ಕವಿ ಕಣವಿ ಹಂಚಿಕೊಂಡ ಬದುಕಿನ ಕತೆ

Update: 2019-03-09 13:10 GMT

ಸಂದರ್ಶನ: ಎಂ.ಡಿ. ಒಕ್ಕುಂದ

► ಒಕ್ಕುಂದ : ತೊಂಬತ್ತು ವರ್ಷಗಳ ತುಂಬು ಬಾಳಿಗೆ, ಏಳು ಏಳೂವರೆ ದಶಕಗಳ ಸಾರ್ಥಕ ಬದುಕಿಗೆ ಗೌರವದ ನಮನಗಳು. ಈ ಸುದೀರ್ಘ ಪಯಣದಲ್ಲಿ ಅತ್ಯಂತ ಸ್ಮರಣೀಯ ಸಂದರ್ಭಗಳು ಯಾವುವು?

ಚೆನ್ನವೀರ ಕಣವಿ:

ಇಡೀ ನನ್ನ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನವನ್ನೇ ಈ ಸಂದರ್ಭದಲ್ಲಿ ಪುನಃ ಅವಲೋಕಿಸಬೇಕಾಗಿದೆ. ಮೊದಲನೆ ಯದಾಗಿ, ನನ್ನ ಬಾಲ್ಯ ಜೀವನದ ನೆನಪುಗಳೆಲ್ಲ ನುಗ್ಗಿ ಬರುತ್ತವೆ. ಗದಗ ತಾಲೂಕಿನ (ಈಗ ಜಿಲ್ಲೆ) ಶಿರುಂದ ಎಂಬ ಹಳ್ಳಿಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಪ್ರಾರಂಭವಾದದ್ದು, ಈಗ ಎಂಬತ್ತು ವರ್ಷಗಳ ಹಿಂದಿನ ಹಳ್ಳಿಯ ಜೀವನದ ಬದುಕಿನ ಶೈಲಿಯೇ ಬೇರೆಯಾಗಿತ್ತು. ಸಾಮಾನ್ಯವಾಗಿ ಅಂದಿನ ಎಲ್ಲ ಹಳ್ಳಿಗಳೇ ಹಾಗಿದ್ದವು. ಶಿರುಂದದಲ್ಲಿ ನಾನಾ ವೃತ್ತಿಗಳ ಜನರಿದ್ದರು. ಒಕ್ಕಲಿಗರು, ಕೂಲಿಕುಂಬಳಿ ಮಾಡುವವರು, ಮುಂಜಾನೆ ಯಿಂದ ಸಂಜೆಯವರೆಗೂ ದುಡಿಯು ತ್ತಿದ್ದರು. ಹೊಲದಲ್ಲಿ ನಟ್ಟು (ಆಳವಾದ ಕರಿಕೆಯ ಬೇರು) ಕಡಿಯಲು ನಸುಕಿನಲ್ಲಿ ಹೋಗುವ ಗಟ್ಟಿ ಕೂಲಿಯಾಳುಗಳು ಮಧ್ಯಾಹ್ನ ಉರಿಬಿಸಿಲಿನಲ್ಲಿ, ಗುದ್ದಲಿ ಹೆಗಲಿನಲ್ಲಿಟ್ಟು ಕೊಂಡು ಹಿಂದಿರುಗುವುದನ್ನು, ಹತ್ತಿ ಸುಗ್ಗಿಯಲ್ಲಿ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಹತ್ತಿ ಬಿಡಿಸಿಕೊಂಡು, ತಮ್ಮ ಪಾಲಿಗೆ ಬಂದ ದೊಡ್ಡ ದೊಡ್ಡ ಹತ್ತಿಗಂಟುಗಳನ್ನು ಹೊತ್ತು ಹಿಂದಿರುಗುವ ಹೆಣ್ಣುಮಕ್ಕಳು ನನ್ನ ಕಣ್ಣಿಗೆ ಬೀಳುತ್ತಿದ್ದರು.

ಕಂಬಾರ, ಕುಂಬಾರ, ಬಡಿಗ, ಅಕ್ಕಸಾಲಿ - ಎಲ್ಲರದೂ ಒಂದೊಂದೇ ಮನೆತನ. ಇಡೀ ಹಳ್ಳಿಯ ಒಕ್ಕಲಿಗರ ಕೆಲಸಗಳನ್ನೆಲ್ಲ ಅವರು ಮಾಡಿ ಕೊಡ ಬೇಕು. ಸುಗ್ಗಿಯ ಕಾಲದಲ್ಲಿ ಅವರಿಗೆಲ್ಲ ಆಯ. ಬೀಸುಕಲ್ಲು, ಒರಳು, ತಿರುವು ಗುಂಡುಗಳನ್ನು ಮಾಡಲು ಮರದ ಕೆಳಗಿನ ನೆರಳಿ ನಲ್ಲಿ ಸದಾ ಕಲ್ಲು ಕಟೆಯುತ್ತಿದ್ದ ಒಡ್ಡರ ಓಣಿ ಊರಿಗೆ ಹತ್ತಿಕೊಂಡೇ ಹೊರಗೆ. ಅವರ ಹೆಣ್ಣುಮಕ್ಕಳು ಕುಪ್ಪಸವನ್ನೇ ತೊಡುತ್ತಿರಲಿಲ್ಲ. ಊರ ಹೊರಬದಿಗೆ ಹೊಲೆ ಮಾದಿಗರ ಮನೆಗಳು. ಇಂಥ ಹಳ್ಳಿಯಲ್ಲಿ ಹೊಲಮನೆಗಳಿಲ್ಲ ದೆಯೇ ಬರೇ ಅಲ್ಪ ಪಗಾರದ ಮೇಲೆಯೇ ಜೀವಿಸುವ ಮಾಸ್ತರ ಮನೆಯೇ‘ಸುಧಾರಿಸಿದವರು’ ಎಂದು ಭಾವಿಸಿದ್ದವರು ಹಳ್ಳಿಯ ಜನ. ಎರಡು ಮೂರು ತಲೆಮಾರಿಗೆ ಕಲಿಸಿದ ನಮ್ಮ ತಂದೆ ‘ಸಕ್ರಪ್ಪ ಮಾಸ್ತರು’ ಊರಿನ ಎಲ್ಲರಿಂದ ಗೌರವಿಸಲ್ಪಟ್ಟವರು. ಹರಗುವುದಕ್ಕೆ, ಬಿತ್ತುವುದಕ್ಕೆ, ರಾಶಿ ಮಾಡಲಿಕ್ಕೆ - ಎಲ್ಲದಕ್ಕೂ ಪಂಚಾಂಗ ನೋಡಿ ಮುಹೂರ್ತ ಕೇಳಲು ನಮ್ಮ ಮನೆಗೇ ಬರುತ್ತಿದ್ದರು. ಆಗ ನಮ್ಮ ಊರಿನಲ್ಲಿ ಏಕೋಪಾಧ್ಯಾಯ ಶಾಲೆ- ಒಂದನೆಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆಗೆ ಮಾತ್ರ (ಸಣ್ಣಬಿನ್ ಇಯತ್ತೆ ದೊಡ್ಡಬಿನ್ ಇಯತ್ತೆ ಹಿಡಿದು) ಸರಕಾರಿ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾಗುವವರೆಗೆ ನಮ್ಮ ಶಾಲೆ ಹನುಮಪ್ಪನ ಗುಡಿಯಲ್ಲಿ ನಡೆಯುತ್ತಿತ್ತು. ಅದಕ್ಕಾಗಿ ಶಾಲೆಗೆ ‘ಸಾಲಿಗುಡಿ’ ಎಂಬ ಹೆಸರೇ ಜನರ ಬಾಯಲ್ಲಿತ್ತು. ನಾಲ್ಕೂ ಇಯತ್ತೆ ಗಳಿಗೆ ಎಲ್ಲ ವಿಷಯ ಗಳನ್ನೂ ನಮ್ಮ ತಂದೆಯವರೇ ಕಲಿಸುವ ಶಿಕ್ಷಕರು.

