ಮಲೆನಾಡಿನ ಪ್ರಕೃತಿಯ ತಲ್ಲಣದೊಂದಿಗೆ, ಶಂಕರ್ ಸಿಹಿಮೊಗೆಯ ಸಾಹಿತ್ಯ

Update: 2019-03-09 13:29 GMT

               ಸೂರ್ಯಕೀರ್ತಿ

ಕನ್ನಡದ ಹೊಸ ಸಾಹಿತ್ಯ ಹಿನ್ನೆಲೆಯಲ್ಲಿ ಕಾವ್ಯಭಾಷೆ ಒಂದು ರೀತಿಯಲ್ಲಿ ಹೊಸಬಗೆಯ ಪ್ರಾಸ, ರೂಪಕ, ಉಪಮೆ, ಛಂದಸ್ಸುಗಳ ದಾಟಿ ತನ್ನದೇ ಆದ ಹೊಸ ಉಡುಪನ್ನು ಧರಿಸುವುದರಲಿ ಸಿದ್ಧವಾಗಿದೆ. ನವೋದಯದ ಕಾಲಘಟ್ಟದಿಂದ ಈಗೀನ ತಲೆ ಮಾರಿನವರೆಗೂ ಕೂಡ ಹೊಸ ಕಾವ್ಯದ ಸೃಷ್ಟಿ ಹೇಗೆ ಎಂಬುದು ಒಂದು ಸೃಜನಾತ್ಮಕತೆಯ ಕೌತುಕವಾಗಿದೆ.

ಪಂಪ ಹೇಳಿರುವಂತೆ ‘‘ಬಗೆ ಪೊಸತಪ್ಪುದಾಗಿ ಮೃದು ಬಂಧೂಳೊಂದು ವುದೊಂದಿ ದೇಸಿಯೊಳ್!.’’ಹೊಸ ಕಾವ್ಯ ಹುಟ್ಟುವ ವಿಚಾರದಲ್ಲಿ ಪಂಪನಿಗೂ ಹೊಸಕಾವ್ಯ ಕಟ್ಟುವ ಸಮಸ್ಯೆಯಿತ್ತು, ಕವಿರಾಜಮಾರ್ಗಕಾರ ವಿಮರ್ಶಿಸುವ ಕೆಲವು ಕವಿಗಳ ಗದ್ಯ ಪದ್ಯಗಳ ಸೂಕ್ಷ್ಮ ನಿರೂಪಣೆಯೊಂದಿಗೆ ಕಾವ್ಯಕ್ಕೆ ಕನ್ನಡಿಯನ್ನು ನೀಡುವ ಕೆಲಸವನ್ನು ಕವಿರಾಜಮಾರ್ಗಕಾರ ಮಾಡುತ್ತಾನೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹಲವು ಬಗೆಯ ಆಯಾಮಗಳೊಂದಿಗೆ ವಿಶಿಷ್ಟ ರೀತಿಯ ಸಾಹಿತ್ಯಘಟ್ಟಗಳು ತಲುಪಿ ಮತ್ತೆ ನವನವ್ಯತೆಯ ತೊಡುವ ಕುತೂಹಲದೊಂದಿಗೆ ಭಾರತೀಯ ಸಾಹಿತ್ಯದಲ್ಲಿ ಕನ್ನಡ ತನ್ನದೇ ಆದ ಛಾಪನ್ನು ಮುಡಿಗೇರಿಸಿಕೊಂಡಿದೆ.

