3ನೆ ದಿನವೂ ಸರಿಯಾಗದ ಬಿಜೆಪಿ ಅಧಿಕೃತ ವೆಬ್ ಸೈಟ್: ದತ್ತಾಂಶ ಕಳವು ಶಂಕೆ
ಬೆಂಗಳೂರು,ಮಾ.8: ಬಿಜೆಪಿಯ ಅಧಿಕೃತ ಜಾಲತಾಣ ಶುಕ್ರವಾರವೂ ಕಾರ್ಯನಿರ್ವಹಿಸದೆ ಇರುವುದು ಪಕ್ಷದ ಒಳಗೆ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಅಧಿಕೃತ ಜಾಲತಾಣವನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿ ಮುಖಪುಟದಲ್ಲಿ ವ್ಯಂಗ್ಯಚಿತ್ರ (ಮೀಮ್‌ಗಳು)ಗಳನ್ನು ಹಾಕಿದ್ದರು. ಜಾಲತಾಣವನ್ನು ಸರಿಪಡಿಸುವಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಜಗತ್ತಿನ ಅತೀದೊಡ್ಡ ರಾಜಕೀಯ ಪಕ್ಷವನ್ನು ಜಾಲತಾಣಿಗರು ತಮಾಷೆಗೆ ಗುರಿಪಡಿಸಿದ್ದಾರೆ.
ಜಾಲತಾಣವನ್ನು ಯಥಾಸ್ಥಿತಿಗೆ ತರುವಲ್ಲಿ ಆಗುತ್ತಿರುವ ವಿಳಂಬ ಬೃಹತ್ ದತ್ತಾಂಶ ಸೋರಿಕೆಯ ಸೂಚನೆ ನೀಡುತ್ತಿದ್ದು ಬಿಜೆಪಿ ಸದಸ್ಯರು ಮತ್ತು ದೇಣಿಗೆದಾರರನ್ನು ಆತಂಕಕ್ಕೀಡು ಮಾಡಿದೆ ಎಂದು ಫ್ರೆಂಚ್ ಭದ್ರತಾ ಸಂಶೋಧಕ ಇಲಿಯಟ್ ಆಲ್ಡರ್ಸನ್ ತಿಳಿಸಿದ್ದಾರೆ. ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುವ ಪಕ್ಷದ ಜಾಲತಾಣ ಹ್ಯಾಕ್ ಆಗಿ ಮೂರು ದಿನ ಕಳೆದರೂ ಇನ್ನೂ ಸರಿಪಡಿಸಲು ಸಾಧ್ಯವಾಗದಿರುವುದು ಬಿಜೆಪಿಯ ಖಾಲಿ ಮಾತುಗಳತ್ತ ಬೆಟ್ಟು ಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞೆ ರೂಪಾ ಸುಬ್ರಮಣ್ಯನ್ ತಿಳಿಸಿದ್ದಾರೆ. ಜಾಲತಾಣದಲ್ಲಿ ಸಕ್ರಿಯರಾಗಿರುವ ಅನೇಕರು ಈ ವಿಷಯವನ್ನು ಬಿಜೆಪಿಯ ಇತರ ಹಲವು ಯೋಜನೆಗಳು ಮತ್ತು ರಾಷ್ಟ್ರೀಯ ಭದ್ರತೆ ವಿಷಯವನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಲು ಬಳಸಿಕೊಂಡಿದ್ದಾರೆ.