ಬ್ರಿಟಿಶ್ ಸರಕಾರಕ್ಕೆ ಸಾವರ್ಕರ್ ಅಂಡಮಾನ್ ಜೈಲಿನಿಂದ ಬರೆದ ಪತ್ರದ ಸಾರಾಂಶ

Update: 2019-03-09 13:26 GMT

ವಿ.ಡಿ. ಸಾವರ್ಕರ್

ಸೆಲ್ಯುಲರ್ ಜೈಲು, ಅಂಡಮಾನ್ಸ್, 1913

ರಿಗೆ: ಸಂಪುಟ ಸದಸ್ಯರು, ಭಾರತ ಸರಕಾರ

ಕೆಲವೊಂದು ಅಂಶಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

1) 1911ರ ಜೂನ್‌ನಲ್ಲಿ ನನ್ನ ಪಕ್ಷದ ಇತರ ಕೈದಿಗಳೊಂದಿಗೆ ನಾನು ಇಲ್ಲಿಗೆ ಬಂದಾಗ ಎಲ್ಲರೊಂದಿಗೆ ನನ್ನನ್ನೂ ಮುಖ್ಯ ಆಯುಕ್ತರ ಕಚೇರಿಗೆ ಕಳುಹಿಸಲಾಗಿತ್ತು. ಅಲ್ಲಿ ನನ್ನನ್ನು ಡಿ ದರ್ಜೆಯ ಅಂದರೆ ಅಪಾಯಕಾರಿ ಕೈದಿ ಎಂದು ವಿಂಗಡಿಸಿದರೆ ಇತರ ಕೈದಿಗಳಿಗೆ ಆ ಗುರುತನ್ನು ನೀಡಿರಲಿಲ್ಲ. ನಂತರ ನಾನು ಆರು ತಿಂಗಳ ಕಾಲ ಏಕಾಂಗಿ ಬಂಧನದಲ್ಲಿ ಕಳೆಯಬೇಕಾಯಿತು. ಆದರೆ ಇತರ ಅಪರಾಧಿಗಳಿಗೆ ಈ ಶಿಕ್ಷೆಯಿರಲಿಲ್ಲ. ಆ ಸಮಯದಲ್ಲಿ ನನ್ನ ಕೈಗಳಿಂದ ರಕ್ತ ಬರುತ್ತಿದ್ದರೂ ನನಗೆ ತೆಂಗಿನ ನಾರು ಹದಗೊಳಿಸುವ ಕೆಲಸವನ್ನು ನೀಡಲಾಗಿತ್ತು. ನಂತರ ನನಗೆ ಜೈಲಿನ ಅತ್ಯಂತ ಕಠಿಣ ಕೆಲಸವಾದ ಗಾಣದಿಂದ ಎಣ್ಣೆ ತೆಗೆಯುವ ಕೆಲಸವನ್ನು ನೀಡಲಾಯಿತು. ಈ ಆರು ತಿಂಗಳಲ್ಲಿ ನನ್ನ ನಡತೆ ಅತ್ಯುತ್ತಮವಾಗಿದ್ದರೂ ನನ್ನನ್ನು ಜೈಲಿನಿಂದ ಹೊರಕಳುಹಿಸಲಿಲ್ಲ. ನನ್ನ ಜೊತೆ ಜೈಲಿಗೆ ಆಗಮಿಸಿದ್ದ ಇತರ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ನಾನು ನನ್ನ ನಡತೆಯನ್ನು ಸಾಧ್ಯವಾದಷ್ಟು ಉತ್ತಮವಾಗಿಡಲು ಪ್ರಯತ್ನಿಸಿದ್ದೇನೆ.