ಮಲೆನಾಡು ಎನ್ನುವಾಗ ಮಳೆಯಿದೆ, ಕಾಡಿದೆ, ಪರಿಸರದ ಚಿತ್ರಣಗಳಿವೆ, ಪಕ್ಷಿಗಳ ಮಧುರಗಾನವಿದೆ, ಪ್ರಾಣಿಗಳ ರಾಜನಡೆಯಿದೆ, ಹೂವಿನ ಸುಮಧುರ ವಾದ ಘಮಲಿದೆ, ದೈತ್ಯಾಕಾರದ ಮರಗಿಡಗಳು ಬಾನೆತ್ತರಕ್ಕೆ ಬೆಳೆದು ನಿಂತಿರುವ ಆ ದೃಶ್ಯ ಕಣ್ಣಿಗೆ ಕಟ್ಟುವ ಅಕ್ಷಿಪಟಲದಂತೆ ಬಂದು ನಿಲ್ಲುತ್ತವೆ. ಇಷ್ಟೇ ಅಲ್ಲ! ಮಲೆನಾಡಿನ ಆಚಾರ ವಿಚಾರಗಳು, ಸಂಸ್ಕೃತಿ, ಭಾಷೆ, ಜನಜೀವನದ ಪ್ರತಿನಿತ್ಯದ ಬದುಕುಗಳೊಂದಿಗೆ ಕಟ್ಟುವ ಮನುಷ್ಯ ವೈವಿಧ್ಯಮಯವಾದ ರೂಪಣೆಯಿದೆ.

ವಸಾಹತುಗಳ ಧಾವಂತದಿಂದ ಗ್ರಾಮೀಣ ಬದುಕುಗಳು ಹೇಗೆ ನಗರೀಕರಣದ ಔಚಿತ್ಯಕ್ಕೆ ಮಣಿದು ಯುವ ಜನತೆಯೆಲ್ಲ ಮುನ್ನುಗ್ಗುವ ಹೊಸ ತಲೆಮಾರಿನ ಬದುಕನ್ನು ಮತ್ತು ಭಾರತಕ್ಕೆ ಭೂತವಾಗಿ ಆವರಿಸಿರುವ ಜಾಗತೀಕ ರಣ ಹಾಗೂ ಆಧುನೀಕರಣದಿಂದ ಆಗುತ್ತಿರುವ ಮಲೆನಾಡಿನ ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸಿಕೊಂಡು ಬರೆಯುತ್ತಿರುವ ಕವಿ ಶಂಕರ್ ಸಿಹಿಮೊಗೆ.

ತಿಳಿನೀರಿನ ಸಿಹಿತುಂಗೆಯು / ಮಳೆರಾಯನ ಆರ್ಭಟಕೆ

ಕಲ್ಮಶಗಳ ಹೊರನೂಕುತ/ ಕೆಂಬಣ್ಣದಿ ಸಾಗಿಹಳು

ಎಂಬ ಪದ್ಯದೊಂದಿಗೆ ತುಂಗೆಯ ಸ್ತನಪಾನವ ಮಾಡುವುದರ ಜೊತೆಗೆ ಅವಳ ಔದಾರ್ಯ, ಸಹನೆ, ಮಮತೆ, ಹರಿಯುವ ಆವೇಶ,ದುಃಖ ದುಮ್ಮಾನಗಳು, ಅವಳ ನೋವು ನಲಿವನ್ನು ಆಸ್ವಾದಿಸುವ ಕವಿ ಇವರಾಗಿದ್ದಾರೆ. ಜೀವನದಿಯಂತೆ ಪ್ರಕೃತಿಯ ಜೀವನೋಜೀವಗಳ ಸಾಕುತ್ತಿರುವ ತಾಯಿಗೆ ಮನುಷ್ಯ ಮಾಡಿದ ಪಾಪದ ಗಂಟನ್ನು ಇಲ್ಲಿ ಕವಿ ನೆನಪಿಸುತ್ತಿದ್ದಾರೆ.

ಹಳತೆರೆಡರ ಮಧ್ಯೆ ಈಗ / ಹೊಸತೊಂದು ಸೇತುವೆ

ತ್ರಿವಳಿಗಳಿಗು ಜೋಗುಳವ ಹಾಡಿ / ನೋವಾಗದಂತೆ ಸಲುಹಿಹಳು.

