×
Ad

ಮಹಿಳಾ ಚಳವಳಿ ಯುದ್ಧ ವಿರೋಧಿ: ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ ಜಿತ್ ಕೌರ್

Update: 2019-03-08 21:51 IST

ಬೆಂಗಳೂರು, ಮಾ.8: ದೇಶದಲ್ಲಿ ಯುದ್ಧ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬಲಿಪಶುಗಳಾಗುತ್ತಾರೆ. ಮಹಿಳಾ ಚಳವಳಿಯು ಯುದ್ಧ ವಿರೋಧಿ, ಶಾಂತಿಯ ಸಂಕೇತದ ಚಳವಳಿಯಾಗಿದೆ ಎಂದು ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕೌರ್ ಹೇಳಿದ್ದಾರೆ.

ನಗರದ ಗಾಂಧೀ ಭವನದಲ್ಲಿ ಭಾರತೀಯ ಮಹಿಳಾ ಒಕ್ಕೂಟ ಹಾಗೂ ಎಐಟಿಯುಸಿ ವತಿಯಿಂದ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಉದ್ಯೋಗಸ್ಥ ಮಹಿಳೆಯರ ಎರಡನೇ ರಾಜ್ಯ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಶ್ಮೀರ ಗಡಿಯ ಪುಲ್ವಾಮ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಯುದ್ಧ ನಡೆಸಬೇಕು ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಯುದ್ಧದಿಂದ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾವಿರಾರು ಸೈನಿಕರನ್ನು ನಾವು ಕಳೆದುಕೊಳ್ಳುತ್ತೇವೆ. ಅಲ್ಲದೆ, ಮಕ್ಕಳನ್ನು ಕಳೆದುಕೊಳ್ಳುವ, ಗಂಡಂದಿರನ್ನು ಕಳೆದುಕೊಳ್ಳುವ ಮಹಿಳೆಯರೇ ಇಲ್ಲಿಯೂ ಬಲಿಪಶುಗಳಾಗಬೇಕಾಗುತ್ತದೆ ಎಂದು ತಿಳಿಸಿದರು.

ಭಾರತದ ಸ್ವಾತಂತ್ರ ಹೋರಾಟದಲ್ಲಿ ಎಲ್ಲ ಹಂತದಲ್ಲಿಯೂ ಪುರುಷನಷ್ಟೇ ಮಹಿಳೆಯರ ಪಾತ್ರವಿದೆ. ದೇಶದ ವಿಮುಕ್ತಿಗಾಗಿ ಜೀವವನ್ನು ಪಣಕ್ಕಿಟ್ಟಿದ್ದ ಅನೇಕ ನಾರಿಯರಿದ್ದಾರೆ. ಸಿಪಾಯಿದಂಗೆ ಆಂದೋಲನದಲ್ಲಿ ಪಾಲ್ಗೊಂಡಿದ್ದ ಝಾನ್ಸಿರಾಣಿ ಲಕ್ಷ್ಮಿಭಾಯಿಯಿಂದ ಆರಂಭವಾಗಿ ಅರುಣಾ ಅಸಫ್ ಅಲಿವರೆಗೂ ಅನೇಕರು ತ್ಯಾಗ ಮಾಡಿದ್ದಾರೆ ಎಂದರು.

ದೇಶದ ವಿಮೋಚನೆಯಷ್ಟು ಅಲ್ಲದೆ, ದೇಶವನ್ನು ಕಟ್ಟುವಲ್ಲಿ ಅನೇಕರು ಶ್ರಮಿಸಿದ್ದಾರೆ. ಸ್ವಾತಂತ್ರ ನಂತರ ಶಿಕ್ಷಣ ಸೇರಿದಂತೆ ಅನೇಕ ವಿಷಯಗಳ ಕುರಿತು ಮಹಿಳೆಯರು ಹೋರಾಡಿದ್ದಾರೆ. ಹಲವು ಸಂದರ್ಭಗಳಲ್ಲಿ ಪುರುಷರನ್ನೇ ಎದುರು ಹಾಕಿಕೊಂಡ ಸಂದರ್ಭಗಳು ನಡೆದಿವೆ ಎಂದು ಅವರು ತಿಳಿಸಿದರು.

ದುಡಿಯುವ ಮಹಿಳೆಯರ ವೇದಿಕೆಯ ರಾಷ್ಟ್ರೀಯ ಸಂಚಾಲಕ ಮೊಹಿದಾ ನಿಜಾಂ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಮಹಿಳೆಯರು ದೇಶದಾದ್ಯಂತ ಹಲವಾರು ವರ್ಷಗಳಿಂದ ಧ್ವನಿ ಎತ್ತುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಯಾವ ಪಕ್ಷಗಳೂ ಈ ಕುರಿತು ಗಮನ ಹರಿಸಲಿಲ್ಲ. ಅವರು ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.

ಮಹಿಳೆಯರು ಎಲ್ಲರಂತೆ ಸಮಾನವಾಗಿ ಎಲ್ಲದರಲ್ಲಿಯೂ ಗುರುತಿಸಿಕೊಂಡಿದ್ದು, ಅವರು ರಾಜಕೀಯ, ಆರ್ಥಿಕ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಇಲ್ಲದಿದ್ದರೆ, ಮನುವಾದಿಗಳು ಮನುಸ್ಮತಿಯನ್ನು ತುಂಬುವ ಮೂಲಕ ಮಹಿಳೆಯರ ಹಕ್ಕುಗಳನ್ನೇ ಕಸಿದುಕೊಂಡು ಬಿಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಜ್ಯೋತಿ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕೆಲಸದ ಅವಧಿ ಎಂಟು ಗಂಟೆ ನಿಗದಿ ಮಾಡಬೇಕು ಎಂದು ಹೋರಾಟ ಮಾಡಿದ್ದ ಮಹಿಳಾ ಹೋರಾಟಗಾರ್ತಿಯ ನೆನಪಿನ ದಿನವಾಗಿ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ, ಇಂದಿನ ಈ ದಿನ ಫ್ಯಾಷನ್ ಶೋಗಳಾಗಿ ಮಾರ್ಪಟ್ಟಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News