2). ನನಗೆ ಭಡ್ತಿ ನೀಡುವಂತೆ ನಾನು ಮನವಿ ಮಾಡಿದಾಗ ನಾನು ವಿಶೇಷ ದರ್ಜೆಯ ಕೈದಿ. ಹಾಗಾಗಿ ಭಡ್ತಿ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ನಮ್ಮಲ್ಲಿ ಯಾರಾದರೂ ಉತ್ತಮ ಆಹಾರ ಅಥವಾ ವಿಶೇಷ ಆತಿಥ್ಯವನ್ನು ಕೇಳಿದರೆ, ನೀವು ಕೇವಲ ಸಾಮಾನ್ಯ ಕೈದಿಗಳು ಹಾಗಾಗಿ ಇತರರು ತಿನ್ನುವುದನ್ನೇ ನೀವೂ ತಿನ್ನಬೇಕು ಎಂದು ಹೇಳಲಾಗುತ್ತಿತ್ತು. ಹಾಗಾಗಿ, ಮಾನ್ಯರೇ, ಕೇವಲ ನಮ್ಮನ್ನು ಕಠಿಣ ಶಿಕ್ಷೆಗೊಳಪಡಿಸುವ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳು ನಮ್ಮನ್ನು ವಿಶೇಷ ದರ್ಜೆಯ ಕೈದಿಗಳೆಂದು ಪರಿಗಣಿಸುತಿದ್ದಾರೆ.

3). ಬಹುತೇಕ ಅಪರಾಧಿಗಳನ್ನು ಹೊರಗೆ ಕಳುಹಿಸಿದಾಗ ನಾನು ನನ್ನ ಬಿಡುಗಡೆಗೆ ಮನವಿ ಮಾಡಿದೆ. ಆದರೆ ನನ್ನನ್ನು ಬಿಡುಗಡೆ ಮಾಡಲು ನಿರಾಕರಿಸಲಾಗಿತ್ತು. ಇತರರನ್ನು ಹಲವು ಬಾರಿ ಹೊರಗೆ ಕಳುಹಿಸಲಾಗುತ್ತಿದ್ದರೂ ನನಗೆ ಆ ಅವಕಾಶ ನೀಡಿರಲಿಲ್ಲ. ಯಾಕೆಂದರೆ ನಾನು ಅವರ ನಾಯಕನಾಗಿದ್ದೆ. ಆದರೆ ಕೊನೆಗೂ ನನ್ನ ಬಿಡುಗಡೆಯ ಆದೇಶ ಬಂದಾಗ ಹೊರಗಿನ ಕೆಲವು ರಾಜಕೀಯ ಕೈದಿಗಳು ಸಂಘರ್ಷಕ್ಕಿಳಿದಾಗ ನನ್ನನ್ನು ಅವರ ಜೊತೆ ಬಂಧನದಲ್ಲಿಡಲಾಯಿತು.

4). ನಾನು ಭಾರತದ ಜೈಲಿನಲ್ಲಿ ಇರುತ್ತಿದ್ದರೆ ಈ ವೇಳೆಗಾಗಲೇ ಕ್ಷಮಾದಾನ ಪಡೆಯುತ್ತಿದ್ದೆ, ಮನೆಗೆ ಹೆಚ್ಚು ಪತ್ರಗಳನ್ನು ಬರೆಯುತ್ತಿದ್ದೆ, ಹೆಚ್ಚು ಜನರು ನೋಡಲು ಬರುತ್ತಿದ್ದರು. ನಾನು ನಿಜವಾಗಿಯೂ ಸಾಗಿಸಲ್ಪಟ್ಟ ಕೈದಿಯಾಗಿದ್ದರೆ ಈ ವೇಳೆಗೆ ಈ ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದೆ ಮತ್ತು ಟಿಕೆಟ್‌ಸಹಿತ ರಜೆಗೆ ಎದುರು ನೋಡುತ್ತಿದ್ದೆ. ಆದರೆ ಸದ್ಯ, ನನಗೆ ಭಾರತೀಯ ಜೈಲಿನ ಲಾಭವೂ ಇಲ್ಲ ಅಥವಾ ಈ ಜೈಲಿನ ವಸಾಹತು ನಿಯಂತ್ರಣಗಳ ಕಾಯ್ದೆಗಳ ಲಾಭವೂ ಇಲ್ಲ. ಆದರೆ ಈ ಎರಡು ಶಿಕ್ಷೆಗಳನ್ನು ಮಾತ್ರ ನಾನು ಅನುಭವಿಸಬೇಕಿದೆ.

