ಯುದ್ಧ ನನ್ನೊಳಗೆ

Update: 2019-03-09 13:32 GMT

ಬಾಪು ಅಮ್ಮೆಂಬಳ

‘ಇಂಡಿಯಾ ಪಾಕಿಸ್ತಾನ ಕ್ರಿಕೆಟ್’ ಇವತ್ತಿನ ದಿನಪತ್ರಿಕೆಯಲ್ಲಿ, ಟಿವಿ ಚಾನೆಲ್‌ಗಳಲ್ಲಿ, ಸಾಮಾಜಿಕ ಜಾಲತಾಣ ಗಳಲ್ಲಿ ಅದುವೇ ಓದಲ್ಪಡುತ್ತಿತ್ತು, ಹಂಚಲ್ಪಡು ತ್ತಿತ್ತು, ಚರ್ಚಿಸಲ್ಪಡುತ್ತಿತ್ತು. ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದಾಗ ನಾನು ಮನೆಯಿಂದ ಹೊರ ಬರುತ್ತಿರಲಿಲ್ಲ ಹಾಗಂತ ನಾನು ಯಾವುದೇ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಲೂ ಇರಲಿಲ್ಲ!! ಆದರೆ ಈ ದಿನ ನನ್ನ ಕಾಲೇಜಿನ ಸ್ಕಾಲರ್‌ಶಿಫ್‌ಗೆ ಆದಾಯ ಸರ್ಟಿಫಿಕೇಟ್ ಅತ್ಯ ಗತ್ಯವಾಗಿ ಬೇಕಾದ್ದರಿಂದ ನನಗಿವತ್ತು ಹೊರಗಡೆ ಬರಲೇ ಬೇಕಾಗಿತ್ತು. ಆದಾಯ ಪ್ರಮಾಣ ಪತ್ರಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ನೀಟಾಗಿ ಜೋಡಿಸಿ ಮನೆಯಿಂದ ಹೊರಬಿದ್ದೆ.

ಕ್ರಿಕೆಟಿನ ಹುಚ್ಚು ನಾನು ಹತ್ತನೇ ತರಗತಿಯಲ್ಲಿರುವಾಗಲೇ ಬಿಟ್ಟಿದ್ದೆ, ಅವಾಗೆಲ್ಲಾ ಶಾಲೆ ಬಿಟ್ಟ ನಂತರ ನಮ್ಮ ಮನೆಯ ಎದುರಿಗಿರುವ ದೊಡ್ಡದಾದ ಮೈದಾನದಲ್ಲೇ ಇರುತ್ತಿದ್ದೆ. ಸಂಜೆಯಾಯಿತೆಂದರೆ ಸಾಕು ಕ್ರಿಕೆಟ್ ಆಡಲು ಬಾಲಕರಿಂದ ಹಿಡಿದು ಯುವಕರವರೆಗೂ ಆ ದೊಡ್ಡದಾದ ಮೈದಾನದಲ್ಲಿ ನಾಲ್ಕಾರು ತಂಡವಾಗಿ ಬೇರೆ ಬೇರೆ ಗುಂಪುಗಳಲ್ಲಿ ಸೂರ್ಯ ಮುಳುಗುವವರೆಗೂ ಆಟವಾಡುತ್ತಿದ್ದರು. ನಾನು ಕೂಡಾ ಬ್ಯಾಟು, ಬಾಲು ಹಿಡಿದು ನನ್ನದೇ ವಯಸ್ಸಿನ ಬಾಲಕ ರೊಂದಿಗೆ, ಅಮ್ಮ ಬಂದು ನನ್ನ ಕಿವಿ ಹಿಂಡಿ ಎಳೆದುಕೊಂಡು ಹೋಗುವವರೆಗೂ ಆಡುತ್ತಿದ್ದೆ. ವಾರಕ್ಕೊಮ್ಮೆ ನಾವು ಬಾಲಕರೆಲ್ಲಾ ಸೇರಿ ಟೂರ್ನಮೆಂಟನ್ನೂ ಏರ್ಪಡಿಸುತ್ತಿದ್ದೆವು. ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಆದರೆ ನೆರೆಮನೆಯ ಟಿವಿಯಿರುವ ಮನೆಯೊಂದರಲ್ಲಿ ಸೇರಿಕೊಳ್ಳುತ್ತಿದ್ದೆವು. ಅದೊಂದು ದಿನ ಇಂಡಿಯಾ ಪಾಕಿಸ್ತಾನ ಪಂದ್ಯಾಟದಲ್ಲಿ ಪಾಕಿಸ್ತಾನ ಗೆದ್ದಿತೆಂದು ಊರಲ್ಲಿ ಯಾರೋ ಒಬ್ಬ ಪಟಾಕಿ ಹಚ್ಚಿದನೆಂದು ಹೊಡೆದಾಟವಾಗಿತ್ತು. ಮರುದಿನ ಶಾಲೆಯಲ್ಲೂ ಅದೇ ಮಾತಿತ್ತು. ನನ್ನ ಹತ್ತಿರದ ಸಹಪಾಠಿಯೊಬ್ಬ ‘ನಿಮ್ಮವರೆಲ್ಲಾ ಪಾಕಿಸ್ತಾನಕ್ಕೆ ಸಪೋರ್ಟಂತೆ...ಹೌದಾ?’ ಎಂದು ಕೇಳಿದ್ದ. ಅದಕ್ಕಿಂತ ಕೆಲದಿನಗಳ ಹಿಂದೆ ಆತ ನಾನು ಮದ್ರಸಾಕ್ಕೆ ಹೋಗುವಾಗ ಹಾಕುವ ಟೋಪಿ ನನ್ನ ತಲೆಯಲ್ಲಿ ಇದೆಯೆಂದು, ಹೆಡ್ ಮಾಸ್ಟರಲ್ಲಿ ದೂರುತ್ತೇನೆಂದಾಗ ಹೆದರಿ ಕೂಡಲೇ ತಲೆಯಿಂದ ಟೋಪಿಯನ್ನು ತೆಗೆದು ಚೀಲದಲ್ಲಿಸಿದ್ದೆ. ಅವತ್ತಿನ ಬಗ್ಗೆ ಹೇಳಬೇಕೆಂದರೆ ನಾನು ಮತ್ತು ನನ್ನ ಸ್ನೇಹಿತರು ಯಾವತ್ತೂ ಭಾರತ ತಂಡಕ್ಕೆ ಬಿಟ್ಟು ಮತ್ಯಾವ ತಂಡಕ್ಕೂ ಬೆಂಬಲಿಸುತ್ತಿರಲಿಲ್ಲ. ಗಂಗೂಲಿ, ಸೆಹ್ವಾಗ್, ದ್ರಾವಿಡ್ ಇವರೆಲ್ಲಾ ನಮ್ಮ ಅಚ್ಚುಮೆಚ್ಚಿನ ಆಟಗಾರರಾಗಿದ್ದರು, ಆ ಸಮಯದಲ್ಲಿ ಸಚಿನ್ ಒಳ್ಳೆಯ ಬ್ಯಾಟ್ಸ್ ಮ್ಯಾನ್ ಆಗಿದ್ದರೂ ಸಚಿನ್ ಆಡಿದ ದಿನ ಭಾರತ ಸೋಲುತ್ತದೆಂಬ ಪ್ರಬಲ ನಂಬಿಕೆಯಿಂದಾಗಿ ನಮಗ್ಯಾರಿಗೂ ಸಚಿನ್ ಮೇಲೆ ಅಷ್ಟೊಂದು ಪ್ರೀತಿ ಇರಲಿಲ್ಲ. ಪಾಕಿಸ್ತಾನ ತಂಡದಲ್ಲಿ ಮುಸ್ಲಿಮರಿದ್ದಾರೆಂದು ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೆಂಬಲಿಸುವ ಬಾಲಕರೂ ಇದ್ದರು. ಆದರೆ ನಾವ್ಯಾವತ್ತೂ ಭಾರತವನ್ನು ಬಿಟ್ಟರೆ ಬೇರೆ ಯಾವ ತಂಡಕ್ಕೂ ಬೆಂಬಲಿಸಿದ್ದಿಲ್ಲ. ಈ ಗೆಳೆಯನ ಪ್ರಶ್ನೆಯಿಂದ ನಾನು ಆ ದಿನ ಅವನೊಂದಿಗೆ ಜಗಳವೂ ಮಾಡಿದ್ದೆ, ಜೊತೆಗೆ ಅವತ್ತಿನಿಂದ ಕ್ರಿಕೆಟನ್ನು ಸ್ವಲ್ಪಸ್ವಲ್ಪವಾಗಿ ದ್ವೇಷಿಸಲೂ ಪ್ರಾರಂಭಿಸಿದೆ.