ಎನ್ನುವ ಸಾಲುಗಳ ಮೂಲಕ ತುಂಗೆಯ ಮಮತೆಯ ಬಿಚ್ಚಿಟ್ಟಿದ್ದಾರೆ. ಸಂಪತ್ತು ಭರಿತವಾದ ಕಾಡು ಹಾಗೂ ಕುವೆಂಪು ಕಟ್ಟಿಕೊಟ್ಟ ಮಲೆನಾಡಿನ ದೈತ್ಯ ದೃಶ್ಯಗಳು ಮತ್ತೊಂದು ತಲೆಮಾರಿಗಾಗಲೇ ಹೇಗೆ ಕಾಣಿಸಿಕೊಂಡವು ಎಂಬುದನ್ನು ‘ಕ್ಷಮಿಸಿ ಬಾ ಮಳೆರಾಯ’ ಎಂಬ ಕವಿತೆಯಲ್ಲಿ ಮಳೆನಾಡಿನ ತವರಾದ ಮಲೆನಾಡಿನಲ್ಲಿಯೇ ಅಂಗಲಾಚಿ ಮಳೆಯನ್ನು ಕರೆಯುವ ದೃಶ್ಯವನ್ನು ತಮ್ಮ ಕವಿತೆಯ ಮೂಲಕ ಎತ್ತಿ ತೋರಿಸುತ್ತಾರೆ.

ಬೆಳೆಸಿದ್ದೇವೆ ಕಾಂಕ್ರೀಟ್ ಕಾಡು! /ಮರೆಸಿದ್ದೇವೆ ಪಕ್ಷಿಗಳ ಹಾಡು,

ನಿಲ್ಲಿಸಿದ್ದೇವೆ ಮೊಬೈಲ್ ಟವರು! / ಇಳಿಸಿದ್ದೇವೆ ಗುಬ್ಬಚ್ಚಿ ಬೆವರು

ಎಂಬ ರೂಪಕದೊಂದಿಗೆ ಮಲೆನಾಡಿನ ಪರಿಸ್ಥಿತಿಯ ವಿಭಿನ್ನ ಪ್ರಕ್ರಿಯಾ ಆಯಾಮಗಳ ತಮ್ಮ ಸುಮಾರು ಕವಿತೆಗಳಲ್ಲಿ ತಳಮಳವ ವ್ಯಕ್ತಪಡಿಸಿದ್ದಾರೆ.

ಕವಿಗೆ ಸ್ಪಂದಿಸುವ ಪ್ರಜ್ಞೆ ಬಹುಮುಖ್ಯವಾಗಿ ತೋರಬೇಕು.

ಇಲ್ಲ ನಾನು ನಿಮ್ಮ ಮಾತುಗಳಿಗಾಗಿ /ಮಾತುನಾಡುವುದಿಲ್ಲ

ನನ್ನೊಳಗೆ ಮಾತನಾಡದ ಅನೇಕ ಮಾತುಗಳು /ಅಡಗಿ ಕುಳಿತಿರುವಾಗ

ಎನ್ನುವ ಸಾಲುಗಳು ಕವಿಯ ಆಂತರ್ಯದ ವಿವಿಧ ಮಗ್ಗಲುಗಳನ್ನು ಜ್ಞಾಪಿಸುತ್ತವೆ, ಚಿಟ್ಟೆ ಹೇಗೆ ಮೊಟ್ಟೆಯೊಡೆದು ಹಾರಲು ಸಿದ್ಧವಾಗುವುದೋ ಹಾಗೆ ಕವಿಯ ಭಾವ ಹಾಗೂ ಅರಿವು ಕೂಡ ಎಂದು ಪ್ರತಿಪಾದಿಸಿದ್ದಾರೆ.

