ಆಧುನಿಕ ಭಾರತದಲ್ಲಿ ಮಹಿಳಾ ಶಕ್ತಿ

Update: 2019-03-09 13:19 GMT

ಆಧುನಿಕ ಭಾರತದಲ್ಲಿ ಮಹಿಳಾ ಶಕ್ತಿ ಎಂಬ ಪದ ತೂಕದ ಅರ್ಥ ವನ್ನು ಕೊಡುತ್ತದೆ. ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದ ಏಕಾಂಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಗಳು ಪ್ರಸ್ತುತ ಪುರುಷ ಪ್ರಧಾನ ರಾಷ್ಟ್ರ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿಗಿಂತಲೂ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಗಾಂಧೀಜಿಯವರ ದೂರಾಲೋಚನೆಗೆ ಇಂಬು ಎಂಬಂತೆ ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ಒಂದು ರತ್ನವಾಗಿ ಹೊಳೆಯುತ್ತಿದ್ದಾಳೆ. ಎಷ್ಟರ ಮಟ್ಟಿಗೆ ಎಂದರೆ ಬರೀ ಪುರುಷರೇ ಅಧ್ಯಕ್ಷ ಗಾದಿ ಏರುತ್ತಿದ್ದ ದೇಶಗಳಲ್ಲಿ ನಾವೂ ಏನು ಕಮ್ಮಿ ಇಲ್ಲ ಎಂದು ತೋರಿಸಿ ಉತ್ತಮವಾದ ಆಡಳಿತ ನಡೆಸಿದ್ದಾರೆ. ಪ್ರಾಚೀನ ಕಾಲದಲ್ಲಿ ಬರೀ ಭೋಗದ ವಸ್ತುವಾಗಿ ಕ್ರಮೇಣ ಅಡುಗೆ ಮನೆಗೇ ಮೀಸಲಾಗಿ ತನ್ನ ಸರ್ವಸ್ವವನ್ನೆಲ್ಲಾ ನಾಲ್ಕು ಗೋಡೆಗಳ ನಡುವೆಯೇ ಜೀವಿಸುತ್ತಿದ್ದವಳು ಇಂದು ಆಕಾಶದಲ್ಲಿ ಹಾರಾಡುತ್ತಿದ್ದಾಳೆ. ಗಡಿಯಲ್ಲಿ ಶತ್ರುಗಳ ಜೊತೆ ಕಾದಾಡುತ್ತಿದ್ದಾಳೆ.

ಮಹಿಳೆ ಎಂದರೆ ಯಾರು? ಅವಳ ಉಗಮ ಹೇಗಾಯಿತು ಎಂದು ತಿಳಿಯುವುದಾದರೆ?. ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ‘ಹೆಣ್ಣು’ ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀ ಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹು ದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆ ಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ. ಬಾಹ್ಯ ಶರೀರ ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ.

ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ - ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ಧ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ.

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತವೆೆ. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡ ಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ, ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಛಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.

ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯ ಕಾರಣ ಶಿಕ್ಷಣ. ಇಂದಿನ ಶಿಕ್ಷಣದಲ್ಲಿ ಮಹಿಳೆ ಕಲಿತು ತನ್ನ ಸ್ವಂತ ಬಲದಿಂದ ಬದುಕುವಂತವಳಾಗಿದ್ದಾಳೆ. ಈ ಪ್ರಯತ್ನಕ್ಕೆ ಕಾಣದ ನೂರಾರು ಜನ ಕುಸುರಿ ಗಾರರಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವೀ ರಾಜಕಾರಣಿಯಾಗಿ ಇವರು ಹತ್ತು ವರ್ಷಗಳಿಗೂ ಮಿಕ್ಕು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಾರೆ. ಸಂಸತ್ತಿನಲ್ಲಿರುವ ಏಕೈಕ ಮಹಿಳೆ ಇಂದಿರಾಗಾಂಧಿ ಎಂದು ಕರೆಸಿಕೊಂಡಿದ್ದರೆ ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತುರಾಜಕೀಯ ಕುಟುಂಬದಲ್ಲಿ ಹುಟ್ಟಿಬೆಳೆದು ಅವರು ನಿಕಟವಾಗಿ ರಾಜಕೀ ಯದ ಒಳಹೊರಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆ ಕಾರಣ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮಾಯಾವತಿ ಯಶಸ್ವಿ ರಾಜಕಾರಣಿ. ಆದರೆ ಇದಕ್ಕೆ ಅವರ ಜಾತಿ ಅಥವಾ ಮೀಸಲಾತಿ ಮಾತ್ರ ಕಾರಣವಲ್ಲ. ಅವರು ಪಡೆದಿರುವ ಉತ್ತಮ ಶಿಕ್ಷಣವೂ ಕಾರಣ.ಐಎಎಸ್ ಅಧಿಕಾರಿಣಿಯಾಗಬೇಕೆಂದು ಬಯಸಿದ್ದ ಅವರು ರಾಜಕೀಯ ಕ್ಕೆ ಇಳಿದದ್ದು ಕಾಕತಾಳೀಯ. ಸುಶಿಕ್ಷಿತ ಮಹಿಳಾ ರಾಜಕಾರಣಿಗಳುಮತ್ತು ಇತರ ರಾಜಕಾರಣಿಗಳ ಕಾರ್ಯವೈಖರಿಯನ್ನು ಗಮನಿಸಿ ದಾಗ ಮೀಸಲಾತಿ ಬರಿಯ ಸ್ಥಾನವನ್ನು ಗಿಟ್ಟಿಸಲು ಮಾತ್ರ ಸಹಾಯಕ ವಾಗುತ್ತದೆ ಎಂಬ ಅಂಶ ವೇದ್ಯವಾಗುತ್ತದೆ.

ಶಿಕ್ಷಣ ಎಂದು ಬಂದಾಗ ಮೊದಲು ನೆನಪಿಗೆ ಬರುವುದು ಪರಮ ಪೂಜ್ಯ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ತಾಯಿ ಸಾವಿತ್ರಿ ಬಾಫುಲೆ

ಇವರು. ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳವಳಿ ಸಂಘಟನೆಗಳನ್ನು ಸಂಘಟಿಸಿದರು. 1848 ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿಸಾವಿತ್ರಿ ಬಾಫುಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಸಾವಿತ್ರಿಬಾಫುಲೆ ಮೊತ್ತ ಮೊದಲ ಮಹಿಳಾ ಶಿಕ್ಷಕಿ, ವಿದ್ಯೆ ಕೊಟ್ಟ ಸರಸ್ವತಿ. ಮಹಿಳಾ ಶಿಕ್ಷಣದ ಬಗ್ಗೆ ಮೊತ್ತ ಮೊದಲಿಗೆ ರೂಢಿಗತ, ಸಾಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ್ದಷ್ಟೇ ಅಲ್ಲ ವಿಧವಾ ವಿವಾಹವನ್ನು ಎತ್ತಿ ಹಿಡಿಯುತ್ತ ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಟಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವದಲ್ಲಿ ತಂದ ಧೀಮಂತ ವ್ಯಕ್ತಿತ್ವ ಜ್ಯೋತಿಬಾಫುಲೆ ಅವರದು. ಮಹಿಳೆಯನ್ನು ಕುರಿತು ಸ್ವಾತಂತ್ರ ಪೂರ್ವದಲ್ಲಿ ರೂಢಿಯಲ್ಲಿದ್ದ ಮನುಸ್ಮತಿಯಲ್ಲಿ ಅನಿಷ್ಟ ವೈಚಾರಿಕತೆಯ ಮನು ಎಂಬವನು ಹೀಗೆ ನುಡಿದಿದ್ದಾನೆ.-‘‘ಮಾತ್ರಾಸ್ಪಸ್ತ್ರಾ ಮಹಿತ್ರಾವಾದ ವಿವಿಕ್ತಸನೋ ಭವೇತ’’ ‘‘ಬಲವಾನಿಂದ್ರಿಯ ಗ್ರಾಮೋವಿದ್ವಾಂಸಮಡಿಕರ್ಷತಿ’’ ಮನುವಿನ ದೃಷ್ಟಿ ಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು. ಗುಲಾಮ ಳಾಗಿಯೇ ಅವಳು ಸಮಾಜದಲ್ಲಿ ಮುಂದುವರಿಯಬೇಕಿತ್ತು. ಅವಳು ಅಕ್ಷರ ಲೋಕ ಪ್ರವೇಶ ಮಾಡಿದರೆ ಅವಳು ತೃತೀಯ ಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು ಮುಂದುವರಿದರೆ ಸ್ವಂತ ವಿಚಾರ ಮಾಡುವುದನ್ನು ಕಲಿಯುತ್ತಾಳೆ. ಈ ಮಹಿಳಾ ಸಬಲೀಕರಣ ಮನುವಿಗೆ ಬೇಡವಾಗಿತ್ತು.

ಡಾ. ಅಂಬೇಡ್ಕರ್‌ರವರ ಮಹಿಳಾ ಪರ ಆಲೋಚನೆ

ಡಾ.ಬಿ.ಆರ್.ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ, ಅವಳ ಉಜ್ವಲ ಭವಿಷ್ಯವನ್ನು ಕುರಿತು ಸಾಂವಿಧಾನಿಕ ವಾಗಿ ಚಿಂತಿಸಿದರು. ಅವರು ಚುನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದು ಕೋಡ್ ಬಿಲ್‌ನ್ನು ಮಂಡಿಸುವುದರ ಮೂಲಕ, ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು. ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಆಸ್ತಿ ಹಕ್ಕಿನ ಕುರಿತು ಗೌತಮ ಬುದ್ಧ, ಜ್ಯೋತಿಬಾಫುಲೆ, ಮುಂತಾದ ಮಹಾತ್ಮರು ಸಂದರ್ಭಾನುಸಾರವಾಗಿ ಮಾತಾಡಿದ್ದರು. ಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದ ಡಾ.ಬಾಬಾಸಾಹೇಬರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಕುರಿತು ಮಹತ್ವಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾ ಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿ ಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವ ಗೌರವವೆಂದೇ ತಿಳಿದುಕೊಳ್ಳಬೇಕಾಗುತ್ತದೆ.

ಜಾಗತೀಕರಣದಿಂದ ಮಹಿಳೆ ಅನೇಕ ಪ್ರಯೋಜನ ಪಡೆದಿದ್ದರೂ, ಶೋಷಣೆಯಿಂದ ಮುಕ್ತವಾಗಿಲ್ಲ. 2011ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ. ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15 ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6 ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ.

ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರ ಬೇಕಾದರೆ, ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರ ಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು. ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು. ಆದರೆ, ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವು ದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇ ಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.

ಮಹಿಳಾ ಪರ ಹಕ್ಕುಗಳು

21ನೇ ಶತಮಾನದಲ್ಲಿ ಮೂಲಭೂತ ಹಕ್ಕು, ಸ್ವಾತಂತ್ರದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಈ ಎಲ್ಲವೂ ಆಕೆಗೆ ತಿಳಿದಿದೆೆ. ಸಂವಿಧಾನದಲ್ಲಿ ಮಹಿಳೆಗೆ ಮೀಸಲಾತಿಯೂ ದೊರೆತಿದೆ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ.

ಸಂವಿಧಾನದಲ್ಲೂ ವಿಧೇಯಕ ಮಂಡನೆಗಳು ತಿದ್ದುಪಡಿ ಯಾಗಿ ಶೇ.22ರಷ್ಟು ರಿಯಾಯಿತಿಯನ್ನು ನೀಡುವ ಕಾನೂನು ಜಾರಿಗೆ ಬಂದಾಗಿದೆ. ನಾಗರಿಕ ಸಮಾಜದಲ್ಲಿ ಮಹತ್ತರ ಬದಲಾವಣೆ ನಡೆಯುತ್ತಿದ್ದರೂ ಹೆಣ್ಣುಮಕ್ಕಳ ಶೋಷಣೆ ತಪ್ಪಿಸಲಾಗಿಲ್ಲ. ಬಲವಾದ ಕಾನೂನುಗಳ ನೆರವಿದ್ದರೂ ಪ್ರಸ್ತುತ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.

ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ಅಧಿಕಾರಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾ ಗಬೇಕಿರುವ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಇತ್ತೀಚಿನ ಸಮೀಕ್ಷಾ ವರದಿಯೊಂದರ ಪ್ರಕಾರ, ಭಾರತದಲ್ಲಿ ಚುನಾವಣೆ ಎದುರಿಸುವ ಶೇ.49ರಷ್ಟು ಮಹಿಳಾ ಅಭ್ಯರ್ಥಿಗಳು ಒಂದಲ್ಲ ಒಂದು ವಿಧದಲ್ಲಿ ಬೈಗುಳ, ನಿಂದನೆಗಳನ್ನು ಎದುರಿಸಿದ್ದಾರೆ.

ಮಹಿಳೆಯನ್ನು ಲೈಂಗಿಕವಾಗಿ ಅಪೇಕ್ಷಿಸುವುದು ಅಥವಾ ಆಕೆಗೆ ಸಾರ್ವಜನಿಕ ಬೆಂಬಲವನ್ನು ಕಡಿಮೆಮಾಡುವ ಉದ್ದೇಶ ದಿಂದ ಆಕೆಯ ಚಾರಿತ್ರ ಹರಣ ಮಾಡುವಂತಹ ಪ್ರಯತ್ನಗಳು ರಾಜಕೀಯದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿವೆ. ಇವು ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿನ ರಾಜಕೀಯದಲ್ಲಿ ಮಹಿಳೆ ವಿರುದ್ಧ ನಡೆಯುವ ಹಿಂಸೆಯ ಸ್ವರೂಪಗಳಲ್ಲಿ ಕೆಲವು ಎಂದು ಈ ಸಮೀಕ್ಷೆ ಹೇಳಿದೆ.

ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲ್ಪಡುತ್ತದೆ. ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಬಂಡವಾಳಶಾಹಿ ಶೋಷಣೆಯ ವಿರುದ್ಧ ಮಹಿಳಾ ವಿಮೋಚನೆಗಾಗಿ ನಡೆದ ಸಮಾಜವಾದಿ ಹೋರಾಟದ ಪರಂಪರೆ ಎನ್ನುವುದನ್ನು ಮರೆಯಬಾರದು.

ನೂರ ಮೂರು ವರ್ಷಗಳ ಹಿಂದೆ 1910ರ ಆಗಸ್ಟ್ 27ರಂದು ಕ್ರಾಂತಿಕಾರಿ ನಾಯಕರಾದ ಕ್ಲಾರಾ ಜೆಟ್ಕಿನ್ ಅವರ ಸಂಗಾತಿಗಳಾದ ಅಲೆಕ್ಸಾಂಡ್ರಿಯಾ ಕೊಲಾಂಥೈ ಮತ್ತು ಇತರರೊಂದಿಗೆ ಕೊಪನ್ಹೇಗನ್ನಲ್ಲಿ ಸಂಘಟಿಸಿದ್ದ ಅಂತರ್‌ರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ‘ಅಂತರ್‌ರಾಷ್ಟ್ರೀಯ ಮಹಿಳಾ ದಿನ’ ಆಚರಿಸುವ ಕುರಿತ ನಿರ್ಣಯ ಮಂಡಿಸಿದರು. ಆ ನಂತರ ಅಮೆರಿಕದಲ್ಲಿ ಸಮಾಜವಾದಿ ಮಹಿಳೆಯರು ಅದಾಗಲೆ 1908ರಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಮೊತ್ತಮೊದಲು ಆಚರಿಸಿದರು.