ಒಂದು ಕುರ್ಚಿ, ಒಂದು ಮೇಜು, ಒಂದು ಬಾಕು(Bench) ಒಂದು ಸಣ್ಣ ಸಂದೂಕು (ಕಾಗದ ಪತ್ರಗಳನ್ನಿಟ್ಟುಕೊಳ್ಳಲು) - ಇಷ್ಟೇ ಪೀಠೋಪ ಕರಣಗಳು. ಮೇಜಿನ ಮೇಲೆ ಮಸಿಕಾತಿ, ಟಾಕು, ಒಂದು ಇಂಚುಪಟ್ಟಿ, ಒಂದು ರೂಲುಕಟ್ಟಿಗೆ. ಗೋಡೆಯ ಮೇಲೆ ಗದಗ ತಾಲೂಕು, ಧಾರವಾಡ ಜಿಲ್ಲೆ, ಮುಂಬೈ ಪ್ರಾಂತದ ನಕಾಶೆಗಳು. ಭೂಗೋಳ ಕಲಿಸಲು ಈ ನಕಾಶೆಗಳು ಸಹಾಯಕವಾಗಿದ್ದವು. ಒಂದು ಕರಿಹಲಿಗೆ(Black Board) ಖಡುವಿನ ತುಂಡುಗಳು (Chalk pieces), ಬರೆದದ್ದನ್ನು ಅಳಿಸಲು ಒಂದು ಅರಿವೆ ತುಂಡು. ಮಕ್ಕಳಿಗೆ ಅ, ಆ, ಇ, ಈ ಕಲಿಸಲು, ಶುದ್ಧ ಬರಹ, ಲೆಕ್ಕ ಬಿಡಿಸಲು ಇದರ ಉಪಯೋಗ.

ಊರಿಗೆ ಹತ್ತಿಕೊಂಡೇ ಹೊರಬದಿಗೆ ನಮ್ಮ ಶಾಲೆ. ಶಾಲೆಯ ಹುಡುಗರೇ ಪಾಳಿ ಪ್ರಕಾರ ಉಡುಗಿ ಸ್ವಚ್ಛ ಮಾಡುವವರು. ವರ್ಷಕ್ಕೊಮ್ಮೆ ಸಾಲೀ ಸಾಹೇಬರಿಂದ ವಾರ್ಷಿಕ ಪರೀಕ್ಷೆ. ಆಗ ಊರಿನ ಕೆಲ ಹಿರಿಯರೂ ಪರೀಕ್ಷೆ ನೋಡಲು ಬರುತ್ತಿದ್ದರು. ಪಾಸು, ನಪಾಸು ಅಂದೇ ಗೊತ್ತಾಗುತ್ತಿತ್ತು. ನಾಲ್ಕೂ ತರಗತಿಗಳಿಗೆ ನಾನೇ ಒಂದೇ ನಂಬರು ಬಂದಾಗ ಮುಂದಿನ ವರ್ಷದ ಪಠ್ಯಪುಸ್ತಕ, ಕಂಪಾಸು ಇತ್ಯಾದಿ ಪಾರಿತೋಷಕಗಳು. ಸುತ್ತು ಮುತ್ತಲಿನ ಹಳ್ಳಿಗಳ ಶಾಲಾ ಪರೀಕ್ಷೆಗಳಿಗೆ ನಮ್ಮ ತಂದೆಯವರನ್ನು ಸಾಲೀ ಸಾಹೇಬರು ಕರೆದುಕೊಂಡು ಹೋಗಿ, ಶಿರುಂದ ಶಾಲೆ ಯ ಮಾದರಿ ಶಿಕ್ಷಕರೆಂದು ಹೇಳುತ್ತಿದ್ದರು.