ರಾತ್ರಿ / ಕಾಡಿನ ಮಧ್ಯೆ ದಾರಿ ತಪ್ಪಿದವಗೆ

ಚಂದ್ರನ ಬೆಳದಿಂಗಳಿಲ್ಲ /ಲಾಂದ್ರದ ಬೆಳಕಿಲ್ಲ

ಮಿಂಚುಳುವಿನ ಬೆಳಕು ದಾರಿ

ಈ ಕವಿತೆಯಲ್ಲಿ ಅಸಹಾಯಕರಾದವರಿಗೆ ಚಂದ್ರನ ಮತ್ತು ಕೃತಕ ಲಾಂದ್ರದ ಮೂಲಕ ರೂಪಕವಾಗಿ ಉಳ್ಳವರ ಜಗತ್ತು ನಿರಾಕರಿಸುವಾಗ ಹೇಗೆ ಒಂದು ಸಣ್ಣ ಮಿಂಚುಳುವಿನ ಬೆಳಕು ದಾರಿಯಾಯಿತು ಎಂದು ಹೇಳುವುದರ ಮೂಲಕ ತತ್ವಪ್ರಜ್ಞೆಯನ್ನು ಕೂಡ ಕೋರೈಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನವಾಗಿ ಯುವತಲೆಮಾರಿನ ಪ್ರಮುಖ ಕವಿಗಳಲ್ಲಿ ಶಂಕರ್ ಸಿಹಿಮೊಗೆಯವರು ಕೂಡ ನಿಲ್ಲುತ್ತಾರೆ. ಇವರ ಕೆಲವು ಕವಿತೆಗಳಲ್ಲಿ ಗಾಂಧಿ, ಬುದ್ಧ, ಬಸವ ಮತ್ತು ಯೇಸು ಮುಂತಾದವರ ಶಾಂತಿದೀವಿಗೆಯನ್ನು ಹಚ್ಚಲು ಹಲವಾರು ಕವಿತೆಗಳನ್ನು ಬರೆದಿದ್ದಾರೆ.

ಗಾಂಧೀ ತಾತನ / ಹೀಯಾಳಿಸುವ ನಿನ್ನ / ಎಲುಬಿಲ್ಲದ ನಾಲಿಗೆಗೂ

ಇರಲಿ / ಮಹಾತ್ಮನ ಹೋರಾಟದ / ಬೆವರಹನಿಯ ಋಣ

ಎಂದು ಕಾವ್ಯೋಕ್ತಿಯಲ್ಲಿ ಹೇಳುವಾಗ ಕವಿಯ ಶಾಂತಿ ಹೃದಯತೆಯೊಂದಿಗೆ ಗಾಂಧೀ ತತ್ವಗಳು ಹೇಗೆ ಕವಿಯಲ್ಲಿ ನಾಟಿವೆ ಎಂದು ಗುರುತಿಸಬಹುದು. ಭಾರತದಲ್ಲಿ ಒಂದು ಕಡೆ ರಾಷ್ಟ್ರೀಯತೆ ಎಂದು ತಲೆದೋರಿರುವ ಕೋಮುವಾದ ಮತ್ತು ಅಂಧಕಾರದ ತಲ್ಲಣಗಳು ಕವಿಯ ಕವಿತೆಗಳ ಮೂಲಕ ತೋರುತ್ತವೆ.