ಭಾರತದಲ್ಲಿ ಮೊದಲ ಬಾರಿಗೆ 1931ರಲ್ಲಿ ಲಾಹೋರ್‌ನಲ್ಲಿ ಸಂಘಟಿಸಿದ್ದ ‘ಸಮಾನತೆಗಾಗಿ ಏಶ್ಯಾದ ಮಹಿಳಾ’ ಸಮಾವೇಶದಲ್ಲಿ ಈ ದಿನಾಚರಣೆ ಆಚರಿಸಲಾಯಿತು. ಮಹಿಳೆಯರಿಗೆ ಸಮಾನತೆ ನೀಡ ಬೇಕೆಂಬುದರ ಜೊತೆಗೆ ಮಹಿಳೆ ಯರ ಸಮಾನತೆಯನ್ನು ದೇಶಗಳ ಸ್ವಾತಂತ್ರ ಗಳೊಂದಿಗೂ ಜೊತೆಗೂಡಿಸಲಾಯಿತು. ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಬಂಡವಾಳಶಾಹಿ, ಪುರುಷ ಪ್ರಧಾನ ಸಮಾಜದಸಂಕೋಲೆಗಳ ವಿರುದ್ಧ ಮತ್ತು ಮಹಿಳಾ ಉನ್ನತೀಕರಣದ ಸಂಕೇತವಾಗಿದೆ. ಭಾರತದಲ್ಲಿ ಇತ್ತೀಚೆಗೆ ಮಹಿಳೆಯರು ವಾಸಿಸಲು ಅಪಾಯಕಾರಿ ವಾತಾವರಣ ನಿರ್ಮಾಣವಾಗು ತ್ತಿರುವ ಕಾರಣ ಹೆಚ್ಚು ಗಮನಾರ್ಹವಾದ ವಿಷಯವಾಗಿದೆ. ಈ ಆಘಾತಕಾರಿ ವಿಷಯ 2011ರಲ್ಲಿ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಒಂದು ಸಮೀಕ್ಷೆಯನ್ನು ಮಾಡಿ ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಾಸ್ತವವನ್ನು ತೆರೆದಿಟ್ಟಿದೆ.

► ಯಶಸ್ವಿ ಮಹಿಳೆಯರು

 

ಯಶಸ್ವಿ ಮಹಿಳೆಯರು ಎಂದು ಬಂದಾಗ ಚಾರಿತ್ರಿಕವಾಗಿ ಹಲವಾರು ಮಹಿಳೆಯರು ಯಶಸ್ಸು ಸಾಧಿಸಿದ್ದಾರೆ ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಇವರು ಆಪತ್ಕಾಲದಲ್ಲಿ ಗದ್ದುಗೆ ಹಿಡಿದು ರಾಜ್ಯಾಡಳಿತ ಸೂತ್ರಗಳನ್ನು ಅರಿತು ಯಶಸ್ವಿಯಾಗಿ ಆಡಳಿತ ನಡೆಸಿ ಹೆಸರುವಾಸಿಯಾದವರು. ಆಧುನಿಕತೆಯ ಮಗ್ಗುಲಲ್ಲಿ ನಿಲ್ಲುವುದಾದರೆ ಇಂದಿನ ಸಮಾಜದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಸಬಲರಾಗಿದ್ದಾರೆ. ರಾಜಕೀಯದಲ್ಲಿ ಇಂದಿರಾಗಾಂಧಿ ಪ್ರಥಮ ಮಹಿಳಾ ಪ್ರಧಾನಿ ಎಂಬ ದಾಖಲೆಯೊಂದಿಗೆ ಹೆಣ್ಣು ಸಿಂಹದಂತೆ ಘರ್ಜಿಸಿ ದಶಕಗಳ ಕಾಲ ಮಹಾರಾಣಿಯಾಗಿ ಮೆರೆದರು. ಪ್ರತಿಭಾ ಪಟೇಲ್ ಪ್ರಥಮ ಮಹಿಳಾ ಅಧ್ಯಕ್ಷರಾದರು. ಉತ್ತರಭಾರತದ ಉಕ್ಕಿನ ಮಹಿಳೆ ಎಂದೇ ಹೆಸರುವಾಸಿಯಾದ ಮಾಯಾವತಿಯವರು ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಸುಮಾರು ಮೂರು ಬಾರಿ ಮಹಿಳಾ ಮುಖ್ಯಮಂತ್ರಿಯಾಗಿ ಸರ್ವಾಧಿಕಾರಿ ಆಡಳಿತ ನಡೆಸಿದರು.

ರಾಜಸ್ಥಾನದಲ್ಲಿ ವಸುಂಧರರಾಜೇಯವರು ದಶಕ ಗಳಿಗಿಂತಲೂ ಹೆಚ್ಚುಕಾಲ ಮುಖ್ಯಮಂತ್ರಿಯಾಗಿದ್ದರು. 4,500 ಉದ್ಯೋಗಸ್ಥರಿಗೆ ಆಶ್ರಯದಾತೆಯಾಗಿರುವ ಬಯೋಕಾನ್‌ನ ಒಡತಿ ಕಿರಣ್ ಮಜುಮ್ದೂರ್ ಶಾ ಕೇವಲ 10,000 ರೂಪಾಯಿಯೊಂದಿಗೆ ಏಕಾಂಗಿಯಾಗಿ ಸ್ಥಾಪಿಸಿದ ಸಂಸ್ಥೆ ಇಂದು ಜೈವಿಕ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಏಳನೆ ಸ್ಥಾನದಲ್ಲಿದೆ. ಇದರ ವಾರ್ಷಿಕ ಆದಾಯ 2,405 ಕೋಟಿ ರೂಪಾಯಿಗಳಷ್ಟು. ಬಟ್ಟೆ ತೊಳೆದುಕೊಂಡು, ಅಡುಗೆಮಾಡಿಕೊಂಡು, ಮಕ್ಕಳ ಆರೈಕೆ ಮಾಡುವವರೂ ಕೂಡ ಆಕಾಶದಲ್ಲಿ ಹಾರಾಡಬಹುದು ಎಂದು ತೋರಿಸಿ ಕೊಟ್ಟವರು ಕಲ್ಪನಾ ಚಾವ್ಲಾ. ದಕ್ಷಿಣದ ಐರನ್ ಲೇಡಿ ಎಂತಲೇ ಕರೆಸಿಕೊಳ್ಳುತ್ತಿದ್ದ ದಿ.ಜಯಲಲಿತಾ ರವರು ತಮಿಳುನಾಡಿನ ಅಮ್ಮನಾಗಿ ಸುಮಾರು ಐದು ಬಾರಿ ಮುಖ್ಯಮಂತ್ರಿಯಾಗಿ ಸುಸೂತ್ರವಾಗಿ ಆಡಳಿತ ನಡೆಸಿ ಸೈ ಎನಿಸಿಕೊಂಡರು.

ಮಾಹಿತಿ ತಂತ್ರಜ್ಞಾನದಲ್ಲಿ ಇನ್ಫೋಸಿಸ್ ನ ಬಹುದೊಡ್ಡ ಹೆಸರು. ದೇಶವಿದೇಶ ಗಳಲ್ಲಿ ತಮ್ಮ ಶಾಖೆಗಳನ್ನು ತೆರೆದು ಲಕ್ಷಾಂತರ ಜನರಿಗೆ ಉದ್ಯೋಗ ವನ್ನು ನೀಡಿದಲ್ಲದೆ ನಮ್ಮ ಭಾರತ ದೇಶಕ್ಕೆ ಕೀರ್ತಿಯನ್ನು ತಂದರು. ಇಂಥ ಸಂಸ್ಥೆಯನ್ನುಸ್ಥಾಪಿಸಿದ ಸುಧಾಮೂರ್ತಿಯವರು ದೇಶದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಅದೂ ಅವರು ನಮ್ಮ ಕರ್ನಾಟಕದವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಅವರು ಸ್ವತಃ ಲೇಖಕರೂ ಹೌದು. ಸಾಹಿತ್ಯ ಕ್ಷೇತ್ರದಲ್ಲೂ ಕೃಷಿಮಾಡಿ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದ ಕಾಲದಲ್ಲಿ ದೇಶದ ಅತ್ಯುನ್ನತ ಐ.ಪಿ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಥಮಾ ಮಹಿಳಾ ಪೋಲಿಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿಯವರು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.

Writer - ಮಹದೇವ್ ಬಿಳುಗಲಿ.

contributor

Editor - ಮಹದೇವ್ ಬಿಳುಗಲಿ.

contributor

Similar News