ಸಂಘಟಿತ ಹೋರಾಟದಿಂದ ನ್ಯಾಯ ಸಿಗಲಿದೆ: ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ

Update: 2019-03-09 17:46 GMT

ಬೆಂಗಳೂರು, ಮಾ.10: ಮಹಿಳೆಯ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಯಾವುದೆ ಅನ್ಯಾಯವನ್ನು ಸಂಘಟಿತವಾಗಿ ಎದುರಿಸಿದರೆ ಜಯಸಿಗಲಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ತಿಳಿಸಿದರು.

ಶನಿವಾರ ಕನ್ನಡ ರಣಧೀರ ಪಡೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಅತ್ಯಾಚಾರ ಹಾಗೂ ದೌರ್ಜನ್ಯಗಳ ಪ್ರಮಾಣವು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಘಟನೆಗಳ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ತಿಳಿಸಿದರು. ಕನ್ನಡ ರಣಧೀರ ಪಡೆ ರಾಜ್ಯಾಧ್ಯಕ್ಷ ಚೇತನ್ ಗೌಡ ಮಾತನಾಡಿ, ಮಹಿಳೆಗೆ ಮನೆಯಿಂದಲೇ ಮೊದಲು ಸಹಕಾರ ದೊರೆಯಬೇಕು. ನಂತರದಲ್ಲಿ ಸಮಾಜ ಅವಳ ಪ್ರತಿಭೆಯನ್ನು ಗುರುತಿಸಿ ಸಹಕಾರ ನೀಡಿದ್ದೇ ಆದಲ್ಲಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಸಾಧನೆ ಮಾಡಲು ಸಾಧ್ಯವೆಂದು ತಿಳಿಸಿದರು.

ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗುವುದು ಬೇಡ. ಗಂಡು-ಹೆಣ್ಣು ಎಂಬ ತಾರತಮ್ಯತೆ ಮಾಡದೇ ಮಕ್ಕಳನ್ನು ಸಮಭಾವದಿಂದ ಪಾಲಕರು ಬೆಳೆಸಬೇಕು. ಇದೇ ನಿಟ್ಟಿನಲ್ಲಿ ಕನ್ನಡ ರಣಧೀರ ಪಡೆ ವತಿಯಿಂದ ಕನ್ನಡ ಒಳಗೊಂಡು ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮತ್ತು ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ದೇಹದಾರ್ಢ್ಯ ಪಟು ಮಮತಾ ಮಾತನಾಡಿ, ಮಹಿಳೆಯರಿಗೆ ಮನೆಯಲ್ಲಿ ಮೊದಲು ಬೆಂಬಲ ಸಿಕ್ಕರೆ, ಸಮಾಜದಿಂದ ಪ್ರೋತ್ಸಾಹ ಸಿಗುವುದು ಕಷ್ಟವೇನಲ್ಲ. ನಾನು ಇವತ್ತು ದೇಹದಾರ್ಢ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದರ ಹಿಂದೆ ನನ್ನ ಗಂಡ ಹಾಗೂ ಕುಟುಂಬದ ಬೆಂಬಲವಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕಲೆ ಇದ್ದೆ ಇರುತ್ತದೆ. ಅದನ್ನು ಸತತ ಅಭ್ಯಾಸದ ಮೂಲಕ ಸಾಧನೆಯತ್ತ ಕೊಂಡೊಯ್ಯಬೇಕು. ಇಂದಿನ ಯುವತಿಯರು ವಿದ್ಯಾಭ್ಯಾಸ, ಕ್ರೀಡೆ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷ್ರೇತ್ರಗಳಲ್ಲೂ ಮುಂಚೂಣಿಗೆ ಬರುವ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಕವಯತ್ರಿಯರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ಈ ವೇಳೆ ಕವಿ ಕವಯತ್ರಿ ಚಂದ್ರಿಕಾ, ಬೇಲೂರು ರಘುನಂದನ್, ಕರ್ನಾಟಕ ರಣಧೀರ ಪಡೆಯ ಸಂಸ್ಥಾಪಕ ವಿಜಯ್ ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News