬ ಆಸೆಯಿತ್ತು. ಆದರೆ ಅಪ್ಪನಿಗೆ ನಾನು ಸರ್ಜನ್ ಆಗಬೇಕೆಂಬ ಆಸೆ. ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ನಾನು ಎಂಬಿಬಿಎಸ್‌ಗೆ ಪ್ರವೇಶ ಪಡೆಯುವ ವೇಳೆ 1980ರಲ್ಲಿ ಗುಲ್ಬರ್ಗದಲ್ಲಿ ತೀವ್ರ ಬರಗಾಲವಿತ್ತು ಎಂದು ನೆನೆದರು.
ವೈದ್ಯೆ ಪದ್ಮಾ ಪ್ರಕಾಶ್, ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ವಕೀಲರಾದ ಸರೋಜಿನಿ ಮುತ್ತಣ್ಣ, ಅನಿತಾ, ಬಿಜೆಪಿ ಮಹಿಳಾ ಘಟಕ ಕಾರ್ಯದರ್ಶಿಗಳಾದ ಕವಿತಾ ಜೈನ್, ಲತಾ ಸೇರಿದಂತೆ ಪ್ರಮುಖರಿದ್ದರು.