ಮಂಗಳೂರಿನ ಈ ಮಹಿಳೆ ನಕಲಿ ಐಜಿಪಿ !
ಬೆಂಗಳೂರು, ಮಾ. 10: ಗೃಹರಕ್ಷಕ ದಳದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಡಿ. ರೂಪಾ ಅವರಂತೆ ನಟಿಸಿ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಹೋಟೆಲ್ ಕೊಠಡಿ ಕಾಯ್ದಿರಿಸುವಂತೆ ಸೂಚಿಸಿದ ಮಂಗಳೂರಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದು, ಈ ಸಂಬಂಧ ಡಿ. ರೂಪಾ ಅವರು ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದರು. ಮಂಗಳೂರಿನ ಪಾಂಡೇಶ್ವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಆರೋಪಿ ಆಶಾ ಪ್ರಕಾಶ್ (45), ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆಯುವ ಮುನ್ನ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು.
ಡಿಸೆಂಬರ್ 3ನೇ ವಾರ ಆಶಾ ಪ್ರಕಾಶ್ ಲಕ್ನೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, "ನಾನು ಐಪಿಎಸ್ ಅಧಿಕಾರಿ ರೂಪಾ ಮಾತನಾಡುತ್ತಿದ್ದೇನೆ; ಡಿಸೆಂಬರ್ 29 ರಿಂದ ಜನವರಿ 3ರವರೆಗೆ ನನಗೊಂದು ಕೊಠಡಿ ಕಾಯ್ದಿರಿಸಿ" ಎಂದು ಸೂಚನೆ ನೀಡಿದ್ದಾಳೆ.
ಕೊಠಡಿ ಕಾಯ್ದಿರಿಸಿದ ಪೊಲೀಸ್ ಅಧಿಕಾರಿ, ಡಿ. ರೂಪಾ ಅವರಿಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸಿದ್ದನ್ನು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೂಪಾ ಪ್ರಕರಣ ದಾಖಲಿಸಿದ್ದರು.
ಈ ಕರೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಪತ್ತೆ ಮಾಡಿದ ಪೊಲೀಸರು, ಆರೋಪಿಯ ಜಾಡು ಹಿಡಿದಿದ್ದಾರೆ. ಆಕೆ ಅಮಾಯಕಳಂತೆ ನಟಿಸಿ ಒಂದು ತಿಂಗಳ ಹಿಂದೆ ಮೊಬೈಲ್ ಕಳೆದುಹೋಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದ್ದಾಳೆ.
ದೂರಿನ ಪ್ರತಿಯ ಆಧಾರದಲ್ಲಿ ಡೂಪ್ಲಿಕೇಟ್ ಸಿಮ್‌ಕಾರ್ಡ್ ಪಡೆದಿದ್ದಾಳೆ. ಆದರೆ ತನಿಖೆ ಮುಂದುವರಿಸಿದ ಪೊಲೀಸರು, ಕರೆ ಮಾಡಲಾದ ಮೊಬೈಲ್‌ನ ಐಎಂಇ ಸಂಖ್ಯೆ ಆಧಾರದಲ್ಲಿ ಆರೋಪಿಯೇ ಕರೆ ಮಾಡಿದ್ದನ್ನು ಖಚಿತಪಡಿಸಿಕೊಂಡರು. ಬಳಿಕ ಮಹಿಳೆ ತಪ್ಪೊಪ್ಪಿಕೊಂಡರು. ಆದರೆ ಇದರ ಹಿಂದಿನ ಉದ್ದೇಶ ತಿಳಿಸಿಲ್ಲ. ಮಹಿಳೆಯನ್ನು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.