5). ಹಾಗಾಗಿ ಮಾನ್ಯರೇ, ತಾವು ದಯಮಾಡಿ ನನ್ನನ್ನು ಒಂದೋ ಭಾರತೀಯ ಜೈಲಿಗೆ ಕಳುಹಿಸುವ ಅಥವಾ ನನ್ನನ್ನೂ ಇತರ ಕೈದಿಗಳಂತೆ ನಡೆಸಿಕೊಳ್ಳುವ ಮೂಲಕ ಈ ಅಸಂಗತ ಪರಿಸ್ಥಿತಿಯಿಂದ ಪಾರು ಮಾಡಿ. ನಾನು ಯಾವುದೇ ಆದ್ಯತಾ ಆತಿಥ್ಯವನ್ನು ಕೇಳುತ್ತಿಲ್ಲ. ಆದರೂ ರಾಜಕೀಯ ಕೈದಿಯಾಗಿ ಜಗತ್ತಿನ ಸ್ವತಂತ್ರ ರಾಷ್ಟ್ರಗಳ ಯಾವುದೇ ನಾಗರಿಕ ಆಡಳಿತದಿಂದ ನಾನು ಅದನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಅತ್ಯಂತ ಭ್ರಷ್ಟ ಮತ್ತು ರೂಢಿಯ ಅಪರಾಧಿಗಳಿಗಷ್ಟೇ ರಿಯಾಯಿತಿ ಮತ್ತು ವಿಶೇಷ ಆತಿಥ್ಯವನ್ನು ನೀಡಲಾಗುತ್ತದೆಯೇ? ನನ್ನನ್ನು ಹೀಗೆ ಶಾಶ್ವತವಾಗಿ ಜೈಲಿನಲ್ಲಿ ಕೂಡಿಹಾಕುವ ಯೋಜನೆಯಿಂದ ಜೀವನ ಮತ್ತು ನಂಬಿಕೆಯನ್ನು ಉಳಿಸುವ ಯಾವುದೇ ಸಾಧ್ಯತೆಯನ್ನು ನಾನು ಕಳೆದುಕೊಳ್ಳುತ್ತಿದ್ದೇನೆ. ಅವಧಿ ಅಪರಾಧಿಗಳ ವಿಷಯ ಬೇರೆ, ಆದರೆ, ನಾನು ಇಲ್ಲಿ ಐವತ್ತು ವರ್ಷ ಕಳೆಯಬೇಕಿದೆ. ಜೈಲಿನಲ್ಲಿ ತಮ್ಮ ಜೀವನವನ್ನು ತಕ್ಕಮಟ್ಟಿಗೆ ಉತ್ತಮವಾಗಿಸಲು ಅತ್ಯಂತ ಕ್ರೂರ ಅಪರಾಧಿಗಳಿಗೂ ನೀಡಲಾಗುವ ಕನಿಷ್ಠ ರಿಯಾಯಿತಿಗಳನ್ನೂ ನನಗೆ ನೀಡದಿರುವಾಗ ಈ ಐವತ್ತು ವರ್ಷಗಳನ್ನು ಬಂಧನದಲ್ಲಿ ಕಳೆಯಲು ನನಗೆ ನೈತಿಕ ಶಕ್ತಿಯಾದರೂ ಎಲ್ಲಿಂದ ಬರಬೇಕು? ಒಂದೋ ನನ್ನನ್ನು ಭಾರತೀಯ ಜೈಲಿಗೆ ಕಳುಹಿಸಿ. ಅಲ್ಲಿ ನಾನು ಅ). ಕ್ಷಮಾದಾನ ವನ್ನು ಪಡೆಯಲು ಪ್ರಯತ್ನಿಸುತ್ತೇನೆ. ಆ). ಕನಿಷ್ಠ ನಾಲ್ಕು ತಿಂಗಳಿಗೊಮ್ಮೆಯಾದರೂ ನನ್ನ ಕುಟುಂಬಸ್ಥರು ನನ್ನನ್ನು ನೋಡಲು ಬರುತ್ತಾರೆ. ದುರದೃಷ್ಟವಶಾತ್ ಜೈಲಿನಲ್ಲಿ ಬಂದಿಯಾಗಿರುವವರಿಗೆ ಮಾತ್ರ ನಮ್ಮವರನ್ನು ಆಗೊಮ್ಮೆ ಈಗೊಮ್ಮ ನೋಡುವುದರಲ್ಲಿ ಇರುವ ಸಂತೋಷದ ಅರಿವಿರುತ್ತದೆ. ಇ). ಎಲ್ಲದಕ್ಕಿಂತಲೂ ಮಿಗಿಲಾಗಿ, ನ್ಯಾಯಸಮ್ಮತವಲ್ಲದಿದ್ದರೂ 14 ವರ್ಷಗಳ ನಂತರ ಬಿಡುಗಡೆಯಾಗುವ ಹಕ್ಕು. ಈ). ಜೊತೆಗೆ ಹೆಚ್ಚು ಪತ್ರಗಳು ಮತ್ತು ಇತರ ಲಾಭಗಳು ಅಥವಾ ನನ್ನನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಾಗದಿದ್ದರೆ ನನ್ನನ್ನು ಬಿಡುಗಡೆ ಮಾಡಿ ಇತರ ಕೈದಿಗಳಂತೆ ಐದು ವರ್ಷಗಳ ನಂತರ ಭೇಟಿ ಮಾಡುವ ಭರವಸೆಯೊಂದಿಗೆ ಹೊರಗೆ ಕಳುಹಿಸಬೇಕು. ನನಗೆ ಟಿಕೆಟ್‌ಸಹಿತ ರಜೆ ನೀಡುವ ಮತ್ತು ನನ್ನ ಪರಿವಾರವನ್ನು ಇಲ್ಲಿಗೆ ಕರೆಸುವ ಅವಕಾಶ ನೀಡಬೇಕು.

