ಸಾಹಿತಿಗಳು ದಾರಿದೀಪಗಳಾಗಿ ಕಾರ್ಯನಿರ್ವಹಿಸಲಿ: ಪ್ರೊ.ಸಿ.ಎನ್.ರಾಮಚಂದ್ರನ್
ಬೆಂಗಳೂರು, ಮಾ.9: ಇವತ್ತು ಸುಳ್ಳುಗಳು, ಅರ್ಧ ಸತ್ಯಗಳು, ಸತ್ಯವನ್ನು ಮೀರಿ ವಿಜೃಂಭಿಸುತ್ತಿರುವ ಕಾಲವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಾಹಿತಿಗಳು ದಾರಿ ದೀಪಗಳಾಗಿ ಕೆಲಸ ನಿರ್ವಹಿಸಬೇಕಿದೆ ಎಂದು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದರು.
ಶನವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಗೌರವ ಪ್ರಶಸ್ತಿ-2018, ಸಾಹಿತ್ಯ ಶ್ರೀ ಪ್ರಶಸ್ತಿ -2018, ಮಾಧ್ಯಮ ಸಾಹಿತ್ಯ ಪುರಸ್ಕಾರ-2018 ಹಾಗೂ ಪುಸ್ತಕ ಬಹುಮಾನ- 2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ದೇಶದ ಜನತೆಯನ್ನು ಮಾಯಾವಿ ರಾಕ್ಷಸನ ರೀತಿಯಲ್ಲಿ ದಾರಿ ತಪ್ಪಿಸುವಂತಹ ಕಾರ್ಯಗಳು ನಡೆಯುತ್ತಿವೆ. ಭ್ರಮೆಗಳನ್ನೆ ವಾಸ್ತವಗಳನ್ನಾಗಿ, ಅಸತ್ಯಗಳನ್ನೆ ಸತ್ಯಗಳನ್ನಾಗಿ ಬಿಂಬಿಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಸಾಹಿತಿ ಹಾಗೂ ಕಲಾವಿದರ ಮೇಲೆ ಅನೇಕ ಒತ್ತಡಗಳಿದ್ದರೂ ಜನತೆಗೆ ಸಾಂಸ್ಕೃತಿಕತೆ ಹಾಗೂ ವೈಚಾರಿಕತೆಯ ಪ್ರಜ್ಞೆಯನ್ನು ನೀಡಬೇಕಾದ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಅವರು ಹೇಳಿದರು.
ಸಂಸ್ಕೃತಿ ಚಿಂತಕ ವಿವೇಕ ರೈ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮೌಲ್ಯಂಕ ಮಾಡಿಸಿ, ಕನ್ನಡವನ್ನು ಕಟ್ಟುವಂತಹ ಕೆಲಸಕ್ಕೆ ಆದ್ಯತೆ ನೀಡಬೇಕು. ಮುಖ್ಯವಾಗಿ ಕನ್ನಡ ಸಾಹಿತ್ಯ ಸಂಪತ್ತನ್ನು ದೇಶ ಹಾಗೂ ವಿದೇಶದ ಇತರೆ ಭಾಷೆಗಳಿಗೆ ಅನುವಾದಿಸುವಂತಹ ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ಯುವ ಪೀಳಿಗೆಯನ್ನು ಸೃಜನಾತ್ಮಕವಾಗಿ, ವೈಚಾರಿಕರನ್ನಾಗಿ ರೂಪಿಸುವಲ್ಲಿ ಮಕ್ಕಳ ಸಾಹಿತ್ಯ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ, ಕನ್ನಡದಲ್ಲಿ ಈ ಸಾಹಿತ್ಯಕ್ಕೆ ಆದ್ಯತೆ ಇಲ್ಲವಾಗಿದೆ. ಹೊರ ದೇಶಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅದೇ ಮಾದರಿಯಲ್ಲಿ ಕನ್ನಡದಲ್ಲೂ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅನುದಾನದ ಕೊರತೆ ಇದೆ. ಬಜೆಟ್ ನಲ್ಲಿ 1 ಕೋಟಿ 10 ಲಕ್ಷ ರೂ. ನೀಡಲಾಗುತ್ತದೆ. ಆದರೆ, ಪ್ರಶಸ್ತಿ ಸಮಾರಂಭಕ್ಕೆ ಪ್ರತಿ ವರ್ಷ 30 ಲಕ್ಷ ರೂ., ಸಿಬ್ಬಂದಿ ಸಂಬಳಕ್ಕೆ 30 ಲಕ್ಷ ರೂ.ಖರ್ಚಾಗುತ್ತದೆ. ಉಳಿಕೆ ಹಣದಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ಇರುತ್ತದೆ ಎಂದರು. ಅಕಾಡೆಮಿಯ ಚಾರಿತ್ರಿಕ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಹೆಚ್ಚಿನ ಹಣದ ಅಗತ್ಯವಿದೆ. ಎಲ್ಲಾ ಅಕಾಡೆಮಿಗಳಿಗೆ ಮಾತೃಸಂಸ್ಥೆಯಾದ ಅಕಾಡೆಮಿಗೆ ತನ್ನದೇ ಆದ ಅಸ್ತಿತ್ವ ಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಎಚ್.ಎಲ್.ಪುಷ್ಪ, ವಿನಯಾ ಒಕ್ಕುಂದ ಹಾಗೂ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಎಂ.ಎ.ಗೋಪಾಲಸ್ವಾಮಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಮತ್ತಿತರರಿದ್ದರು.
ಅಕಾಡೆಮಿ ಅನ್ನುವ ಪದ ಆಂಗ್ಲರ ಪ್ರತಿರೂಪವಾಗಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಇಂಗ್ಲಿಷರ ಪಳೆಯುಳಿಕೆ ಉಳಿಸಿಕೊಂಡಿದೆ. ಕನ್ನಡ ಸಾಹಿತ್ಯ ಅಕಾಡೆಮಿಯ ಬದಲಾಗಿ ಕರ್ನಾಟಕ ಸಾಹಿತ್ಯ ಪ್ರಾಧಿಕಾರವೆಂದು ಗುರುತಿಸಿ, ಪ್ರಾಧಿಕಾರಕ್ಕಿರಬೇಕಾದ ಎಲ್ಲಾ ಸೌಲಭ್ಯಗಳು ಸಾಹಿತ್ಯ ಅಕಾಡೆಮಿಗೆ ನೀಡಬೇಕು. ಆದರೆ, ಪ್ರಾಧಿಕಾರಕ್ಕೆ ಸಚಿವರ ಸ್ಥಾನಮಾನ, ಸಂಪುಟ ಸಚಿವ ಸ್ಥಾನಗಳು ಸಾಹಿತ್ಯ ಅಕಾಡೆಮಿಗೆ ಬೇಕಿಲ್ಲ. ಪ್ರಾಧಿಕಾರದ ಹೆಸರಿನಲ್ಲಿ ಬರಬೇಕಾದ ಸವಲತ್ತುಗಳು ಲಭ್ಯವಾಗಬೇಕು.
-ಅರವಿಂದ ಮಾಲಗತ್ತಿ, ಅಧ್ಯಕ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