ದೇಶದಲ್ಲಿ ಜನಪರ ರಾಜಕೀಯವನ್ನು ಹುಟ್ಟುಹಾಕಲು ಪ್ರಕಾಶ್ ರೈ ಗೆಲ್ಲಬೇಕು: ಬಾಬು ಮ್ಯಾಥ್ಯು

Update: 2019-03-09 13:23 GMT
ಪ್ರಕಾಶ್ ರೈ 

ಬೆಂಗಳೂರು, ಮಾ.9: ಬೆಂಗಳೂರು ಸೆಂಟ್ರಲ್‌ನಿಂದ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಕಾಶ್ ರೈರನ್ನು ಗೆಲ್ಲಿಸುವ ಮೂಲಕ ದೇಶದಲ್ಲಿ ಜನಪರ ರಾಜಕೀಯವನ್ನು ಹುಟ್ಟುಹಾಕುವ ಸಂದರ್ಭಕ್ಕೆ ರಾಜಧಾನಿಯ ಜನತೆ ನಾಂದಿಯಾಡಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯು ಮನವಿ ಮಾಡಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರವಾದ ನಿಲುವು ಹೊಂದಿರುವ ಪ್ರಕಾಶ್ ರೈರನ್ನು ರೈತರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಚಿಂತಕರು ಹಾಗೂ ಜನಪರ ಯೋಗಿಗಳು ಈಗಾಗಲೇ ಬೆಂಬಲವನ್ನು ಸೂಚಿಸಿದ್ದು, ನಮ್ಮ- ನಿಮ್ಮೆಲ್ಲರ ದನಿಯೂ ಸಂಸತ್ತಿಗೆ ಕೇಳಬೇಕಾದರೆ ಬೆಂಗಳೂರು ಸೆಂಟ್ರಲ್‌ನ ಎಲ್ಲ ಜನರು ಒಕ್ಕೊರಲಿನಿಂದ ಅವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ನಗರದ ಜನಸಂಖ್ಯೆ 1.3 ಕೋಟಿಯನ್ನು ದಾಟಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅಧಿಕವಾಗುತ್ತದೆ. ಆದರೆ, ಜನಸಂಖ್ಯೆ ಹೆಚ್ಚಳಕ್ಕೆ ತಕ್ಕ ಅಭಿವೃದ್ಧಿ, ಮೂಲ ಸೌಕರ್ಯ ವೃದ್ಧಿಯಾಗದೆ ಬರೀ ಸಮಸ್ಯೆಗಳೇ ತುಂಬಿವೆ. ಉದಾಹರಣೆಗೆ ಕಸದ ವಿಲೇವಾರಿ ಸಮಸ್ಯೆ, ಉದ್ಯಾನ ನಗರಿಯ ಕೆರೆಗಳ ನಿರ್ವಹಣೆ ಹಾಗೂ ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಯಂತಹ ನೂರಾರು ಸಮಸ್ಯೆಗಳಿಂದ ನಗರವು ಚೇತರಿಸಿಕೊಳ್ಳುತ್ತಿಲ್ಲ. ಅದಕ್ಕೆಲ್ಲ ಮೂಲ ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿ ಎಂದು ಬೇಸರ ವ್ಯಕ್ತಪಡಿಸಿದರು.

ಹೀಗಾಗಿ, ನಗರದ ಮೂಲಭೂತ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಸೌರ್ಹಾದವಾಗಿ ನಗರ ವಾತಾವರಣವನ್ನು ಇಡುವ ಮೂಲಕ ಪ್ರಜಾಪ್ರಭುತ್ವದ ಪ್ರಭುಗಳಾದ ಜನತೆಯ ದನಿಯನ್ನು ಗಟ್ಟಿಗೊಳಿಸಲು ಪ್ರಕಾಶ್ ರೈರನ್ನು ಗಲ್ಲಿಸುವ ತುರ್ತು ಇದೆ. ಅಲ್ಲದೆ, ಅವರಿಗೆ ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್‌ನ ಮಾಜಿ ಪಿಎಂ ದೇವೇಗೌಡ ಹಾಗೂ ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ ನೀಡಬೇಕೆಂದು ಒತ್ತಾಯ ಮಾಡಿದರು.

ನೊಂದ ಸಮುದಾಯದ ಒಳಗಿನ ಮಾತನ್ನು ಕೇಳುವವರಿಗೆ ಕೇಳಿಸುವ ಕಾರ್ಯವಾಗಬೇಕಾದರೆ ಪ್ರಕಾಶ್ ರೈರನ್ನು ಗೆಲ್ಲಿಸಬೇಕು. ಅಲ್ಲದೆ, ರಾಜಕೀಯಕ್ಕೆ ಬರುವ ಮೊದಲೇ ಹಳ್ಳಿ ಹಾಗೂ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಜನರ ಮಧ್ಯೆ ಬೆರೆಯುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಕಂಡಾಗ ದೇಶಕ್ಕೆ ಇಂತಹ ನಾಯಕರು ಬೇಕೆನ್ನಿಸುತ್ತದೆ.

-ಡಾ.ವಿಜಯಮ್ಮ, ಹಿರಿಯ ಪತ್ರಕರ್ತೆ

ಕರ್ನಾಟಕ ಇತಿಹಾಸದಲ್ಲೇ ಪ್ರಕಾಶ್ ರೈರಂತಹ ಸ್ವತಂತ್ರ ಅಭ್ಯರ್ಥಿ ಸಿಕ್ಕಿರಲಿಲ್ಲ. ಹೀಗಾಗಿ, ನಾವು ಮನಸ್ಸು ಮಾಡುವ ಮೂಲಕ ಬೆಂಗಳೂರು ಸೆಂಟ್ರಲ್‌ನಲ್ಲಿ ಗೆಲುವಿನ ಉಡುಗೊರೆ ನೀಡಿ ದೇಶದಲ್ಲೇ ಹೊಸ ಅಲೆಯನ್ನು ಸೃಷ್ಟಿಸಬೇಕು.

-ರವೀಂದ್ರ ಭಟ್, ಬೆಂಗಳೂರು ಸೆಂಟ್ರಲ್‌ನ ವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News