ಸ್ವಾತಂತ್ರ ಅದು / ಸುಮ್ಮನಲ್ಲ ಕಾಣಿರೋ / ನಮ್ಮವರು ತಮ್ಮ

ರಕ್ತಮಾಂಸದೂಟವ ಬಡಿಸಿ / ತಂದುಕೊಟ್ಟ ಮಹೋನ್ನತ

ಸ್ವಾಭಿಮಾನದ ಸಂತಸ

ಹೀಗೆ ಕವಿ ಸ್ವಾತಂತ್ರದ ಜೊತೆಗೆ ರಾಷ್ಟ್ರೀಯತೆಯ ವಿಶ್ವ ಪ್ರೇಮದೊಂದಿಗೆ ಹೇಗೆ ಹೋರಾಟಗಾರರು ಭಾರತಕ್ಕೆ ಸ್ವಾತಂತ್ರವನ್ನು ತಂದುಕೊಟ್ಟರು ಎಂಬುದನ್ನು ‘ರಕ್ತಮಾಂಸದ ಊಟಕ್ಕೆ’ ಉಪಮೆಯಾಗಿ ಬಳಸಿದ್ದಾರೆ. ‘ಬುದ್ಧನನ್ನೇ ಗೆದ್ದುಬಿಡಬೇಕು’ ಎಂಬ ಕವಿತೆಯಲ್ಲಿ ಕವಿ ಎಷ್ಟು ತೀಕ್ಷ್ಣ ಮನಸ್ಸಿನಿಂದ ಕಾವ್ಯದ ತೀಕ್ಷ್ಣತೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಅರಿಯಬಹುದು.

ಅವನ ಕಾಂತಿ ತುಂಬಿದ ವದನ / ಮೌನದಲಿ ಮಾತಾಡಿತು!

ಸುಲಭದ ಮಾತಲ್ಲ ಬುದ್ಧನ ಗೆಲ್ಲುವುದು

ಎಂದು ಕವಿ ಸ್ಪಷ್ಟಪಡಿಸುವುದರೊಂದಿಗೆ, ಅರಿಷಡ್ವರ್ಗಗಳು ಮನುಷ್ಯನನ್ನು ಎಷ್ಟು ತೀವ್ರವಾಗಿ ಆವರಿಸಿವೆ ಎಂದು ಗುರುತಿಸುತ್ತಾರೆ. ಭಾರತ ದೇಶ ಬಡತನದ ಬೇಗೆಯಲ್ಲಿ ಪ್ರತಿನಿತ್ಯ ಬೇಯುತ್ತಿದೆ, ಒಂದು ಕಡೆ ಶ್ರೀಮಂತರು ಮೆರೆಯುತ್ತಿದ್ದಾರೆ, ಮತ್ತೊಂದು ಕಡೆ ಬಡತನ ತಾಂಡವವಾಡುತ್ತಿದೆ.

ಹಸಿದವನ ಹೊಟ್ಟೆ / ಸೇರಬೇಕಿದ್ದ ಅನ್ನ, ಶ್ರೀಮಂತಿಕೆಯ ಮುಲಾಜಿಗೆ ಸಿಕ್ಕಿ

ಹೊಟ್ಟೆ ತುಂಬಿದವನ ತಟ್ಟೆ ಸೇರಿ,

ಕಸದ ಮೂಲೆಯಲಿ ಚೆಲ್ಲಿ ದುಃಖಿಸುತಿದೆ ಅನ್ನ

ಎನ್ನುವುದರೊಂದಿಗೆ ಅನ್ನದ ಪ್ರಜ್ಞೆಯನ್ನು ಹಾಗೂ ಹಸಿವಿನ ಅರಿವಿನೊಂದಿಗೆ ಸಾಮಾಜಿಕ ಬಿತ್ತರಗಳಲ್ಲಿ ಹೇಗೆ ಹಸಿವು ಮತ್ತು ಅನ್ನ ಬಹುಮುಖ್ಯವೆಂದು ಈ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದಾರೆ.

ಸಾಮಾಜಿಕ ಕ್ರಾಂತಿ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಈ ಕವಿ ಪರಿಸರ ಕಾಳಜಿಯೊಂದಿಗೆ ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ನನಗೊಂದು ಬಂದೂಕು ಕೊಡಿಸಿ ಎಂಬ ಕವಿತೆಯಲ್ಲಿ ಕ್ರಾಂತಿಯ ಪ್ರತಿರೂಪದಂತೆ, ಗಾಂಧಿ, ಬುದ್ಧನ ಶಾಂತಿಮಂತ್ರದೊಂದಿಗೆ ಕವಿಯ ಮನಸ್ಸಿನ ಹೋರಾಟ ಈ ಕವಿತೆಯಲ್ಲಿ ವ್ಯಕ್ತವಾಗುತ್ತದೆ.

