ಕಳ್ಳ ರಫೇಲ್ ದಾಖಲೆಗಳನ್ನು ವಾಪಾಸ್ ನೀಡಿರಬೇಕು: ಚಿದಂಬರಂ ವ್ಯಂಗ್ಯ

Update: 2019-03-09 07:38 GMT

ಹೊಸದಿಲ್ಲಿ, ಮಾ.9: ರಕ್ಷಣಾ ಸಚಿವಾಲಯದಿಂದ ರಫೇಲ್ ಯುದ್ದ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆ ಕಳ್ಳತನವಾಗಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಯು-ಟರ್ನ್ ಪಡೆದ ಮರುದಿನ ಟ್ವಿಟರ್‌ನಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ನನ್ನ ಊಹೆಯ ಪ್ರಕಾರ ದಾಖಲೆಗಳನ್ನು ಕದ್ದಿದ್ದ ಕಳ್ಳ ದಾಖಲೆಯನ್ನು ವಾಪಸು ನೀಡಿರಬೇಕು ಎಂದು ವ್ಯಂಗ್ಯವಾಡಿದರು.

‘‘ಬುಧವಾರ ರಫೇಲ್ ಯುದ್ದ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ್ದ ಪ್ರಮುಖ ದಾಖಲೆಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದಲೇ ಕಳ್ಳತನವಾಗಿತ್ತು. ಶುಕ್ರವಾರ ಕಳ್ಳತನವಾಗಿರುವ ದಾಖಲೆ ನಕಲಿಯಾಗಿತ್ತು. ಬಹುಶಃ ಕಳ್ಳ ಗುರುವಾರ ದಾಖಲೆಯನ್ನು ವಾಪಾಸ್ ನೀಡಿರಬೇಕು’’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

 ಬುಧವಾರ ರಫೇಲ್ ಡೀಲ್‌ಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ ಅಟಾರ್ನಿ ಜನರಲ್ ವೇಣುಗೋಪಾಲ್, ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದಲೇ ಕಳ್ಳತನವಾಗಿವೆ. ಎರಡು ಪ್ರಕಾಶನಗಳು ಹಾಗೂ ಓರ್ವ ವಕೀಲರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಹಾಗೂ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಆದರೆ, ಶುಕ್ರವಾರ ತಿಪ್ಪರಲಾಗ ಹಾಕಿದ್ದ ವೇಣುಗೋಪಾಲ್, ‘‘ದಾಖಲೆಗಳು ಕಳ್ಳತನವಾಗಿವೆ ಎಂಬ ಹೇಳಿಕೆ ಸಂಪೂರ್ಣ ತಪ್ಪು’’ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News