ಮನೆಯಿಂದ ಸುಮಾರು ಮೂರು ಕಿ.ಮೀ. ದೂರದ ಗ್ರಾಮ ಪಂಚಾಯತ್‌ಗೆ ಹೋಗಿ ಅಲ್ಲಿ PDO ಅವರಿಂದ ಮಹಜರು ಪತ್ರ ಪಡೆದು ಮಂಗಳೂರಿನ ತಹಶೀಲ್ದಾರರ ಕಚೇರಿಗೆ ಹೋಗಬೇಕಿತ್ತು, ಪುಣ್ಯಕ್ಕೆ ಪಂಚಾಯತ್ ಕಚೇರಿಗೆ ಹೋಗುವ ಆಟೊ ರಿಕ್ಷಾವೊಂದು ಸಿಕ್ಕಿ ಗ್ರಾಮ ಪಂಚಾಯತ್‌ಗೆ ತುಸು ಬೇಗನೇ ತಲುಪಿದೆ. ಅಲ್ಲೂ ಇವತ್ತಿನ ಕ್ರಿಕೆಟಿನದ್ದೇ ಸುದ್ದಿ, ಎಲ್ಲರೂ ಯುದ್ಧೋನ್ಮಾದದಲ್ಲಿದ್ದರು, ಬೆಳಗ್ಗಿನ ಸಮಯವಾದ್ದರಿಂದ ಅಷ್ಟೇನು ಜನರಿರಲಿಲ್ಲ, ಒಳಗಡೆಯಿಂದ ಒಬ್ಬನ ಮಾತಿನ ಅಬ್ಬರ ಕೇಳುತ್ತಿತ್ತು ‘‘ಬ್ಯಾವರ್ಸಿ ಪಾಕಿಸ್ತಾನ ಇವತ್ತು ಸೋಲಬೇಕು...’’ ನಾನು ಕಚೇರಿಯನ್ನು ಪ್ರವೇಶಿಸಿದ್ದನ್ನು ನೋಡಿದ ಆತ ಪಕ್ಕನೆ ಮಾತು ನಿಲ್ಲಿಸಿದ, ಎಲ್ಲರೂ ನನ್ನ ಮುಖವನ್ನೊಮ್ಮೆ ನೋಡಿ,ಪರಸ್ಪರ ಮುಖ ನೋಡಿಕೊಂಡರು. ನಾನು ಸೀದಾ ಗುಮಾಸ್ತನಲ್ಲಿಗೆ ಹೋಗಿ ಆದಾಯ ಪ್ರಮಾಣ ಪತ್ರಕ್ಕೆ ಏನೆಲ್ಲ ದಾಖಲೆಪತ್ರಗಳು ಬೇಕೆಂದು ಕೇಳಿ,ಅವನು ಹೇಳಿದ ಎಲ್ಲಾ ದಾಖಲೆಗಳ ನಕಲು ಪ್ರತಿಯನ್ನು ಅಲ್ಲಿ ಸಿದ್ಧಪಡಿಸಿPDO ಬರಲಿಲ್ಲವಾದ್ದರಿಂದ ಅಲ್ಲಿಯೇ ಕಾಯುತ್ತಾ ಕುಳಿತುಕೊಂಡೆ. ಗುಮಾಸ್ತನಿಗೂ ಹೇಳಿಕೊಳ್ಳುವಂತಹ ಕೆಲಸವಿಲ್ಲದೇ ಇರುವುದರಿಂದ ಪತ್ರಿಕೆಯೊಂದನ್ನು ಸ್ವಲ್ಪ ಜೋರಾಗಿಯೇ ಓದ ತೊಡಗಿದ. ನಾನು ಅಪರೂಪಕ್ಕೊಮ್ಮೆ ಪಂಚಾಯತ್ ಕಚೇರಿಗೆ ಹೋಗುವವನಾಗಿದ್ದರಿಂದ ಇದು ಆತನ ಸಾಮಾನ್ಯ ದಿನಚರಿ ಆಗಿರಬಹುದೆಂದುಕೊಂಡೆ. ಹೇಗೂ ಓದುತ್ತಿದ್ದಾನೆ,ಉಚಿತವಾಗಿ ಕೇಳಿಕೊಳ್ಳುವ ಎಂದು ಕಿವಿ ಕೊಡ ತೊಡಗಿದೆ. ‘ಪಾಕ್ ಮಣಿಸಲು ಕೇಸರಿ ಪಡೆ ಸಜ್ಜು...’ ಎಂದು ಓದ ತೊಡಗಿದ, ಕ್ರಿಕೆಟಿನ್‌ದೇ ಸುದ್ಧಿ!! ಕರ್ಣಕಠೋರವಾಗಿತ್ತು. ಆತನ ಓದು ತುಂಡರಿಸಿ ‘ಎಷ್ಟು ಗಂಟೆಗೆ ಮ್ಯಾಚ್ ಪ್ರಾರಂಭ?’ ನನ್ನ ಆಸಕ್ತಿಗೊಪ್ಪದ ಪ್ರಶ್ನೆಯನ್ನು ಅನಿವಾರ್ಯವಾಗಿ ಕೇಳಿದೆ,ಅವನು ‘ಹನ್ನೊಂದು ಗಂಟೆಗೆ ಪ್ರಾರಂಭವಾಗುತ್ತದೆ, ಆದರೆ ಪಾಕಿಸ್ತಾನ ಗ್ಯಾರೆಂಟಿ ಸೋಲುತ್ತೆ!!’ ಎಂದು ನನ್ನ ಮುಖ ನೋಡಿ ವ್ಯಂಗ್ಯವಾಗಿ ನಕ್ಕ, ನನಗೆ ಆತನ ಉತ್ತರದಿಂದ ಆಶ್ಚರ್ಯವೇನು ಆಗಲಿಲ್ಲ, ಅದಕ್ಕಾಗಿಯೇ ನಾನು ಕ್ರಿಕೆಟ್‌ನ್ನು ದ್ವೇಷಿಸಲು ಪ್ರಾರಂಭಿಸಿದ್ದು, ಮತ್ತು ಇಂಡೋ-ಪಾಕ್ ಯುದ್ಧ ಅಲ್ಲಲ್ಲ, ಇಂಡಿಯಾ ಪಾಕಿಸ್ತಾನ ಮ್ಯಾಚ್ ಇದ್ದ ದಿನ ಹೊರಗೆಲ್ಲೂ ಸುತ್ತಾಡದಿರುವುದು. ಅಷ್ಟರಲ್ಲಿ PDO ಬಂದರೆಂದು ನಾನು ನನ್ನ ದಾಖಲೆಗಳ ಕಟ್ಟುಗಳನ್ನಿಟ್ಟುಕೊಂಡು PDO  ಕೋಣೆ ಪ್ರವೇಶಿಸಿದೆ, PDO ನನ್ನ ದಾಖಲಾತಿಗಳನ್ನೆಲ್ಲಾ ಪರಿಶೀಲಿಸಿ ಮಹಜರು ಪತ್ರಕ್ಕೆ ಸಹಿ ಹಾಕಿ ಕೊಟ್ಟರು. ಕಚೇರಿಯಿಂದ ಹೊರ ಬಂದೆ. ಮನಸ್ಸಿನಲ್ಲಿ ಹೇಳಲಾಗದ ಹಿಂಸೆಯಾಗುತ್ತಿತ್ತು. ಆದರೂ ಅದು ಅಭ್ಯಾಸವಾಗಿತ್ತು. ನಮ್ಮೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಒಂದೂವರೆ ಗಂಟೆ ಪ್ರಯಾಣಿ ಸಬೇಕು, ಬಸ್ಸಿಗಾಗಿ ರಸ್ತೆ ಬದಿ ಬರುತ್ತಿರುವಾಗಲೇ, ಮಂಗಳೂರು ಕಡೆ ಬಸ್ಸು ಬಂದು ನಿಂತಿತು. ಓಡಿ ಹೋಗಿ ಬಸ್ಸನ್ನು ಏರಿ ಕೊನೆಯ ಸೀಟಿನ ಕಿಟಕಿಪಕ್ಕದಲ್ಲಿ ಕುಳಿತೆ. ಸಮಾಧಾನವೆಂದರೆ ಅಕ್ಕಪಕ್ಕ ಯಾರೂ ಇರಲಿಲ್ಲ. ಮನಸ್ಸಿನೊಳಗಡೆ ಏನೇನೋ ವಿಚಾರಗಳು ಮೆಲುಕು ಹಾಕಲು ಅನುಮತಿ ಕೇಳುತ್ತಿತ್ತು. ಇವತ್ತಾಗಿದ್ದರೆ ಆ ನನ್ನ ಬಾಲ್ಯದ ಸಹಪಾಠಿ ತಲೆಗೆ ಟೋಪಿ ಹಾಕಿದ್ದಕ್ಕಾಗಿ ಮುಖ್ಯೋಪಾಧ್ಯಾಯರಿಗೆ ದೂರುತ್ತೇನೆಂದರೆ ನಾನು ಹೆದರುತ್ತಿರಲಿಲ್ಲವೇನೊ. ಈವಾಗೆಲ್ಲ ಪತ್ರಿಕೆಗಳಲ್ಲಿ ಬರುತ್ತಿದ್ದ ಬುರ್ಖಾ, ಟೋಪಿ, ಗಡ್ಡದ ಸುದ್ದಿಗಳನ್ನು ಓದುತ್ತಿದ್ದರಿಂದ ‘ನೀನು ನಾಮ ಹಾಕುತ್ತಿ, ಹೂವು ಮುಡಿಯುತ್ತಿ, ಹಾಗೆಯೇ ಇದೂ ನನ್ನ ಧಾರ್ಮಿಕ ಆಚರಣೆ, ನನಗೂ ಹಕ್ಕಿದೆ’ ಎನ್ನುತ್ತಿದ್ದೆನೋ ಅಥವಾ ಸುಮ್ಮನೆ ಯಾಕೆ ಗಲಾಟೆ ಎಂದು ಸುಮ್ಮನಿರುತ್ತಿದ್ದೆನೊ. ಆದರೂ ಪ್ರಶ್ನೆಗೆ ಉತ್ತರವಂತೂ ಗೊತ್ತಿತ್ತು. ನಾವು ಏಳನೇ ತರಗತಿಯವರೆಗೂ ಜತೆಯಾಗಿಯೇ ಶಾಲೆಗೆ ಬರುತ್ತಿದ್ದೆವು, ಶಾಲೆ ಬಿಟ್ಟ ನಂತರವೂ ಮನೆಗೂ ಜತೆಯಾಗಿಯೇ ಹೊರಡುತ್ತಿದ್ದೆವು, ಆಟವೂ ಜತೆಜತೆಗೆ ಸಾಗುತ್ತಿತ್ತು. ಅಧ್ಯಾಪಕರೂ ನಮ್ಮನ್ನು ‘ಅವಳಿ-ಜವಳಿ’ ಎನ್ನುತ್ತಿದ್ದರು, ಆದರೆ ಎಂಟನೇ ತರಗತಿಗೆ ಕಾಲಿಟ್ಟಾಗ ಶಾಲೆಯ ಅನತಿ ದೂರದಲ್ಲಿರುವ ಕಟ್ಟಡವೊಂದಕ್ಕೆ ಆತನೊಬ್ಬನೇ ಹೋಗುತ್ತಿದ್ದ, ಅಲ್ಲಿರುವವರೊಂದಿಗೆ ಕಬಡ್ಡಿ ಆಡುತ್ತಿದ್ದ, ವ್ಯಾಯಾಮ ಮಾಡುತ್ತಿದ್ದ. ಅಲ್ಲಿಗೆ ಹೋಗಲು ಪ್ರಾರಂಭವಾದ ಮೇಲಂತೂ ನನ್ನಿಂದ ಸ್ವಲ್ಪ ಸ್ವಲ್ಪವಾಗಿ ದೂರವಾಗ ತೊಡಗಿದ, ಶನಿವಾರವಂತೂ ಮಧ್ಯಾಹ್ನ ಹೋದವ ಕತ್ತಲು ಮುಸುಕಿದಾಲೇ ಮನೆಗೆ ಬರುತ್ತಿರುವುದನ್ನು ನಾನು ಎಷ್ಟೋ ಬಾರಿ ನೋಡಿದ್ದೆ, ಆಗೆಲ್ಲ ನನಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿರಲಿಲ್ಲ. ಅವನು ನನ್ನ ಜೊತೆ ಸುತ್ತಾಟ ಬಿಟ್ಟ ನಂತರ ನಾನು ಕಥೆಪುಸ್ತಕವನ್ನೇ ಸಂಗಾತಿಯಾಗಿಸಿದೆ, ಆಟವಾಡಲು ಹೋಗುವುದನ್ನೂ ನಿಲ್ಲಿಸಿಬಿಟ್ಟೆ. ಯಾರೋ ಹತ್ತಿರ ಕುಳಿತುಕೊಂಡರು. ಯೋಚನಾ ಲಹರಿ ಎಲ್ಲೋ ತಪ್ಪಿ ಹೋಯಿತು. ನಾ ಹತ್ತಿದಾಗ ಖಾಲಿ ಇದ್ದ ಬಸ್ಸು ಬಸುರಿಯಾಗುತ್ತಾ ಬಂತು, ಕಂಡಕ್ಟರ್ ಬಂದು ದುಡ್ಡು ಪಡೆದು ಟಿಕೆಟು ಕೊಟ್ಟು ಹೋದ. ಮನಸು ಇನ್ನೊಂದು ಸುತ್ತಿನ ಮೆಲುಕಿಗೆ ತಯಾರಾಯಿತು.

