×
Ad

ಕನ್ನಡ ಚಿತ್ರನಟನ ಹತ್ಯೆಗೆ ಸಂಚು ಆರೋಪ: ನಾಲ್ವರ ತಂಡ ಸಿಸಿಬಿ ಬಲೆಗೆ

Update: 2019-03-09 20:24 IST

ಬೆಂಗಳೂರು, ಮಾ.9: ಕನ್ನಡ ಚಿತ್ರರಂಗದ ನಟನೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಸಂಬಂಧ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ನಿತೇಶ್, ನಿತ್ಯಾನಂದ್, ಮಧುಸೂದನ್ ಹಾಗೂ ಪೃಥ್ವಿರಾಜ್ ಬಂಧಿತ ಆರೋಪಿಗಳು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಶೇಷಾದ್ರಿಪುರ ಠಾಣೆ ವ್ಯಾಪ್ತಿಯ ಆರ್.ಪಿ. ರಸ್ತೆಯ ಬಿಡಿಎ ಕಚೇರಿ ಬಳಿ ಮಾರಕಾಸ್ತ್ರಗಳನ್ನು ಹಿಡಿದು ಹತ್ಯೆಗೆ ಹೊಂಚು ಹಾಕುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಗುಂಪಿನಲ್ಲಿದ್ದ ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೇ ಪ್ರಸಿದ್ಧ ನಟನ ಕೊಲೆ ಸಂಚು ಬಗ್ಗೆ ಬಾಯ್ಬಿಟ್ಟಿದ್ದ ರಾಜಗೋಪಾಲ ನಗರದ ರೌಡಿಶೀಟರ್ ಸ್ಲಂ ಭರತ್, ತನ್ನ ವಿರುದ್ಧ ಸಾಕ್ಷಿ ಹೇಳಿದವರಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ. ಈ ವಿಷಯ ತಿಳಿದ ಸಿಸಿಬಿ ಪೊಲೀಸರು ಇತ್ತೀಚೆಗೆ ಕಾಲಿಗೆ ಗುಂಡು ಹಾರಿಸಿ ಭರತ್‌ನನ್ನು ಬಂಧಿಸಿದ್ದರು. ಭರತ್ ನೀಡಿದ್ದ ಮಾಹಿತಿಯಂತೆ ಆರೋಪಿಗಳ ಪತ್ತೆಗೆ ಹಿರಿಯ ಅಧಿಕಾರಿಗಳು ವಿಶೇಷ ತಂಡ ರಚಿಸಿದ್ದರು. ಅದೇ ಸಿಸಿಬಿ ತಂಡ ಇದೀಗ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ನನಗೆ ಬೆದರಿಕೆ ಕರೆ ಬಂದಿಲ್ಲ: ನಟ ಯಶ್

ಬಂಧಿತರ ಮೇಲೆ ದಾಖಲಾದ ಮೊಕದ್ದಮೆ ನಾನು ನೋಡಿದ್ದು, ಎಲ್ಲಿಯೂ ನಟರ ಹೆಸರು ಉಲ್ಲೇಖ ಮಾಡಿಲ್ಲ. ಈ ರೀತಿ ನನ್ನ ಹೆಸರು ಬಳಕೆ ಮಾಡುವುದರಿಂದ ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ. ಅಲ್ಲದೆ, ನನಗೆ ಯಾವುದೇ ರೀತಿಯ ಬೆದರಿಕೆ ಕರೆ ಬಂದಿಲ್ಲ.

-ಯಶ್, ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News