ಬಿಎಸ್‌ವೈ, ಈಶ್ವರಪ್ಪಗೆ ಕಾಮನ್‌ಸೆನ್ಸ್ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ: ಎಂ.ಬಿ ಪಾಟೀಲ್

Update: 2019-03-10 13:45 GMT

ಬೆಂಗಳೂರು, ಮಾ.10: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪಗೆ ಎಷ್ಟು ಕಾಮನ್‌ಸೆನ್ಸ್ ಇದೆ ಅಂತ ಎಲ್ಲರಿಗೆ ಗೊತ್ತಿದೆ. ಪುಲ್ವಾಮಾ ದಾಳಿ ಆದ ಮೇಲೆ ಯಡಿಯೂರಪ್ಪ 22 ಸ್ಥಾನ ಗೆಲ್ಲುವ ಬಗ್ಗೆ ಮಾತನಾಡುವ ಮೂಲಕ ಸೈನಿಕರ ಸಾವನ್ನೂ ತಮ್ಮ ರಾಜಕೀಯಕ್ಕೆ ಬಳಸಿಕೊಂಡ ಅವರ ವಿವೇಕ ಎಂತಹುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಕಾಮನ್‌ಸೆನ್ಸ್ ಎಲ್ಲ ಎಂದು ಬಿಎಸ್‌ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಮನ್‌ಸೆನ್ಸ್ ಇದ್ದವರು ಹೀಗೆ ಮಾತನಾಡುತ್ತಾರಾ ಎಂದು ತಿರಗೇಟು ನೀಡಿದರು. ಯಡಿಯೂರಪ್ಪ ಮತ್ತು ಈಶ್ವರನವರು ಬಾಯಿಗೆ ಬಂದಂತೆ ಮಾತನಾಡಿ, ಜನರ ಆಕ್ರೋಶ, ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಅವರಿಗೇ ಮೊದಲು ಕಾಮನ್‌ಸೆನ್ಸ್ ಇಲ್ಲ. ಇನ್ನು ರಾಹುಲ್‌ಗಾಂಧಿಯವರ ಕಾಮನ್‌ಸೆನ್ಸ್ ಬಗೆಗೆ ಪ್ರಶ್ನಿಸುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಇನ್ನು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಸುಮಲತಾ ಅಂಬರೀಶ್ ಅವರು, ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ, ಸಮ್ಮಿಶ್ರ ಸರಕಾರದ ಹೊಂದಾಣಿಕೆಯಿಂದಾಗಿ ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ. ಇನ್ನೂ ಕೂಡ ಲೋಕಸಭಾ ಸ್ಥಾನ ಹಂಚಿಕೆ ಕುರಿತು ನಿರ್ಧಾರವಾಗಿಲ್ಲ. ಸ್ಥಾನ ಹಂಚಿಕೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರ ಎಲ್ಲ ನಿರ್ಧಾರಗಳು ಹೊರ ಬೀಳಲಿವೆ. ಈ ಕುರಿತಂತೆ ಮಾಧ್ಯಮಗಳ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News