ಸಕ್ಕರೆ ಕಂಪೆನಿ ನಿರ್ಮಾಣಕ್ಕೆ ಭೂಮಿ ಪಡೆದು ವಂಚನೆ: ಪರಿಹಾರಕ್ಕೆ ರೈತರ ಆಗ್ರಹ

Update: 2019-03-09 17:35 GMT

ಬೆಂಗಳೂರು, ಮಾ.9: ಬಸವನ ಬಾಗೇವಾಡಿಯ ತೆಲಗಿ ಹಾಗೂ ಅಂಡಲಗೇರಿ ಗ್ರಾಮದ ರೈತರ ಭೂಮಿಯನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾಲಕತ್ವದ ಸಿದ್ದೇಶ್ವರ ಸಕ್ಕರೆ ಕಂಪೆನಿ ನಿರ್ಮಾಣಕ್ಕೆ ಕೆಐಎಡಿಬಿಯು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದೆ ವಂಚಿಸಿದೆ ಎಂದು ಭೂಮಿ ಕಳೆದುಕೊಂಡ ರೈತರು ಆರೋಪಿಸಿದರು.

ಶನಿವಾರ ನಗರದ ಆನಂದ್‌ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಜಮಾಯಿಸಿದ ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಶಿವಾನಂದ ಪಾಟೀಲರು ಸಕ್ಕರೆ ಕಂಪೆನಿ ಸ್ಥಾಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಹತ್ತು ವರ್ಷಗಳ ಹಿಂದೆ 20 ರೈತರ 130 ಎಕರೆ 5 ಗುಂಟೆ ಜಮೀನನ್ನು ಸ್ವಾಧೀನ ಪಡೆದುಕೊಂಡಿದೆ. ಅದಕ್ಕೆ 21 ಕೋಟಿ ಪರಿಹಾರ ಕೊಡುವುದಾಗಿ ಹೇಳಿ ಕೇವಲ 40 ಲಕ್ಷ ಮಾತ್ರ ನೀಡಿದೆ ಎಂಬುದು ಪ್ರತಿಭಟನಾಕಾರರ ದೂರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಕೆ.ಬೆಳ್ಳುಬ್ಬಿ, ಸಿದ್ದೇಶ್ವರ ಸಕ್ಕರೆ ಕಂಪೆನಿಗೆ ಪರವಾನಗಿ ರದ್ದಾಗಿದೆ. ಅತ್ತ ಕಂಪೆನಿಯೂ ನಿರ್ಮಾಣವಾಗಿಲ್ಲ. ಇತ್ತ ತಮ್ಮ ಜಮೀನಿಗೆ ಪರಿಹಾರವೂ ದೊರೆಯದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಐಎಡಿಬಿ ಕಂಪೆನಿಗೆ ಹಲವು ಬಾರಿ ನೋಟಿಸ್ ಕೊಟ್ಟಿದೆ. ಆದರೂ ಸಚಿವರು ಉತ್ತರಿಸಿಲ್ಲ. ಕೂಡಲೇ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

2017ರಲ್ಲಿ ತಹಸೀಲ್ದಾರರು ಕೆಐಎಡಿಬಿಗೆ ಸೇರಿದ ಜಮೀನು ಎಂದು ಪಹಣಿ ಪತ್ರದಲ್ಲಿ ಮುದ್ರೆ ಒತ್ತಿದ್ದಾರೆ. ಇದರಿಂದ ಆ ಜಮೀನಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಈ ಮೂಲಕ ಜಮೀನು ಶಾಶ್ವತವಾಗಿ ಕೈತಪ್ಪಿಹೋಗಿದೆ. ಮುಖ್ಯಮಂತ್ರಿ, ಕೈಗಾರಿಕಾ ಸಚಿವರಿಗೆ ಮತ್ತು ಮಂಡಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News