ರಾಹುಲ್‌ ಗಾಂಧಿ ವಿಶ್ಲೇಷಣೆ ಹಾಸ್ಯಾಸ್ಪದ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Update: 2019-03-09 13:18 GMT

ಬೆಂಗಳೂರು, ಮಾ.9: ‘ಆರೆಸೆಸ್ಸ್ ಜೊತೆ ಇರುವ ಬಿಜೆಪಿ, ಜನಸಾಮಾನ್ಯರ ಜೊತೆ ಕಾಂಗ್ರೆಸ್’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಮಾಡಿರುವ ವಿಶ್ಲೇಷಣೆ ಅವರ ಅಪಕ್ವ ಮತ್ತು ಹಾಸ್ಯಾಸ್ಪದ ಹೇಳಿಕೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕಿಸಿದ್ದಾರೆ.

ಜನಸಾಮಾನ್ಯರೊಂದಿಗಿರುವ ಕಾಂಗ್ರೆಸ್ ಪಕ್ಷವು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವುದು ಕೇವಲ 44 ಸ್ಥಾನಗಳು ಮಾತ್ರ. ಅತೀ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಿಜವಾಗಿಯೂ ಜನಸಾಮಾನ್ಯರ ಪಕ್ಷವಾಗಿ ಹೊರಹೊಮ್ಮಿದೆ. ಎಷ್ಟೇ ಅಪಪ್ರಚಾರ, ಸುಳ್ಳು ಹೇಳಿದರೂ ದೇಶದ ಜನರನ್ನು ಕಾಂಗ್ರೆಸ್ ಮರುಳು ಮಾಡಲಾಗದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರಕಾರವಿದ್ದರೂ, ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ತಮ್ಮ ಪಕ್ಷವನ್ನು ಮಾತ್ರವೇ ಜನಸಾಮಾನ್ಯರ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿರುವುದು ಜೆಡಿಎಸ್ ಮೈತ್ರಿಯಿಂದ ಹೊರಬರುವ ತಯಾರಿಯೇ ಎನ್ನುವ ಅನುಮಾನ ಹುಟ್ಟು ಹಾಕಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ರೈತರಿಗೆ ವರ್ಷಕ್ಕೆ 6 ಸಾವಿರ ರೂ.ಗಳನ್ನು ನೀಡುವ ಪ್ರಧಾನಿ ಮೋದಿಯನ್ನು ಟೀಕಿಸುವ ರಾಹುಲ್, ರೈತರಿಗೆ ಯಾವ ಪರಿಹಾರವೂ ಸಿಗಬಾರದು ಎನ್ನುವ ನಿಲುವನ್ನು ಪ್ರತಿಪಾದಿಸಿದ್ದಾರೆ. ವರ್ಷಕ್ಕೆ 75 ಸಾವಿರ ಕೋಟಿ ರೂ.ನಂತೆ ನಿರಂತರವಾಗಿ ರೈತರಿಗೆ ನೆರವು ನೀಡುವ ಮೋದಿ ಅವರು ಲಾಲಿಪಾಪ್ ನೀಡಿದ್ದಾರೆನ್ನುವ ರಾಹುಲ್ ಗಾಂಧಿ ರಾಜ್ಯದ ಸಾಲಮನ್ನಾ ಘೊಷಣೆಯನ್ನು ಮಾತ್ರವೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಜೈಷೆ ಸಂಘಟನೆ ಮಸೂದ್ ಅಝರ್‌ನನ್ನು ಕಂದಹಾರ್‌ಗೆ ಬಿಟ್ಟು ಬಂದರೆಂದು ಟೀಕಿಸುವ ರಾಹುಲ್, ಮಸೂದ್ ಅಝರ್, ದಾವೂದ್ ಇಬ್ರಾಹೀಂ, ಕಸಬ್ ಮುಂತಾದವರನ್ನು ಬೆಳೆಸಿದ್ದೇ ಕಾಂಗ್ರೆಸ್ ಎನ್ನುವುದನ್ನು ಮರೆತಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News