ಇವೆಲ್ಲವನ್ನು ನೀಡಿದರೆ ನಂತರ ಉಳಿಯುವ ಒಂದೇ ಮನವಿಯೆಂದರೆ ನನ್ನನ್ನು ಕೇವಲ ನನ್ನ ತಪ್ಪುಗಳಿಗಷ್ಟೇ ಜವಾಬ್ದಾರನನ್ನಾಗಿಸಬೇಕೇ ಹೊರತು ಇತರರ ತಪ್ಪುಗಳಿಗಲ್ಲ. ಇದನ್ನೂ ನಾನು ಕೇಳಬೇಕೆನ್ನುವುದು ದುರದೃಷ್ಟಕರ. ಇದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು! ಒಂದೆಡೆ ಯುವ, ಕ್ರಿಯಾಶೀಲ ಮತ್ತು ಅವಿಶ್ರಾಂತ ಸುಮಾರು 20 ಮಂದಿ ರಾಜಕೀಯ ಕೈದಿಗಳಿದ್ದರೆ ಇನ್ನೊಂದೆಡೆ, ಯೋಚನೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರವನ್ನು ಸಾಧ್ಯವಾದಷ್ಟು ಕನಿಷ್ಠ ಮಟ್ಟಕ್ಕಿಳಿಸುವ ಅಪರಾಧಿ ವಸಾಹತುವಿನ ನಿಯಂತ್ರಕಗಳಿವೆ. ಸದ್ಯ ನನ್ನನ್ನು ಇಲ್ಲಿಂದ ಹೊರಗೆ ಕಳುಹಿಸುವ ಸಾಧ್ಯತೆಗಳು ಕ್ಷೀಣಿಸುತ್ತಿರುವಾಗ ಈ ನಿಯಂತ್ರಣ ಕಾಯ್ದೆಗಳಲ್ಲಿ ಒಂದು ಅಥವಾ ಎರಡನ್ನು ಉಲ್ಲಂಘಿಸುವುದು ಅನಿವಾರ್ಯವಾಗುತ್ತದೆ. ಮಾನ್ಯರೇ, ಕೊನೆಯಲ್ಲಿ 1911ರಲ್ಲಿ ನಾನು ನಿಮಗೆ ಕಳುಹಿಸಿರುವ ಕ್ಷಮಾದಾನ ಮನವಿಯ ಬಗ್ಗೆ ನಿಮಗೆ ನೆನಪಿಸುತ್ತಾ ಈ ಮನವಿಯನ್ನು ಭಾರತ ಸರಕಾರಕ್ಕೆ ಕಳುಹಿಸಲು ನೆನಪಿಸುತ್ತಿದ್ದೇನೆ. ಭಾರತೀಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳು ಮತ್ತು ಸರಕಾರದ ಓಲೈಕೆ ನೀತಿಗಳು ಮತ್ತೊಮ್ಮೆ ಸಾಂವಿಧಾನಿಕ ಸಾಧ್ಯತೆಗಳನ್ನು ತೆರೆದಿದೆ.