ಪಗಾರ ಸಿಪಾಯಿ, ಪ್ರತಿ ತಿಂಗಳು ಬಂದು ಪಗಾರ ಬಟವಡೆ ಮಾಡುತ್ತಿದ್ದ. ವಾರಕ್ಕೊಮ್ಮೆ ಪೋಸ್ಟ್‌ಮನ್ ಬಂದು ಟಪಾಲು ಹಂಚುತ್ತಿದ್ದ. ಕೆಲ ಅನಕ್ಷರಸ್ಥ ಹಳ್ಳಿಗರು ನಮ್ಮ ತಂದೆಯಿಂದಲೇ ಪತ್ರ ಓದಿಸಿ ಉತ್ತರವನ್ನೂ ಬರೆಸುತ್ತಿದ್ದುದುಂಟು. ನಮ್ಮ ಶಾಲೆಯ ಎದುರಿಗೇ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ನಾಲ್ಕು ಗಡೆಗಡೆಯ ಬಾವಿ, ಬಾವಿಕಟ್ಟೆಯ ಕೆಳಗೆ ಸುತ್ತಲೂ ಹೊಲೆಮಾದಿಗರು ತಮ್ಮ ಮಣ್ಣಿನ ಕೊಡಗಳನ್ನಿಟ್ಟು ಕೊಂಡು ಬಾವಿಗೆ ನೀರು ತರಲು ಬರುವವ ರನ್ನು ಬೇಡಿ ನೀರು ಹಾಕಿಸಿ ಕೊಳ್ಳುತ್ತಿದ್ದರು.

ನಮ್ಮದು ತೋಟ ಪಟ್ಟಿಯ ಊರು. ನಾನು ಶಾಲೆಯಲ್ಲಿದ್ದಾಗ ತೋಟಕ್ಕೆ ಕಪ್ಪಲಿ (ಯಾತ) ಹೊಡೆಯು ವಾಗಿನ ಗಡ ಗಡೆಯ ‘ಗಿರಕೂ’ ‘ಗಿರಕೂ’ ನಾದದ ಕಡೆಗೇ ನನ್ನ ಲಕ್ಷ. ಶಾಲಾ ಪಠ್ಯದಲ್ಲಿರುವ ಪಠ್ಯ ಗಳೆಲ್ಲವೂ ನನಗೆ ಬಾಯಿ ಪಾಠ. ಬೆಳಗಿನಿಂದ ಸಂಜೆ ಯವರೆಗೂ ನಮಗೆ ಶಾಲೆ ಯಲ್ಲಿ ತರಗತಿಗಳು, ನಡುವೆ ಒಂದು ತಾಸು ಊಟಕ್ಕೆ ಬಿಡುವು. ಹಾಜರಿಯಲ್ಲಿ 40- 50 ಹುಡುಗ- ಹುಡುಗಿಯರ ಹೆಸರು ಇರುತ್ತಿದ್ದರೂ ಸುಗ್ಗಿಯ ಹೊತ್ತಿಗೆ ಹೊಲದ ಕೆಲಸಕ್ಕೆ ಹಚ್ಚುತ್ತಿದ್ದು ದರಿಂದ ಸಂಖ್ಯೆ ಒಮ್ಮೆಲೆ ಇಳಿದು ಬಿಡುತ್ತಿತ್ತು.

ಊರಿನಲ್ಲಿ ಎರಿ (ಕಪ್ಪು) ಮಸಾರಿ (ಕೆಂಪು) ಎರಡೂ ಮಣ್ಣಿನ ಹೊಲ ಗಳು. ಏರಿಯಲ್ಲಿ ಗೋಧಿ, ಹತ್ತಿ, ಕುಸುಬೆ, ಅಗಸಿಗಳನ್ನು ಬೆಳೆದರೆ ರೈತರುಮಸಾರಿ ಭೂಮಿಯಲ್ಲಿ ಜೋಳ, ಅಕ್ಕಡಿಕಾಳುಗಳು, ತೊಗರಿ, ನವಣೆ, ರಾಗಿ ಮುಂತಾದುವನ್ನು ಬೆಳೆಯುತ್ತಿದ್ದರು. ಊರ ಗೌಡರು, ಕುರುಬರು,ಅವರ ಮನೆಯ ಆವಾರದಲ್ಲಿಯೇ ಗ್ರಾಮದೇವತೆ ಕಟಿಗೇರವ್ವ, ವಾರಕ್ಕೊಮ್ಮೆ ಪಲ್ಲಕ್ಕಿ ಸೇವೆ. ಆಗ ಡೊಳ್ಳು ಬಾರಿಸುವ ವರಿಗೆ ಹೆಚ್ಚು ಉತ್ಸಾಹ. ಉಳಿದ ಎಲ್ಲ ಹಬ್ಬ ಹುಣ್ಣಿಮೆಗಳನ್ನು ತಂತಮ್ಮ ಮನೆ ಯಲ್ಲಿ ಆಚರಿಸುತ್ತಿದ್ದರೆ ಹೋಳಿಹಬ್ಬ, ಬನ್ನಿಹಬ್ಬ, ಆಲೇಹಬ್ಬ(ಮುಹರ್ರಂ)ಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಿದ್ದರು. ಕರಡಿಮಜಲು