ಪೌರ ಕಾರ್ಮಿಕರು ಬೆಂಗಳೂರು ನಿರ್ಮಾಣದ ರಾಯಭಾರಿಗಳು: ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್

Update: 2019-03-10 14:09 GMT

ಬೆಂಗಳೂರು, ಮಾ, 10: ನಗರದ ಆರೋಗ್ಯ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಮಹಿಳಾ ಪೌರ ಕಾರ್ಮಿಕರು ಸ್ವಚ್ಛ, ಸುಂದರ ಬೆಂಗಳೂರು ನಿರ್ಮಾಣ ಮಾಡುವ ನಿಜವಾದ ಸ್ವಚ್ಛತಾ ರಾಯಭಾರಿಗಳಾಗಿದ್ದಾರೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಮಹಿಳಾ ಪೌರ ಕಾರ್ಮಿಕರೊಂದಿಗೆ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಗರದ ಸ್ವಚ್ಛತೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಪೌರ ಕಾರ್ಮಿಕರ ಸೇವೆಗೆ ಪರ್ಯಾಯವಿಲ್ಲ. ಇಂತಹ ಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇದೇ ಉದ್ದೇಶದಿಂದ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಆರೋಗ್ಯ ವಿಮೆ, ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವಿಗೆ ಪಾಲಿಕೆ ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಪೌರ ಕಾರ್ಮಿಕರ ಪರಿಶ್ರಮದಿಂದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರು ನಗರ 22 ಅಂಕಗಳ ಬಡ್ತಿ ಪಡೆದು ಉತ್ತಮ ಸಾಧನೆಮಾಡಿದೆ ಎಂದು ಮೇಯರ್ ಸಂತಸ ವ್ಯಕ್ತಪಡಿಸಿದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಚ್ಛತೆಗೆ ವಿಶೇಷ ಗಮನಹರಿಸಲಾಗಿದೆ. ಎಲ್ಲ ವಾರ್ಡ್‌ಗಳ ಪಾಲಿಕೆ ಸದಸ್ಯರು ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ. ಇಡೀ ಬೆಂಗಳೂರಿನಲ್ಲಿ ಜಯನಗರ ಸ್ವಚ್ಚತೆಗೆ ಹೆಸರುವಾಸಿಯಾಗಬೇಕು ಎಂಬುದು ತಮ್ಮ ಗುರಿಯಾಗಿದೆ. ಸ್ವಚ್ಛತೆಯಿಂದ ಆರೋಗ್ಯ, ಆರೋಗ್ಯದಿಂದ ಸಮೃದ್ಧಿ ದೊರೆಯುತ್ತದೆ ಎಂದು ನುಡಿದರು.

ಭೈರಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯ ನಾಗರಾಜು, ಪೌರ ಕಾರ್ಮಿಕರಿಲ್ಲದ ಬೆಂಗಳೂರು ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪೌರ ಕಾರ್ಮಿಕರನ್ನು ಸ್ಮರಿಸುವ ಜತೆಗೆ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರದ ಸ್ವಚ್ಚತೆಗೆ ಶ್ರಮಿಸುವ ಮಹಿಳಾ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಮಾಸ್ಕ್ ಹಾಗೂ ವಿವಿಧ ರೀತಿಯ ರಕ್ಷಣಾ ಕವಚಗಳನ್ನೊಂಡ ಆರೋಗ್ಯ ಕಿಟ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News