ಉದ್ವೇಗವಿಲ್ಲದ ಸಮಚಿತ್ತದಿಂದಲೇ / ಹೇಳುತ್ತಿದ್ದೇನೆ, ನನಗೊಂದು

ಬಂದೂಕು ಕೊಡಿಸಿ,/ ಅಕ್ಕಂದಿರು ಹೊರಹೋದಾಗ

ಭಯವಾಗುತ್ತದೆ, / ರಕ್ಕಸರ ನೆನೆದು ಎಂದು ಸ್ತ್ರೀಯರ ಮೇಲೆ ನಡೆಯುವ ಅತ್ಯಾಚಾರವನ್ನು ಕುರಿತು...

ಇತಿಹಾಸದ ಪುಟಗಳಲಿ ನನ್ನ ಹೆಸರು, / ಕೊಲೆಗಡುಕನೆಂದು

ಸೇರಿಹೋದರು ಸರಿ! / ಹೃದಯವಿಲ್ಲದ ನೀಚರ ಎದೆಗೆ! /

ಗುರಿ ಇಟ್ಟು ಹೊಡೆದು! / ನೀತಿ ಮರೆತ ದುರುಳರ ನಿರ್ನಾಮ

ಮಾಡಬೇಕಿದೆ. / ನನಗೊಂದು ಬಂದೂಕು ಕೊಡಿಸಿ

ಎಂದು ಸಾಮಾಜಿಕ ಪಿಡುಗಾದ ಈ ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಮತ್ತು ಸ್ತ್ರೀಯರ ರಕ್ಷಣೆ ಹೇಗೆ ಎಂಬುದನ್ನು ಶೋಕನೀಯ ಚಿಂತನೆಯಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿಯ ಸ್ತ್ರೀ-ಸಂವೇದನೆ ಪ್ರಜ್ಞೆಯ ಗಮನಿಸಬಹುದು.

ಮಲೆನಾಡ ಪರಿಸರದಲ್ಲಿ ಹೂ-ಕಾಯಿ ಮರಗಿಡಗಳೊಂದಿಗೆ ದಟ್ಟವಾದ ಕಾಡಿನಲ್ಲಿ ಬೆಳೆದು ಬಂದ ಕವಿಯ ಬಾಲ್ಯ ಒಂದು ಸೌಂದರ್ಯ ರಸದೊಂದಿಗೆ ಅದ್ಬುತವಾದ ಆಟ, ಪಾಠ, ನಾಟಕ, ಸಂಗೀತ ಮುಂತಾದವುಗಳಲ್ಲಿ ಆಸಕ್ತಿಯಿ ರುವ ಕವಿಗೆ ಆಶ್ಚರ್ಯ ಪಡುವ ಕಾವ್ಯತತ್ವವೂ ಕೂಡ ಗಮ್ಯವಾದದ್ದು.

ಅಂಗಳದ ಚಾಪೆಯಲಿ / ಸರಿರಾತ್ರಿಯ ಬೆಚ್ಚನೆಯ ಕತ್ತಲಲಿ

ನನ್ನಪ್ಪನ ಬಿಗಿದಪ್ಪಿ ಬಾಲ್ಯದಲಿ / ಆಕಾಶವ ದಿಟ್ಟಿಸುತ್ತ ಕೇಳುತ್ತಿದ್ದೆ!

ಅಪ್ಪ ಈ ಮಿನುಗುವ ನಕ್ಷತ್ರಗಳೆಲ್ಲ / ಎಲ್ಲಿಂದ ಬಂದವು?

ನನ್ನಪ್ಪ ಉತ್ತರ ಕೊಟ್ಟಿದ್ದ! / ಮಗ ಇವುಗಳೆಲ್ಲವೂ ಸತ್ತ ನಮ್ಮ

ಹಿರಿಯರು ಒಬ್ಬೊಬ್ಬರು ಈಗ / ನಕ್ಷತ್ರಗಳಾಗಿದ್ದಾರೆ

ನಾನು ನನ್ನಪ್ಪನ ಮಾತನ್ನು ನಂಬಿದ್ದೆ!/ ಬಾಲ್ಯ ಕಳೆದು ಹೋಗುವವರೆಗೂ!