ಬಾರಿಸುತ್ತ, ಕಹಳೆ ಊದುತ್ತ ಪಲ್ಲಕ್ಕಿಗಳಲ್ಲಿ ದೇವರನ್ನಿಟ್ಟು ಊರ ಹೊರಗೆ ಬನ್ನಿಗಿಡಕ್ಕೆ ಹೋಗಿ ಪೂಜೆ ಮಾಡಿ, ಹಿಂದಿರುಗಿದ ಮೇಲೆಯೇ ಬನ್ನಿ ಮುಡಿಯುವರು. ಬೀಸುವಾಗ, ಕುಟ್ಟುವಾಗ, ಕಣದಲ್ಲಿ ಹಂತಿ ಹೊಡೆಯುವಾಗ, ಕಳೆ ತೆಗೆಯು ವಾಗ, ಹಬ್ಬ- ಹುಣ್ಣಿಮೆ ಆಚರಿಸುವಾಗ - ಸದಾಕಾಲ ಹಾಡುತ್ತಲೇ ಕೆಲಸ ಮಾಡುವುದು. ವಾದ್ಯಗಳ ಬಾರಿಸು ವಿಕೆ, ಹಳ್ಳಿ ಹಾಡುಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿದ್ದವು. ನಮ್ಮ ಊರಲ್ಲಿ 3 ಮುಸ್ಲಿಂ ಮನೆತನಗಳಿದ್ದರೂ ಅವರಿಗೇ ಆದ ಮಸೀದಿಯೂ ಇರುತ್ತಿತ್ತು. ಆಲೇಹಬ್ಬ(ಅಲ್ಲಾಹಬ್ಬ)ದಲ್ಲಿ ಊರಿನ ಜನರೆಲ್ಲರು ಭಾಗವಹಿಸುತ್ತಿದ್ದರು. ಡೋಲಿಗಳನ್ನು ಊರಿನ ಎಲ್ಲರೂ ಹೊತ್ತು ದೇವರನ್ನು ಹೊಳೆಗೆ ಕಳಿಸಿ ಬರುವವರೆಗೂ ಸಂಭ್ರಮ. ಅಂದು ಎಲ್ಲರ ಮನೆಯಲ್ಲಿಯೂ ಚೊಂಗೆಯ ಊಟ. ಪ್ರತಿಯೊಬ್ಬರ ಮನೆ ಯಲ್ಲಿಯೂ ‘ಚೊಂಗೆ’ಮಣೆಗಳಿದ್ದವು. ನಾವು ಹುಡುಗರೆಲ್ಲ ‘ಚೊಂಗೆ ಮಾಡ್ಯಾಳ ಎತ್ತಾರ, ಅದರ ತೆಗೆದಾಳ ಚಿತ್ತಾರ’ ಎಂದು ಹಾಡಿ ತಮಾಷೆ ಮಾಡುತ್ತಿದ್ದೆವು. ಶಿರುಂದಕ್ಕೆ ಮೂರು ಮೈಲಿನ ಮೇಲಿರುವ ಶಿರಹಟ್ಟಿಯ ಲ್ಲಿಯ ಪಕ್ಕೀರಸ್ವಾಮಿಗಳ ಜಾತ್ರೆ ತಿಂಗಳುಗಟ್ಟಲೆ ದೊಡ್ಡ ಪ್ರಮಾಣದಲ್ಲಿ ಜರು ಗುತ್ತಿತ್ತು. ಮಠದ ತೇರನ್ನು ಎಳೆಯುವುದೆಂದರೆ ಎಲ್ಲರಿಗೂ ಹುರುಪು. ಮಠ ದಲ್ಲಿ ಗದ್ದಿಗೆಗೆ ಕಾಯಿ ಒಡೆಸಿ, ನಗಾರಖಾನೆಯಲ್ಲಿ ಸಕ್ಕರಿ ಓದಿಸಿ ಬರುವು ದೆಂದರೆ ಸಾಮಾನ್ಯ ಜನಕ್ಕೆ ಸಮಾಧಾನ. ಅನೇಕ ಚಕ್ಕಡಿ ಗಳಲ್ಲಿ ಬರುವ ರೈತರು ವಾರಗಟ್ಟಲೆ ಜಾತ್ರೆಯಲ್ಲೇ ಇದ್ದು, ತಮಗೆ ಬೇಕಾದ ಒಕ್ಕಲುತನದ ಸಾಮಾನುಗಳನ್ನು ಖರೀದಿಸಿ ತಮ್ಮ ಊರಿಗೆ ಹೋಗುತ್ತಿದ್ದರು. ದನದ ಪರೀಕ್ಷೆ ಇಡೀ ತಿಂಗಳು ಇರುತ್ತಿತ್ತು. ನಾಲ್ಕೈದು ನಾಟಕ ಕಂಪೆನಿಗಳು ಜಾತ್ರೆ ಮುಗಿಯುವವರೆಗೂ ಇದ್ದು, ಮನರಂಜನೆ ನೀಡುತ್ತಿದ್ದವು.