ಮಂಗಳೂರಲ್ಲಿ ಇಳಿದು ತಹಶೀಲ್ದಾರರ ಕಚೇರಿ ಮುಟ್ಟಿದಾಗ ಅಲ್ಲಿನ ಸಾಲು ಹನುಮಂತನ ಬಾಲವಾಗಿತ್ತು, ಬಾಲದಲ್ಲಿಯೂ ಕ್ರಿಕೆಟ್‌ನ ಚೆಂಡು, ಬ್ಯಾಟಿನದ್ದೇ ಆಟ ಸಾಗುತ್ತಿತ್ತು. ನನ್ನ ಅರ್ಜಿಯನ್ನು ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯೊಂದನ್ನು ಪಡೆದಾಗ ಮಧ್ಯಾಹ್ನ ಹನ್ನೆರೆಡುವರೆ ಗಂಟೆ ದಾಟಿ ಓಡುತ್ತಿತ್ತು. ಕಚೇರಿಯ ಆವರಣವನ್ನು ಬಿಟ್ಟು ಹೊರಗಡೆ ಬಂದು ನಿಂತೆ. ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅದಾಗಲೇ ಪ್ರಾರಂಭವಾಗಿತ್ತು. T20 ಆಟವಾಗಿದ್ದರಿಂದ ಒಂದು ತಂಡ ಬ್ಯಾಟಿಂಗನ್ನು ಮುಗಿಸುವ ಸಮಯವಾಗುತ್ತಾ ಬಂದಿತ್ತು. ಇನ್ನೇನು ಊಟದ ಸಮಯ ಊಟ ಮಾಡಿಯೇ ಊರಿಗೆ ಹೊರಡುವ ಆಲೋಚನೆಗೆ ಬಿದ್ದು, ಮಂಗಳೂರಿಗೆ ಬಂದ ವಾಡಿಕೆಯಂತೆ ‘ಅಪ್ಪಟ’ ಸಸ್ಯಾಹಾರಿ ಹೊಟೇಲಿಗೆ ನುಗ್ಗಿದೆ. ಅವತ್ತಿನ ದಿನ ನಾನು ಅಲ್ಲಿ ಹೋಗಬಾರದಿತ್ತು. ಹೊಟೇಲಿನ ಒಂದು ಮೂಲೆಯ ಗೋಡೆಯಲ್ಲಿ ದೊಡ್ಡ ಸ್ಕ್ರೀನಿನ ಟಿವಿಯೊಂದು ಕ್ರಿಕೆಟ್ ಆಟ ತೋರಿಸುತ್ತಿತ್ತು. ಹೊಟೇಲಿನ ಮಾಲಕ ಉತ್ಸಾಹದಲ್ಲಿ ಇದ್ದಂತೆ ತೋರುತ್ತಿತ್ತು. ಅವರ ಪರಿಚಯ ನನಗೂ ಅಲ್ಪ ಸ್ವಲ್ಪ ಇತ್ತು, ಅಲ್ಲೇ ಹತ್ತಿರದ ರಥಬೀದಿಯಲ್ಲಿ ಅವರ ಮನೆ, ಕೆಲವು ಸಮಯದ ಹಿಂದೆ ಗೆಳೆಯನೊಬ್ಬನೊಂದಿಗೆ ಅಲ್ಲಿಗೆ ಹೋಗಿದ್ದೆ. ಅವತ್ತು ಯಾವುದೋ ಮುಖ್ಯವಾದ ಕೆಲಸವಿದೆಯೆಂದು ಅವನ ಬೈಕಿನಲ್ಲಿ ನಾನೂ ಅವನೊಂದಿಗೆ ಸವಾರಿ ಬೆಳೆಸಿದ್ದೆ. ಇಲ್ಲಿ ನಿಮಗೆ ನನ್ನ ಗೆಳೆಯನ ಪರಿಚಯವೂ ಮಾಡಲೇಬೇಕು, ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನಲ್ಲಿ ದುಡಿಯುವ ಅವನಿಗೆ ಕ್ರಿಕೆಟಿನ ಮೇಲೆ ಅತಿಯಾದ ವ್ಯಾಮೋಹ, ಹುಚ್ಚೂ ಎನ್ನಬಹುದು, ಬೆಟ್ಟಿಂಗ್ ಕೂಡಾ ಕಟ್ಟುತ್ತಾನೆ. ಆದರೆ ಭಾರತ ತಂಡದ ಅತೀ ದೊಡ್ಡ ಅಭಿಮಾನಿಯಾದ ಆತ ಭಾರತದ ಪರವಾಗಿ ಮಾತ್ರ ಬಾಜಿ ಕಟ್ಟುತ್ತಾನೆ, ಅಪ್ಪಿತಪ್ಪಿಯೂ ಬೇರೆ ತಂಡಕ್ಕೆ ಬೆಂಬಲಿಸಿದವನಲ್ಲ. ಅವತ್ತು ಹೋಗಿದ್ದುಕೂಡ ಅದೇ ಬೆಟ್ಟಿಂಗಿನ ವಿಷಯಕ್ಕೆ ಎಂದು ನಂತರ ನನಗೆ ತಿಳಿಯಿತು. ನಾವು ಹೋದ ಮುಂಚಿನ ದಿನ ಭಾರತ -ಪಾಕಿಸ್ತಾನ ಮ್ಯಾಚ್ ನಡೆದು, ಅದರಲ್ಲಿ ಭಾರತ ಗೆದ್ದಿತ್ತು ಅದಕ್ಕಾಗಿ ಖುಷಿಯಿಂದಲೇ ಹೊಟೀಲಿನವನ ಮನೆಗೆ ನನ್ನನ್ನೂ ಎತ್ತಾಕಿಕೊಂಡು ಹೋಗಿದ್ದ. ಅವತ್ತು ಈ ಹೊಟೇಲಿನ ಮಾಲಕ ತಲೆಗೆ ಕೈ ಹೊತ್ತುಕೊಂಡು ಕೂತಿದ್ದ. ನನಗೂ ಆಶ್ಚರ್ಯ ಪರಮ ದೇಶ ಭಕ್ತರೆಂದು ನಡೆದಾಡುವವ ಪಾಕಿಸ್ತಾನದ ಪರವಾಗಿ ಹೇಗೆ ಬಾಜಿಕಟ್ಟಿದನೆಂದು!! ಇವನ ನೆರೆಯ ಮನೆಯವರದೂ ಅದೇ ಪರಿಸ್ಥಿತಿ, ಆ ಬಡಾವಣೆ ತುಂಬಾ ನಿರ್ಜೀವವಾಗಿದ್ದಂತೆ ಅವತ್ತು ನನಗೆ ತೋರಿತ್ತು. ಹಿಂದೊಮ್ಮೆ ನಮ್ಮೂರಲ್ಲಿ ಯಾರೋ ಪಾಕಿಸ್ತಾನಕ್ಕೆ ಬೆಂಬಲಿಸಿದರೆಂದು ಗಲಾಟೆ ನಡೆದದ್ದು ನೆನಪಾಯಿತು. ಅಷ್ಟರಲ್ಲಿ ತರಕಾರಿ ಊಟ ಬಂತು,ಮಾಣಿಗೂ ಕೆಲಸ ಮಾಡುವ ಉಮೇದು ಇರಲಿಲ್ಲ ಎಂದು ತೋರುತ್ತದೆ; ಟಿವಿ ನೋಡಿಕೊಂಡೇ ಓಡಾಡುತ್ತಿದ್ದ, ನನಗೆ ಬಿಸಿನೀರು ಬೇಕಿತ್ತು ಆದರೂ ನಾನು ಕೇಳುವ ಸಾಹಸ ಮಾಡಲಿಲ್ಲ. ಟಿವಿ ನೋಡಿದೆ ಪಾಕಿಸ್ತಾನದ ಬ್ಯಾಟಿಂಗ್ ಮುಗಿದು, ಭಾರತ ಬ್ಯಾಟ್ ಬೀಸುತ್ತಿತ್ತು. ಆದರೆ ಸೋಲುವ ಭೀತಿಯಿಂದ ನಿಧಾನವಾಗಿ ಬೀಸುತ್ತಿತ್ತು. ಗಲ್ಲಾದಲ್ಲಿ ಕುಳಿತ ಹೊಟೇಲ್ ಮಾಲಕನ ಮುಖದಲ್ಲಿ ಮಂದಹಾಸ ಜಾಸ್ತಿಯಾಗಿತ್ತು. ಅದಕ್ಕೆ ಕಾರಣವೂ ನನಗೆ ತಿಳಿದಿತ್ತು. ಭಾರತ ತಂಡವೂ ಹೆಸರಿಗೆ ಮಾತ್ರ ಭಾರತ ಆದರೆ ಅದೊಂದು ಖಾಸಗಿ ಸಂಸ್ಥೆ ಎಂದು ಪತ್ರಿಕೆಯಲ್ಲಿ ನಾನು ಓದಿ ಎಷ್ಟೋ ದಿನವಾಗಿತ್ತು. ಅಷ್ಟಾಗಿಯೂ ಭಾರತಕ್ಕೆ ಬೆಂಬಲಿಸುತ್ತಿಲ್ಲ ಎಂದು ಕೆಲವರು ಯಾಕೆ ಗಲಾಟೆ ಮಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗದ ವಿಷಯವಾಗಿತ್ತು. ಊಟ ಮುಗಿಸಿ ಬಿಲ್ಲನ್ನು ಗಲ್ಲಾದಲ್ಲಿ ಕುಳಿತ ಮಾಲಕನಿಗೆ ಹಣದೊಂದಿಗೆ ನೀಡಿ ಅವನ ಮುಖವನ್ನೊಮ್ಮೆ ನೋಡಿದೆ. ಮುಖ ತುಂಬಾ ಖುಷಿಯಲ್ಲಿತ್ತು. ಹೊಟೇಲಿನಿಂದ ಹೊರ ಬಿದ್ದೆ. ನನಗೆ ಊಟದ ನಂತರ ಒಂದು ಸಿಗರೇಟು ಅತ್ಯಗತ್ಯವಾಗಿ ಅಭ್ಯಾಸವಾಗಿತ್ತು. ಹೊಟೇಲಿನ ಎದುರಿನ ಗೂಡಂಗಡಿಯಿಂದ ಸಿಗರೇಟು ಕೊಂಡು ಹೊಗೆಯನ್ನು ವಾತಾವರಣಕ್ಕೆ ಉಚಿತವಾಗಿ ದಾನ ಮಾಡಿದೆ. ಸಿಗರೇಟಿನ ಹಣ ನೀಡುವಾಗ ಗೂಡಂಗಡಿಯವನು ಕೂಡಾ ಮೊಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ. ನಾನು ‘ಅಣ್ಣಾ ರನ್ ಎಷ್ಟಾಯಿತು? ಇಂಡಿಯಾ ವಿನ್ನಾಗಬಹುದಲ್ವ? ನಮ್ಮ ದೇಶ ಗೆದ್ದರೆ ನಮಗೆ ಹೆಮ್ಮೆಯಲ್ವಾ?’ ಎಂದು ಮತ್ತೇ ಅದೇ ಅನಿವಾರ್ಯ ಪ್ರಶ್ನೆ ಕೇಳಿದೆ. ಗೂಡಂಗಡಿಯವನ ಮುಖ ಬಾಡಿ ಹೋಗಿತ್ತು,ಅವನಿಂದ ಪಕ್ಕನೆ ಉತ್ತರ ಬರಲಿಲ್ಲ, ಮುಖವನ್ನೆತ್ತಿ ತನ್ನ ಅಂಗಡಿಯ ನೇರ ಎದುರಿಗಿರುವ ಹೊಟೇಲಿನ ಮಾಲಕನನ್ನು ನೋಡಿದ,ನಾನೂ ನೋಡಿದೆ, ಅವನ ಮುಖ ಹೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು, ನಂತರ ಕ್ಷೀಣಧ್ವನಿಯಲ್ಲಿ ಹೇಳಿದ ‘ಇಂಡಿಯಾ ಮ್ಯಾಚ್ ಸೋತು ಹೋಯಿತು’. ನಾನು ನಿಮ್ಮ ಎಷ್ಟು ಹಣ ಹೋಯಿತೆಂದು ಕೇಳುವುದರಲ್ಲಿದ್ದೆ. ಆದರೆ ಮನಸ್ಸಾಗಲಿಲ್ಲ. ಅಲ್ಲಿಂದ ಮಂಗಳೂರು ಬಸ್ ಸ್ಟಾಂಡಿಗೆ ಬಂದು ನಮ್ಮೂರಿನ ಬಸ್ಸನ್ನು ಏರಿ ಕುಳಿತೆ. ಮನಸ್ಸು ಪುನಃ ಹಾರಾಡಲು ಹೊರಟಿತು !!

Writer - ಬಾಪು ಅಮ್ಮೆಂಬಳ

contributor

Editor - ಬಾಪು ಅಮ್ಮೆಂಬಳ

contributor

Similar News