ರಾಮಮಂದಿರ ನಂಬಿಕೆಯ ವಿಚಾರ: ಆದಿತ್ಯನಾಥ್

Update: 2019-03-10 03:52 GMT

ಲಕ್ನೋ, ಮಾ. 10: "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ನಂಬಿಕೆಗೆ ಸಂಬಂಧಿಸಿದ್ದು ಹಾಗೂ ಇದನ್ನು ಗೌರವಿಸಬೇಕು" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

"ಸುಪ್ರೀಂಕೋರ್ಟ್ ಆದೇಶದ ಮಧ್ಯಸ್ಥಿಕೆ ಸಮಿತಿ ಈ ವಿವಾದವನ್ನು ಬಗೆಹರಿಸಿದರೆ ಅದನ್ನು ಮೊದಲನೆಯವನಾಗಿ ಸ್ವಾಗತಿಸುತ್ತೇನೆ" ಎಂದೂ ತಿಳಿಸಿದ್ದಾರೆ.

ದಶಕದಷ್ಟು ಹಳೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಶೀರ್ಷಿಕೆ ವಿವಾದವನ್ನು ಮೂರು ಮಂದಿ ಸದಸ್ಯರ ಮಧ್ಯಸ್ಥಿಕೆ ಸಮಿತಿಗೆ ಒಪ್ಪಿಸಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಂವಿಧಾನಪೀಠ ಶುಕ್ರವಾರ ಆದೇಶ ನೀಡಿತ್ತು.

"ಮುಸ್ಲಿಮರು ಈ ವ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಭಾವಿಸಿದರೆ, ಒಳ್ಳೆಯದು. ಆದರೆ ಇದು ನಂಬಿಕೆಯ ವಿಚಾರ ಎನ್ನುವುದು ಇಡೀ ದೇಶಕ್ಕೆ ಮತ್ತು ವಿಶ್ವಕ್ಕೆ ಗೊತ್ತು. ಇದನ್ನು ಗೌರವಿಸಬೇಕಾಗುತ್ತದೆ" ಎಂದು ಹಿಂದೂಸ್ತಾನ್ ಟೈಮ್ಸ್ ಆಯೋಜಿಸಿದ್ದ "ವಿಕಾಸ್ ಕೆ ಪತ್ ಪರ್ ಉತ್ತರ್ ಪ್ರದೇಶ್" ಸಮಾವೇಶ ಉದ್ಘಾಟಿಸಿ ಮಾತನಾಡುವ ವೇಳೆ ಅವರು ಸ್ಪಷ್ಟಪಡಿಸಿದರು.

ವ್ಯಾಜ್ಯವನ್ನು ಬಗೆಹರಿಸಲು ಈ ಹಿಂದೆ ನಡೆದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಮಧ್ಯಸ್ಥಿಕೆ ಪ್ರಕ್ರಿಯೆ ಕಾರ್ಯಗತಗೊಂಡಿದ್ದರೆ ಸಮಸ್ಯೆಗೆ ಈಗಾಗಲೇ ಪರಿಹಾರ ಸಿಗಬೇಕಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News