ನಾಲ್ಕನೆಯ ಇಯತ್ತೆ ಮುಗಿಸಿದೆ. ತಂದೆಯವರೂ ಪಿಂಚಣಿ (pension) ಪಡೆಯತೊಡಗಿದರು. ಗ್ರಾಮೀಣ ಜೀವನ ನನ್ನ ಮೈತುಂಬಿ ಕೊಂಡಿತು. ಇದು ನನ್ನ ಜೀವನದಲ್ಲಿ ಮೊದಲನೆಯಮಹತ್ವದ ಘಟ್ಟ. ನೀವು ಕೇಳಿದ ‘ಸ್ಮರಣೀ ಯ ಸಂದರ್ಭ’ಗಳಲ್ಲಿ ಇದೂ ಒಂದು.

(Basic Education ನಮ್ಮ ಬಾವ(ಅಕ್ಕನಗಂಡ)ನಿಗೆ ಮುಂಡರಗಿ ಶಾಲೆಯಿಂದ ಧಾರವಾಡ ದ ಹತ್ತಿರ ಗರಗದ ಶಾಲೆಗೆ ಮುಖ್ಯಾಧ್ಯಾಪಕರಾಗಿ ಭಡ್ತಿ ಮೇಲೆ ವರ್ಗವಾಯಿತು. ಅದು ಶಿರುಂದಕ್ಕಿಂತ ದೊಡ್ಡ ಊರಾದ್ದ ರಿಂದ ಏಳನೆಯ ತರಗತಿಯವರೆಗೆ (ಮುಲ್ಕೀ ಪರೀಕ್ಷೆಯವರೆಗೆ) ಪ್ರಾಥಮಿಕ ಶಾಲೆ ಯಿತ್ತು. ನಾನು ಅಲ್ಲಿ ಮೂರು ವರ್ಷವಿದ್ದೆ. ಆಗಲೇ ಸ್ವಾತಂತ್ರ ಚಳವಳಿ ಹಳ್ಳಿಗಳನ್ನು ಆವರಿಸಿತ್ತು. ನಾನು ಆರನೇ ಇಯತ್ತೆಯಲ್ಲಿದ್ದಾಗಲೇ ಗಾಂಧೀಜಿಯವರ ವರ್ಧಾಶಿಕ್ಷಣ ಯೋಜನೆ -ಮೂಲ ಶಿಕ್ಷಣ) ಪ್ರಾಯೋಗಿಕವಾಗಿ ಪ್ರಾರಂಭವಾಗಿತ್ತು. ಧಾರವಾಡ ತಾಲೂಕಿನ ಹದಿನೆಂಟು ಊರಿನ ಶಾಲೆಗಳಿಗೆ ಗರಗದ ಶಾಲೆ ಮಾದರಿ ಶಾಲೆಯಾಗಿತ್ತು. ಶಿಕ್ಷಕರೆಲ್ಲ ಖಾದಿ ಧರಿಸತೊಡಗಿದರು. ಅನೇಕ ವಿದ್ಯಾರ್ಥಿಗಳು ಅವರನ್ನೇ ಅನುಸರಿಸಿದರು. ರವಿವಾರಕ್ಕೊಮ್ಮೆ ಶಿಕ್ಷಕರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ‘ಪ್ರಭಾತಪೇರಿ’ ಹೋಗುತ್ತಿ ದ್ದರು. ಆಗ ದೇಶಭಕ್ತಿಯ ಗೀತೆಗಳು, ನಾಡಹಾಡುಗಳನ್ನು ಹಾಡುತ್ತ ಹೋಗುತ್ತಿದ್ದೆವು. ‘ಎಂಥಾ ಶ್ಯಾಣೆ ಮಹಾತ್ಮಾ ಗಾಂಧಿ ಹಿಂದುಸ್ತಾನಕವನೇ ತಂದಿ’, ‘ನಾವು ಚಳವಳೀ ಮಾಡವರ’, ‘ಕರುನಾಡು ನಮ್ಮ ನಾಡು, ಚಿನ್ನದಾ ಕರುನಾಡು ನಮ್ಮ ನಾಡು’ ಮುಂತಾದ ಪದ್ಯಗಳು ಇನ್ನೂ ನನಗೆ ನೆನಪಿವೆ. ತುಪರಿಹಳ್ಳದ ದಂಡೆಗೆ ಹತ್ತಿ ಇರುವ, ಸ್ವಲ್ಪ ದೂರವಿರುವ ಮಡಿವಾಳೇಶ್ವರ ಮಠದ ದಾರಿಯನ್ನು ಸ್ವಚ್ಛ ಮಾಡುವುದು ಮುಂತಾದ ಸಾರ್ವಜನಿಕ ಕೆಲಸಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾಡುತ್ತಿದ್ದರು. ನಾನು ಗರಗದ ಶಾಲೆಯಿಂದಲೇ ಮುಲ್ಕಿ ಪರೀಕ್ಷೆ ಪಾಸಾದದ್ದು- ಧಾರವಾಡ ಕೇಂದ್ರಕ್ಕೆ ಮೊದಲನೇ ನಂಬರು ಬಂದೆ, ಗಾಂಧೀಜಿಯವರನ್ನು ನಾನು ನೋಡಿರದಿದ್ದರೂ ಅವರ ವಿಧಾಯಕ ಕಾರ್ಯಕ್ರಮಗಳ ಪ್ರಭಾವ ಮೆಲ್ಲಗೆ ಹಳ್ಳಿಗಳನ್ನು ವ್ಯಾಪಿಸಿತ್ತು. ಶಿರುಂದದಲ್ಲಿದ್ದಾಗ ತೋಟದ ಬಾವಿಯಲ್ಲಿ ಈಜು ಕಲಿತಿದ್ದರೆ, ಗರಗದಲ್ಲಿದ್ದಾಗ ಸೈಕಲ್ ಕಲಿತೆ.

ನನ್ನ ವಿದ್ಯಾರ್ಥಿ ಜೀವನದ ಮೂರನೇ ಮಹತ್ವದ ಘಟ್ಟವೆಂದರೆ, 1941ರಲ್ಲಿ ಧಾರವಾಡಕ್ಕೆ ಹೈಸ್ಕೂಲ್ ಶಿಕ್ಷಣಕ್ಕೆ ಬಂದದ್ದು. ಮುರುಘಾ ಮಠದ ಉಚಿತ ಪ್ರಸಾದ ನಿಲಯದಲ್ಲಿ ಪ್ರವೇಶ ದೊರೆತದ್ದೂ ನನ್ನ ಸುದೈವವೇ. ವೈರಾಗ್ಯಮೂರ್ತಿಗಳಾದ ಮೃತ್ಯುಂಜಯಪ್ಪಗಳ ಸಾನಿಧ್ಯದಲ್ಲಿ ಪ್ರತಿದಿನ ಸಂಜೆ ನಡೆಯುತ್ತಿದ್ದ ಶಿವಾನುಭವ ಕಾರ್ಯ ಕ್ರಮಗಳು, ಶ್ರಾವಣ ಮಾಸದಲ್ಲಿ ಬರುತ್ತಿದ್ದ ಪ್ರೊ. ಶಿ.ಶಿ. ಬಸವನಾಳರು, ಪ್ರೊ. ಮಾಳವಾಡರು, ಉತ್ತಂಗಿ ಚನ್ನಪ್ಪನವರ ಉಪನ್ಯಾಸಗಳು, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರ ವಚನ ಸಂಗೀತ-ಮೊದಲಾದವು ಕನ್ನಡ ಸಾಹಿತ್ಯದ, ಅದರಲ್ಲೂ ವಚನ ಸಾಹಿತ್ಯದ ಅಭ್ಯಾಸಕ್ಕೆ ನನಗೆ ಪ್ರೇರಣೆ ನೀಡಿದವು.

ಇತ್ತ ಆರ್.ಎಲ್.ಎಸ್. ಹೈಸ್ಕೂಲಿನ ಮುಖ್ಯಾಧ್ಯಾಪಕರಾದ ವೀ.ರು.ಕೊಪ್ಪಳ ಅವರ ಪ್ರೋತ್ಸಾಹದಿಂದ ಹೈಸ್ಕೂಲ್ ಮಿಸೆಲೆನಿಗೆ ಪ್ರತಿವರ್ಷ ಕವನ-ಲೇಖನಗಳನ್ನು ಬರೆಯತೊಡಗಿದೆ. ಅಲ್ಲದೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ಸಭೆಗಳಿಗೆ ನಾನು ತಪ್ಪದೆ ಹೋಗುತ್ತಿದ್ದೆ. ಅಲ್ಲಿಯೇ ಬೇಂದ್ರೆ, ಆನಂದ ಕಂದ (ಬೆಟಗೇರಿಕೃಷ್ಣಶರ್ಮ), ಅ.ನ.ಕೃ., ಮುಳಿಯ ತಿಮ್ಮಪ್ಪಯ್ಯ- ಮೊದಲಾದ ಹಿರಿಯ ಸಾಹಿತಿಗಳ ಭಾಷಣಗಳನ್ನೂ, ಕಾವ್ಯ ವಾಚನವನ್ನೂ ನಾನು ಕೇಳಿದ್ದು. ಆಗ ಪ್ರತಿಯೊಂದು ಕಾರ್ಯಕ್ರಮದ ಕೊನೆಗೂ ಕಾವ್ಯ ಗಾಯನ(ಇಂದಿನ ಸುಗಮ ಸಂಗೀತ) ಕಾರ್ಯಕ್ರಮ ಇರುತ್ತಿತ್ತು. ಆ ಕಾರ್ಯಕ್ರಮದಲ್ಲಿಯೇ ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಮೊದಲಾದ ಕವಿಗಳ ಕವಿತೆಗಳ ಹಾಡುಗಾರಿಕೆಯನ್ನು ಕೇಳಿದ್ದು. ಕಾವ್ಯಾಭ್ಯಾಸಕ್ಕೆ, ಕಾವ್ಯ ರಚನೆಗೆ ಪ್ರೇರಣೆ ದೊರೆತದ್ದೂ ಇಲ್ಲಿಯೇ.