ಎಂಬ ಸಾಲುಗಳಲ್ಲಿ ಕವಿಯ ಕಾವ್ಯ ಕುತೂಹಲ ಮತ್ತು ಕಾವ್ಯದ ಶೈಲಿ ಬಹು ಮುಖ್ಯವಾಗಿ ಗಮನಿಸಬಹುದು.

ತೋಟದ ಮನೆಯ ತಂಪಿನ ಗಾಳಿಯಲಿ! / ತೆಂಗಿನಗರಿಯ ನಾದವ ಕೇಳುತ! /

ನನ್ನವ್ವನ ಮಡಿಲಲಿ ಪ್ರತಿದಿನ, / ಮಲಗಿ ನಿದ್ರಿಸುವಾಗ ಕೇಳುತ್ತಿದ್ದೆ!

ಅವ್ವ ಗುಮ್ಮ ಇರೋದು ನಿಜಾನ? / ಇದ್ರೆ ಹೇಗಿರ್ತಾವೆ ಎಂದು

ಇಲ್ಲಿ ಕವಿಯ ಕಾವ್ಯ ಕುತೂಹಲದೊಂದಿಗೆ ಮುಗ್ಧತೆಯಿಂದ ಕೇಳುವ ಪ್ರಶ್ನೆಗಳು, ಕಾವ್ಯದ ಸೃಜನಶೀಲ ವಸ್ತು, ಶೈಲಿ, ರೀತಿ ಅಲಂಕಾರಗಳೊಂದಿಗೆ ತನ್ನದೆ ಆದ ಛಂದಸ್ಸುಗಳನ್ನು ಪಡೆದುಕೊಂಡಿದೆ. ಕವಿ ಶಂಕರ್ ಸಿಹಿಮೊಗೆಯ ಹಲವಾರು ಕವಿತೆಗಳಲ್ಲಿ ಪ್ರಾಣಿ, ಪಕ್ಷಿ, ಗಿಡಮರಗಳ ಪ್ರತಿಮೆಯನ್ನು ಮಾಡಿಕೊಂಡು ಕವಿತೆಗಳ ಹೆಣೆದಿರುವ ಇವರ ಕಾವ್ಯದೃಷ್ಟಿಯು ವಿಶೇಷ.

‘ಕುದುರೆ ವ್ಯಥೆ’ ಎಂಬ ಕವಿತೆಯಲ್ಲಿ...

ಮದುವೆ ಮನೆಯಲಿ! / ನವ ಮದುಮಗನ! / ಹೊತ್ತುಮೆರೆದ ಕುದುರೆಯು! /

ಸತ್ತು ಬಿದ್ದಿದೆ ಕಸದ ರಾಶಿಯಲಿ

ಹಸಿವಿಗಾಗಿ ಹೆಕ್ಕಿದ್ದವು ಪ್ರಾಣಿಪಕ್ಷಿಗಳು! / ದೆಷ್ಟು ಕ್ರೂರಿ ನೀನು ಮಾಲೀಕ?

ತೆವಲು ತೀರಿದ ಮೇಲೆ ಎಸೆದು! ಕಾಡು ಪ್ರಾಣಿ ಪಕ್ಷಿಗಿಂತಲೂ

ಕಡೆಯಾದೆಯಲ್ಲ

ಎಂಬ ಪದ್ಯದೊಂದಿಗೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ಅವಿನಾಭಾವ ಸಂಬಂಧ ಹಾಗೂ ಪ್ರಾಣಿ ಪ್ರಜ್ಞೆಯೊಂದಿಗೆ ಮನುಷ್ಯ ಎಷ್ಟು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎನ್ನುವುದನ್ನು ಕೂಡ ಕವಿ ಪ್ರಸ್ತಾಪಿಸಿದ್ದಾರೆ.