ಇಂದು ಭಾರತ ಮತ್ತು ಮಾನವತೆಯ ಬಗ್ಗೆ ಹೃದಯದಲ್ಲಿ ಒಳಿತನ್ನು ಬಯಸುವವನು ಕಣ್ಣು ಮುಚ್ಚಿ ಸ್ವಾತಂತ್ರವೆಂಬ ಮುಳ್ಳಿನ ಹಾದಿಯನ್ನು ತುಳಿಯಲಾರ. 1906-07ರಲ್ಲಿ ಭಾರತದ ನಿರಾಶಾದಾಯಕ ಪರಿಸ್ಥಿತಿ ನಮ್ಮನ್ನು ಶಾಂತಿ, ಪ್ರಗತಿಯ ದಾರಿಯಿಂದ ತಪ್ಪುವಂತೆ ಮಾಡಿತ್ತು. ಹಾಗಾಗಿ ಒಂದು ವೇಳೆ ಸರಕಾರ ಕರುಣೆ ತೋರಿ ನನ್ನನ್ನು ಬಿಡುಗಡೆ ಮಾಡಿದರೆ, ಸಂವಿಧಾನದ ಕಟ್ಟರ್ ಪ್ರಚಾರಕನಾಗಿ ಪ್ರಗತಿಗೆ ಕಾರಣವಾದ ಇಂಗ್ಲಿಷ್ ಸರಕಾರಕ್ಕೆ ನನ್ನ ಪ್ರಾಮಾಣಿಕತೆಯನ್ನು ಒಪ್ಪಿಸುತ್ತೇನೆ. ನಾವು ಜೈಲಿನಲ್ಲಿರುವವರೆಗೆ ಭಾರತದ ನೂರಾರು ಕುಟುಂಬಗಳಲ್ಲಿ ಸಂತೋಷವೇ ಇರುವುದಿಲ್ಲ. ಯಾಕೆಂದರೆ ಸಂಬಂಧ ಎಲ್ಲಕ್ಕಿಂತಲೂ ಮಿಗಿಲಾದುದು. ನಮ್ಮನ್ನು ಬಿಡುಗಡೆ ಮಾಡಿದರೆ ಜನರು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ಎಲ್ಲದಕ್ಕಿಂತಲೂ ಮಿಗಿಲಾಗಿ, ನಾನು ಸಾಂವಿಧಾನಿಕ ಆದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಒಂದು ಕಾಲದಲ್ಲಿ ನನ್ನನ್ನು ಮಾರ್ಗದರ್ಶಕ ಎಂದು ಭಾವಿಸಿದ್ದ ಭಾರತ ಮತ್ತು ವಿದೇಶಗಳಲ್ಲಿರುವ ಅನೇಕ ಯುವಕರೂ ಮರಳುತ್ತಾರೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸರಕಾರಕ್ಕೆ ಸೇವೆ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನನ್ನ ಪರಿವರ್ತನೆ ಪ್ರಜ್ಞಾಪೂರ್ವಕವಾಗಿದ್ದು ಭವಿಷ್ಯದ ನಡವಳಿಕೆಗಳೂ ಹಾಗೆಯೇ ಇರಲಿದೆ. ನನ್ನ ಬಿಡುಗಡೆಗೆ ಹೋಲಿಸಿದರೆ ನನ್ನನ್ನು ಜೈಲಿನಲ್ಲಿಡುವುದರಿಂದ ಏನನ್ನು ಸಾಧಿಸಲೂ ಸಾಧ್ಯವಿಲ್ಲ. ಪರಮಶಕ್ತನಿಗೆ ಮಾತ್ರ ದಯಾಮಯಿಯಾಗಿರಲು ಸಾಧ್ಯ. ಅದಲ್ಲದೆ ದಾರಿ ತಪ್ಪಿದ ಮಗ ಸರಕಾರವೆಂಬ ಹೆತ್ತವರ ಬಾಗಿಲಿಗೇ ಮರಳಬೇಕೆ ಹೊರತು ಇನ್ನೆಲ್ಲಿಗೆ ಹೋಗಲು ಸಾಧ್ಯ?

ಮಾನ್ಯ ಸರಕಾರ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ನಂಬುತ್ತೇನೆ.

ವಿ.ಡಿ ಸಾವರ್ಕರ್

(ಆರ್.ಸಿ. ಮಜುಮ್ದಾರ್ ಅವರ ಪೀನಲ್ ಸೆಟ್ಲ್‌ಮೆಂಟ್ಸ್ ಇನ್ ದ ಅಂಡಮಾನ್ಸ್‌ನಿಂದ )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News