1942ರ ಆಗಸ್ಟ್ ಕ್ರಾಂತಿ ಧಾರವಾಡವನ್ನು ಬಡಿದೆಬ್ಬಿಸಿತು. ಅನೇಕ ರಾಜಕೀಯ ಧುರೀಣರ ಭಾಷಣ ಕೇಳಲು ಕಡಪಾ ಮೈದಾನಕ್ಕೆ ನಾನು ಆಗಾಗ ಹೋಗುತ್ತಿದ್ದೆ. ‘ಸ್ವತಂತ್ರ ದೇಶದಲ್ಲಿ ಸ್ವಾಯತ್ತ ಕರ್ನಾಟಕ’ ಅಂದೋಲನವೂ ಆಗಲೇ ಪ್ರಾರಂಭವಾದದ್ದು. ಮುಂದೆ ಒಂದೆರಡು ವರ್ಷಗಳಲ್ಲಿ ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಚಳವಳಿಯೂ ಪ್ರಾರಂಭವಾಯಿತು. ಬಸವರಾಜ ಕಟ್ಟಿಮನಿ ಸಂಪಾದಕತ್ವದ ‘ಉಷಾ’ ಮಾಸಪತ್ರಿಕೆಯನ್ನು ನಾನು ತಪ್ಪದೆ ಓದುತಿದ್ದೆ. 1944ರಲ್ಲಿ ರಬಕವಿಯಲ್ಲಿ ಪ್ರೊ. ಬಸವನಾಳರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ನಾನು ಹೋಗಿದ್ದೆ. ಇದೇ ನಾನು ನೋಡಿದ ಮೊದಲ ಸಾಹಿತ್ಯ ಸಮ್ಮೇಳನ. ಗೋಕಾಕರ ಅಧ್ಯಕ್ಷತೆಯಲ್ಲಿ ‘ಪ್ರಗತಿಶೀಲ ಸಾಹಿತ್ಯ’ ಕುರಿತು ಒಂದು ವಿಚಾರ ಸಂಕಿರಣವನ್ನೂ ಆ ಸಮ್ಮೇಳನದಲ್ಲಿ ಏರ್ಪಡಿಸಲಾಗಿತ್ತು. ಅದರಲ್ಲಿ ಅ.ನ.ಕೃ., ತ.ರಾ.ಸು., ನಾಡಿಗೇರ ಕೃಷ್ಣರಾಯ, ಕುಮಾರ ವೆಂಕಣ್ಣ ಮೊದಲಾದವರು ಭಾಗವಹಿಸಿ ಮಾತನಾಡಿದರೆಂದು ನೆನಪು.

ಮೆಟ್ರಿಕ್ ಪಾಸಾದೊಡನೆ ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸೇರಿಕೊಂಡೆ. ಕಾಲೇಜಿನ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಭಾಗ ವಹಿಸುತ್ತಿದ್ದೆ. 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ ದೊರೆ ಯಿತು. ಮಾಳಮಡ್ಡಿಯ ಒಂದು ಕೋಣೆಯಲ್ಲಿ ಬಾಡಿಗೆಗಿದ್ದ ನಾನು ಒಂದು ರಾತ್ರಿ ಗೆಳೆಯರೊಡನೆ ತಿರುಗಾಡಿದ್ದೇ ತಿರುಗಾಡಿದ್ದು. ಕೆಲದಿನ ಗಳಲ್ಲಿ, ಕರ್ನಾಟಕ ಕಾಲೇಜಿನ ಮೈದಾನದಲ್ಲಿ, ದಿವಾಕರ ಅವರ ಅಧ್ಯಕ್ಷತೆ ಯಲ್ಲಿ ದೊಡ್ಡ ವಿಜಯೋತ್ಸವದ ಸಾರ್ವಜನಿಕ ಸಭೆೆ- ಅಂದು ನಾನು ‘ಆಗಸ್ಟ್ 15’ ಎಂಬ ಕವಿತೆಯನ್ನು ವಾಚನ ಮಾಡಿದ್ದೆ. ಸಾರ್ವಜನಿಕ ಸಮಾರಂಭದಲ್ಲಿ ನಾನು ಕಾವ್ಯ ವಾಚನ ಮಾಡಿದ್ದು ಅದೇ ಮೊದಲು. ನನ್ನ ಜೊತೆಗೆ ಪ್ರೊ. ಅರ್ಮಾಂಡೋ ಮೆನೆಜಿನ್ ಅವರೂ ಇಂಗ್ಲಿಷ್‌ನಲ್ಲಿ ‘ವಂದೇ ಮಾತರಂ’ ಎಂಬ ಕವಿತೆಯನ್ನೋದಿದರು. ನನ್ನ ಕಾವ್ಯವಾಚನ ಅಂದಿನ ಸಭೆಯ ವಿದ್ಯಾರ್ಥಿಗಳಲ್ಲಿ ಸಂಚಲನವನ್ನುಂಟು ಮಾಡಿತ್ತು.

