×
Ad

ವಿವಿಧ ಅಪರಾಧ ಪ್ರಕರಣ: 47 ಜನರ ಸೆರೆ- ಲಕ್ಷಾಂತರ ಮೌಲ್ಯದ ಮಾಲು ಜಪ್ತಿ

Update: 2019-03-09 21:47 IST

ಬೆಂಗಳೂರು, ಮಾ.9: ಸುಲಿಗೆ, ರಕ್ತಚಂದನ ಮರಗಳ್ಳತನ, ಮಾದಕ ವಸ್ತು ಮಾರಾಟ, ಹಸು ಕಳವು ಹಾಗೂ ದುಬಾರಿ ಬೆಲೆಯ ಬೈಕ್ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳನ್ನು ವೈಟ್‌ಫೀಲ್ಡ್ ಉಪವಿಭಾಗದ ಪೊಲೀಸರು ಭೇದಿಸಿದ್ದಾರೆ.

ವಿವಿಧ ಪ್ರಕರಣಗಳ ಸಂಬಂಧ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ 47 ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೈಕ್, ರಕ್ತ ಚಂದನ ಸೇರಿದಂತೆ ಇನ್ನಿತರ ಕಳ್ಳತನ ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.

ಕೆ.ಆರ್.ಪುರಂ, ಕಾಡುಗೋಡಿ ಮತ್ತು ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಹಾಗೂ ಸುಲಿಗೆಯಲ್ಲಿ ತೊಡಗಿದ್ದ ಬಾಂಗ್ಲಾದೇಶದ ಮೂಲದ ಅಸ್ಲಂ (40), ವಿಶ್ವನಾಥ್ (23), ದೇವಸಂದ್ರದ ಕುಟ್ಟಿ, ಪ್ರಕಾಶ್, ಕಾಡುಗೋಡಿಯ ರಂಜಾನಿ ಮತ್ತು ಸಾದಿಕ್ ಬಾಷಾ, ಅಕ್ಷಯ್ ಕುಮಾರ್ ಹಾಗೂ ಸುಬ್ರಮಣಿಯನ್ನು ಬಂಧಿಸಿದ್ದು, 7.20 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ, 1 ಆಟೊ, 3 ಮೊಬೈಲ್ ಮತ್ತು ಬೈಕ್ ಪತ್ತೆಯಾಗಿದೆ ಎಂದು ತಿಳಿಸಿದರು.

ದುಬಾರಿ ಬೈಕ್; ಮನೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದ ದುಬಾರಿ ಬೆಲೆಯ ಬೈಕ್‌ಗಳನ್ನು ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಆರೋಪಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳಿಂದ ದುಬಾರಿ ಬೆಲೆಯ 31.95 ಲಕ್ಷ ರೂ. ಮೌಲ್ಯದ 61 ಬೈಕ್‌ಗಳು ಪತ್ತೆ ಹಚ್ಚಲಾಗಿವೆ. ವೈಟ್‌ಫೀಲ್ಡ್ ವಿಭಾಗದ ಬೆಳ್ಳಂದೂರು, ಮಹದೇವಪುರ, ಎಚ್.ಎ.ಎಲ್, ಕಾಡುಗೋಡಿ ಸೇರಿದಂತೆ ತಮಿಳುನಾಡಿನಲ್ಲಿ ನಡೆದಿರುವ ಪ್ರಕರಣಗಳು ಬಯಲಾಗಿವೆ ಎಂದು ವಿವರಿಸಿದರು.

ಮನೆಗಳ್ಳತನ, ಸೆರೆ: ವೈಟ್‌ಫೀಲ್ಡ್, ಕಾಡುಗೋಡಿ, ಎಚ್.ಎ.ಎಲ್, ಕೆ.ಆರ್.ಪುರಂ, ಬೆಳ್ಳಂದೂರು, ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮತ್ತು ಕನ್ನಗಳವಿನಲ್ಲಿ ತೊಡಗಿದ್ದ ಹಾಗೂ ಕದ್ದ ಚಿನ್ನಾಭರಣವನ್ನು ಸ್ವೀಕರಿಸುತ್ತಿದ್ದ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 44.13 ಲಕ್ಷ ರೂ. ಬೆಲೆಬಾಳುವ 1 ಕೆಜಿ, 359 ಗ್ರಾಂ ಚಿನ್ನಾಭರಣ, 7 ನೂರು ಗ್ರಾಂ ಬೆಳ್ಳಿ, 9 ಎಲ್‌ಇಡಿ ಟಿವಿ, 2 ಕ್ಯಾಮೆರಾ, 1 ಯಮಹಾ ಬೈಕ್ ಹಾಗೂ 1.2 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News