'George Orwell'ನ ಅನಿಮಲ್ ಫಾರ್ಮ್‌ನಲ್ಲಿ ಪ್ರಾಣಿ ಪ್ರಭುತ್ವ ದೊಂದಿಗೆ ಮನುಷ್ಯ ಪ್ರಭುತ್ವ ಹೇಗೆ ಸಾಧಿಸಿಕೊಳ್ಳಲು ಸಿದ್ಧವಾದವು ಹಾಗೂ ಪ್ರಜಾಪ್ರಭುತ್ವದಲ್ಲಿ ಹೇಗೆ ಘರ್ಷಣೆಗಳು ಸೃಷ್ಟಿಯಾದವು ಎಂಬುದನ್ನು 'Animal Farm'  ಕಾದಂಬರಿಯಲ್ಲಿ ಗಮನಿಸಬಹುದು. ಕವಿ ಪ್ರಾಣಿಪ್ರಜ್ಞೆ ಮತ್ತು ಪ್ರಾಣಿ ಪ್ರಭುತ್ವ ಹಾಗೂ ಪ್ರಾಣಿಗಳ ಜೀವನದ ಕುಶಲೋಪಾದಿ ಸಂಘರ್ಷಗಳ ನಡುವೆ ಬೆಳೆದಿರುವುದನ್ನು ಈ ಕವಿತೆಯ ಮೂಲಕ ಕಾಣಬಹುದು. ಪ್ರಾಣಿಗಳನ್ನು ರೂಪಕವಾಗಿಟ್ಟುಕೊಂಡು ಕವಿತೆಗಳ ರಚಿಸುವುದರಲ್ಲಿ ಕವಿ ಶಂಕರ್ ಸಿಹಿಮೊಗೆಯ ಮಲೆನಾಡ ಕಾವ್ಯಭಾಷೆ ವಿಭಿನ್ನವಾಗಿದೆ. ಇಲ್ಲಿ ಬಂಡಾಯ ಮತ್ತು ಸಾಮಾಜಿಕ ಕ್ರಾಂತಿ ಕವಿತೆಗಳ ಜೊತೆಗೆ ಕವಿ ಮನುಷ್ಯ ಕುಲವನ್ನು ಎಚ್ಚರಿಸುವುದ ರೊಂದಿಗೆ ಕವಿತೆ ಕಟ್ಟಿರುವುದನ್ನು ಈ ಸಂಕಲನದಲ್ಲಿ ವಿಶೇಷವಾಗಿ ಕಾಣಬಹುದು.

ಕವಿ ಶಂಕರ್ ಸಿಹಿಮೊಗೆಯವರ ಕಾವ್ಯಗಳು ಕಾವ್ಯಾನುಭವದೊಂದಿಗೆ ಕಾವ್ಯ ಸೃಷ್ಟಿ ಒಂದು ವಿಶಿಷ್ಟ ನೆಲೆಯಲ್ಲಿ ಸಾಗುತ್ತಿರುವುದು ಕಾವ್ಯವಲಯದಲ್ಲಿ ಒಂದು ರೀತಿಯ ಅಚ್ಚರಿಯನ್ನೆ ಮೂಡಿಸಿದೆ. ಒಟ್ಟಾರೆ ’ಕುದುರೆ ವ್ಯಥೆ’ ಪದ್ಯ ಸಂಕಲನ ಪ್ರಕೃತಿಕ್ರಾಂತಿಯೊಂದಿಗೆ , ಪರಿಸರದ ಮೇಲೆ ಕಾಳಜಿ ಇರುವ ಪ್ರಬುದ್ಧ ಕಾವ್ಯಗಳಿಂದ ಕೂಡಿದೆ.

Writer - ಸೂರ್ಯಕೀರ್ತಿ

contributor

Editor - ಸೂರ್ಯಕೀರ್ತಿ

contributor

Similar News