ನಾನು ಕಾಲೇಜಿನಲ್ಲಿದ್ದಾಗಲೇ ನನ್ನ ಪ್ರಥಮ ಕವನಸಂಗ್ರಹ ‘ಕಾವ್ಯಾಕ್ಷಿ’ (1949) ಪ್ರಕಟವಾಯಿತು. ಅದಕ್ಕೆ ಬೇಂದ್ರೆಯವರು (ಆಗ ಅವರು ಸೊಲ್ಲಾಪುರದಲ್ಲಿದ್ದರು) ಮುನ್ನುಡಿ ಬರೆದು ಪ್ರೋತ್ಸಾಹಿಸಿದರು. ಮರುವರ್ಷ ಎರಡನೆಯ ಖಂಡಕಾವ್ಯಕ್ಕೆ (‘ಭಾವಜೀವಿ’) ಕೊಲ್ಲಾಪುರ ದಿಂದ ಪ್ರೊ.ಗೋಕಾಕರು ಮುನ್ನುಡಿಯಿತ್ತರು. ಎರಡೂ ಮುನ್ನಡಿಗಳು ನನ್ನ ಕಾವ್ಯ ಜೀವನಕ್ಕೆ ಮಾರ್ಗದರ್ಶಕವಾಗಿದ್ದವು.

1952ನೇ ಇಸವಿ ನನ್ನ ಜೀವನದಲ್ಲಿ ಬಹಳ ಮಹತ್ವದ್ದು, ಅದೇ ವರ್ಷ ನಾನು ಎಂ.ಎ. ಪಾಸಾಗಿ ಶಾಂತಾದೇವಿಯವರನ್ನು ಮದುವೆಯಾದದ್ದು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆಗಷ್ಟೇ ಪ್ರಾರಂಭವಾಗಿದ್ದ ವ್ಯಾಸಂಗ ವಿಸ್ತರಣ ಮತ್ತು ಪ್ರಕಟನ ವಿಭಾಗದಲ್ಲಿ (ಇದೇ ಮುಂದೆ ‘ಪ್ರಸಾರಾಂಗ’ ಎಂದು ಹೆಸರು ಪಡೆಯಿತು) ಉದ್ಯೋಗಕ್ಕೆ ಸೇರಿದ್ದು. ಮೊದಲು ಕಾರ್ಯದರ್ಶಿಯಾಗಿ ಆಮೇಲೆ ನಿರ್ದೇಶಕನೆಂದು ಭಡ್ತಿ ಪಡೆದೆ(1956). ಮೊದಲು ಕುಲಪತಿಯಾಗಿ ಆಯ್ಕೆಯಾದವರು ಸಿ.ಸಿ. ಹುಲಕೋಟಿಯವರು. 1954ರಿಂದ ಡಾ.ಡಿ.ಸಿ. ಪಾವಟೆಯವರು ಕುಲಪತಿಯಾಗಿ ಬಂದಾಗಿನಿಂದ ವಿಶ್ವವಿದ್ಯಾನಿಲಯಕ್ಕೆ ಭದ್ರವಾದ ಬುನಾದಿ ದೊರೆಯಿತು. ಡಾ.ಪಾವಟೆಯವರು ಹಿಂದಿನ ಮುಂಬೈ ರಾಜ್ಯದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದರಿಂದ ವಿವಿಧ ರಾಜ್ಯಗಳ ವಿದ್ವಾಂಸ-ಪ್ರಾಧ್ಯಾಪಕರ ಹಾಗೂ ಶಿಕ್ಷಣ ತಜ್ಞರ ಸಂಪರ್ಕವಿದ್ದು, ಅದರಿಂದ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಭದ್ರವಾದ ತಳಹದಿ ಯ ಮೇಲೆ ಕಟ್ಟಲು ಅವರಿಗೆ ಅನುಕೂಲವಾಯಿತು. ಅವರಿಂದ ಮೊದಲ್ಗೊಂಡು ಮುಂದೆ ಬಂದ ಕುಲಪತಿಗಳೆಲ್ಲರೂ ವಿಶ್ವವಿದ್ಯಾನಿಲಯಕ್ಕೆ ಬೋಧನಾಂಗ, ಸಂಶೋಧನಾಂಗದಂತೆ ಪ್ರಸಾರಾಂಗದ ಮಹತ್ವವೂ ತಿಳಿದಿದ್ದರಿಂದ ಎಲ್ಲರೂ ಪ್ರಸಾರಾಂಗವನ್ನು ಬೆಳೆಸಲು ಪ್ರಯತ್ನಿಸಿದರು. ಜೊತೆಗೆ ಸಮಕಾಲೀನ ಮಹತ್ವದ ಕವಿಗಳಲ್ಲಿ ಒಬ್ಬನೆಂದು ನನ್ನನ್ನು ಗುರುತಿಸಿ, ವೈಯಕ್ತಿಕವಾಗಿ ನನ್ನ ಸೃಜನಶೀಲತೆಯನ್ನು ಪೋಷಿಸಲು ಪ್ರಯತ್ನಿಸಿದರು. ನಾನು 1983ರಲ್ಲಿ ನಿವೃತ್ತನಾದೆ. ನಾನು ನಿವೃತ್ತನಾಗುವ ಪೂರ್ವದಲ್ಲಿ, ಒಂದೆರಡು ವರ್ಷ ನನ್ನ ಪ್ರಸಾರಾಂಗದ ಕೆಲಸದ ಜೊತೆಗೇ ಕನ್ನಡ ವಿಭಾಗದ ಗೌರವ ಸಂದರ್ಶಕ ಪ್ರಾಧ್ಯಾಪಕನಾಗಿ ನೇಮಕಗೊಂಡೆ. ಆಗ ಡಾ.ಡಿ.ಎಂ. ನಂಜುಡಪ್ಪನವರು ಕುಲಪತಿಗಳಾಗಿದ್ದರು.

ಒಕ್ಕುಂದ: ತಮ್ಮ ಬದುಕು ಮತ್ತು ಸೃಜನಶೀಲತೆಗಳ ಬಹುದೊಡ್ಡ ಗುಣ ಮತ್ತು ದಾರ್ಶನಿಕತೆ ಎಂದರೆ ಸಮತೋಲನ. ಅದು ಹೇಗೆ ಸಾಧ್ಯ ವಾಯಿತು?

ಚೆನ್ನವೀರ ಕಣವಿ: ಅದಕ್ಕೆ ನನ್ನ ಸ್ವಭಾವವೇ ಕಾರಣ. ನಾನು ಬದುಕಿದ್ದು ಪ್ರಾಥಮಿಕ ಶಾಲಾ ಮಾಸ್ತರನ ಮಗನಾಗಿ, ನಮ್ಮ ತಂದೆ ‘ಜ್ಞಾನಸಿಂಧು’ ಮಹಲಿಂಗರಂಗನ ‘ಅನುಭವಾಮೃತ’, ನಿಜಗುಣ ಶಿವಯೋಗಿ, ಬಾಲ ಲೀಲಾ ಮಹಾಂತ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಮೊದಲಾದ ವರ ತತ್ವಪದಗಳನ್ನು (ಅನುಭವದ ಹಾಡುಗಳು) ಓದುತ್ತಿದ್ದರು. ಗುರು ಗಳಿಂದ ದೀಕ್ಷೆ ಪಡೆದು, ಇಷ್ಟಲಿಂಗದ ಪೂಜೆಯ ಹೊರತು ಅವರು ಯಾವ ಗುಡಿ ಗುಂಡಾರಗಳಿಗೂ ಹೋಗುತ್ತಿರಲಿಲ್ಲ. ಭೌತಿಕವಾಗಿ ಎಲ್ಲ ವ್ಯವಹಾರ ಮಾಡುತ್ತಿದ್ದರೂ ಒಳಗೆ ಆಧ್ಯಾತ್ಮಿಕ ಸೆಳೆತವಿತ್ತು. ನಮ್ಮ ಊರಿನ ಎರಡು- ಮೂರು ತಲೆಮಾರಿನವರಿಗೆ ಶಿಕ್ಷಣ ನೀಡಿದ್ದರಿಂದ ಜನ ಇವರಿಗೆ ಹೆಚ್ಚು ಗೌರವ ತೋರಿಸುತ್ತಿದ್ದರು.ಹೊಲ-ಮನೆಗಳಿಲ್ಲದೇ ಬರೀ ಪಗಾರದ ಮೇಲೆ ಮನೆತನ ನಡೆಸು ತ್ತಿದ್ದರು. ನಮ್ಮ ತಾಯಿ ಮನೆಗೆಲಸಗಳನ್ನೆಲ್ಲ ಚೊಕ್ಕಟ ವಾಗಿ ಮಾಡುತ್ತಿದ್ದರು. ನಾವು ನಾಲ್ಕು ಜನ ಅಣ್ಣತಮ್ಮಂದಿರು. ನಾನೇ ಚಿಕ್ಕವ ನಾದ್ದರಿಂದ ಎಲ್ಲರೂ ಅಕ್ಕರೆಯಿಂದ ಕಾಣುತ್ತಿದ್ದರು. ಸರಳತೆ ಮೊದಲಿ ನಿಂದಲೂ ರೂಢಿಯಾಗಿತ್ತು. ನಮ್ಮ ಊಟದ ಬಗ್ಗೆ - ಬಿಸಿ ‘‘ಬಿಸಿ ರೊಟ್ಟಿ, ಸಪ್ಪನ್ ಬೇಳೆ, ಅಕ್ಕಿಮಮ್ಮು’’ ಎಂದು ಜನ ತಮಾಷೆ ಮಾಡುತ್ತಿದ್ದರು. ನನ್ನ ಪೂರ್ತಿ ವಿದ್ಯಾರ್ಥಿ ಜೀವನ ವನ್ನು ಸ್ಕಾಲರ್‌ಶಿಪ್ ಹಣದಿಂದಲೆ ಪೂರೈಸಿದೆನೆಂಬ ತೃಪ್ತಿಯಿದೆ ನನಗೆ. ಗ್ರಾಮೀಣ ಜೀವನದ ಕಷ್ಟ-ಸುಖಗಳನ್ನು ಪ್ರತ್ಯಕ್ಷ ಕಂಡಿದ್ದೆ. ಬಡತನದಲ್ಲೇ ಹೇಗೆ ಹಂಚಿಕೊಂಡು ಬದುಕಬೇಕು ಎನ್ನುವುದನ್ನು ನನಗೆ ಬದುಕೇ ಕಲಿಸಿತು. ಮುರುಘಾಮಠದಲ್ಲಿದ್ದಾಗ ಶಿಸ್ತು, ಸ್ವಾವಲಂಬನೆ ಮೈಗೂಡಿತು. ವಚನಸಾಹಿತ್ಯದ ಅಭ್ಯಾಸ, ಕಾವ್ಯಾಭ್ಯಾಸ - ಒಟ್ಟಿನಲ್ಲಿ ಸಾಹಿತ್ಯದ ಅಭ್ಯಾಸ ನನಗೆ ಸಮಾಧಾನಿಯಾಗಿರಬೇಕು, ಜೀವನದಲ್ಲಿ ಸಮತೋಲನ ಸಾಧಿಸಬೇಕು ಎಂಬುದನ್ನು ಕಲಿಸಿರಬೇಕು. ನನ್ನಲ್ಲಿ ಗುಣಸ್ವೀಕಾರ ದೃಷ್ಟಿ ಮೊದಲಿನಿಂದಲೂ ಇದೆ. ಎಂಥ ಕೆಟ್ಟ ಮನಷ್ಯನಿಂದಲೂ ಒಂದಾದರೂ ಗುಣ ಕಲಿಯುವುದಿದೆ. ಇದರಿಂದಲೇ ಸಮತೋಲನ ಬಂದಿರಬೇಕು. ಅದನ್ನೇ ನೀವು ದೊಡ್ಡದಾಗಿ ಭಾವಿಸಿ ‘ದಾರ್ಶನಿಕತೆ’ ಎಂದಿರಬೇಕು.

► ಒಕ್ಕುಂದ : ವರ್ತಮಾನದ ಅ�

Writer - ಸಂದರ್ಶನ: ಎಂ.ಡಿ. ಒಕ್ಕುಂದ

contributor

Editor - ಸಂದರ್ಶನ: ಎಂ.ಡಿ. ಒಕ್ಕುಂದ

contributor

Similar News