ಬಿಜೆಪಿ-ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು: ಪ್ರಕಾಶ್ ರೈ

Update: 2019-03-10 14:39 GMT

ಬೆಂಗಳೂರು, ಮಾ.10: ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ. ಇವರೆಡು ಒಂದು ನಾಣ್ಯದ ಎರಡು ಮುಖಗಳು ಎಂದು ಬಹುಭಾಷಾ ನಟ  ಪ್ರಕಾಶ್ ರೈ ಹೇಳಿದರು.

ರವಿವಾರ ನಗರದ ಗಾಂಧಿಭವನದಲ್ಲಿ ‘ನಮ್ಮ ಧ್ವನಿ ಬಳಗ’ದ ವತಿಯಿಂದ ಆಯೋಜಿಸಿದ್ದ ಪ್ರಬುದ್ದ ಭಾರತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ. ಇವರೆಡು ಒಂದು ನಾಣ್ಯದ ಎರಡು ಮುಖಗಳೇ. ಹೀಗಾಗಿ ಬಿಜೆಪಿಗೆ ಪರ್ಯಾಯವಾಗಿ ಪ್ರಗತಿಪರ ಚಿಂತನೆಗಳು ಮುನ್ನೆಲೆಗೆ ಬರಬೇಕಿದೆ. ಇದಕ್ಕಾಗಿ ಜನತೆಯು ನಿರೀಕ್ಷೆಯಲ್ಲಿದ್ದಾರೆ. ಇದನ್ನು ಪ್ರಗತಿಪರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ದೇವನೂರು ಮಹದೇವ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉದ್ಯೋಗ ಮೂಲಭೂತ ಹಕ್ಕಾಗಿ ಜನಾಭಿಪ್ರಾಯ ರೂಪಿಸಲು ಪ್ರಗತಿಪರ ಸಂಘಟನೆಗಳು ಸಕ್ರಿಯವಾಗಿ ತೊಡಗಬೇಕು ಎಂದು ಕರೆ ನೀಡಿದರು.

ಇಂದು ದೇಶವು ನಿರುದ್ಯೋಗ ಹಾಗೂ ಅನಿಶ್ಚಿಯತೆಯಿಂದ ಕೂಡಿದೆ. ಇದರ ಬಾಧೆಗೆ ಸಿಲುಕಿರುವ ಯುವಕರು ಹತಾಶೆ, ಧ್ವೇಷದಿಂದ ತಪ್ಪು ಹಾದಿಯನ್ನು ತುಳಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೋಮುವಾದಿಗಳು ದೇಶದ ಯುವಕರ ಮನಸಿಗೆ ಹೊಕ್ಕು, ಜಾತಿ, ಧರ್ಮಗಳ ನಡುವೆ ಧ್ವೇಷ ಬಿತ್ತುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಯುವಕರನ್ನು ಕೋಮುವಾದಿಗಳ ಕೈಗೆ ಸಿಗದಂತೆ ತಡೆಯಬೇಕಾದ ಕಾರ್ಯವನ್ನು ಪ್ರಗತಿಪರ ಸಂಘಟನೆಗಳು ಮಾಡಬೇಕು ಎಂದು ತಿಳಿಸಿದರು.

ನಮ್ಮ ಧ್ವನಿ ಬಳಗದ ಮುಖಂಡ ಮಹೇಂದ್ರ ಕುಮಾರ್ ಮಾತನಾಡಿ, ಸಂಘಪರಿವಾರದ ಸಂಘಟನೆಗಳು ತಮ್ಮ ಸ್ವಾರ್ಥಕ್ಕಾಗಿ ಮುಗ್ಧ ಮನಸಿನ ಯುವರಕರನ್ನು ಹಿಂಸೆಗೆ ಪ್ರಚೋದಿಸುತ್ತಿವೆ. ಇದಕ್ಕೆ ಮೊದಲ ಬಲಿಪಶು ಆಗುವುದು ಎಲ್ಲ ಜಾತಿಯ ಬಡವರೇ ಆಗಿದ್ದಾರೆ ಎಂದು ಹೇಳಿದರು.

ಸಂಘಪರಿವಾರದ ಜನವಿರೋಧಿ ಷಡ್ಯಂತ್ರಗಳ ಕುರಿತು ಎಚ್ಚರಗೊಂಡು, ಸ್ವಲ್ಪ ಕಾಲ ಜೆಡಿಎಸ್ ಹಾಗೂ ಕೋಮುವಾದ ವಿರೋಧಿಸಿ ಪ್ರತಿಭಟನೆ ಮಾಡಿ ಕೆಲಕಾಲ ಮೌನವಾಗಿದ್ದೆ. ಆದರೆ, ಗೌರಿ ಲಂಕೇಶ್ ಹತ್ಯೆಯು ಇಡೀ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ನನ್ನ ಮನಸಿಗೆ ಘಾಸಿಗೊಳಿಸಿತು. ಆ ನಂತರ ಕೋಮುವಾದದ ವಿರುದ್ದ ಯುವಜನತೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ ಎಂದು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಮಾತನಾಡಿ, ಇವತ್ತು ದೇಶದಲ್ಲಿ ದೇಶಪ್ರೇಮದ ಬಗ್ಗೆ ತಪ್ಪುತಿಳುವಳಿಕೆಗಳನ್ನು ಮೂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಿಜವಾದ ದೇಶಪ್ರೇಮವೆಂದರೇನು, ಆ ಮೂಲಕ ಜನರ ಸರ್ವತೋಮುಖ ಏಳಿಗೆ ಸಾಧಿಸುವುದು ಹೇಗೆ ಎಂಬುದನ್ನು ತಿಳುವಳಿಕೆ ನೀಡುವುದು ಅಗತ್ಯವಿದೆ.

ದೇಶದ ಅಸ್ಮಿತೆಯ ಬಿಎಸ್‌ಎನ್‌ಎಲ್ ಕಂಪೆನಿಗೆ ಮಾನ್ಯತೆ ಕೊಡದ ಪ್ರಧಾನಿ ಅಂಬಾನಿ ಒಡೆತನದ ಜಿಯೋ ಕಂಪೆನಿಗೆ ಪ್ರಧಾನ ಆದ್ಯತೆ ಕೊಟ್ಟಿರುವುದು ಯಾವ ದೇಶಭಕ್ತಿ ಎಂಬುದನ್ನು ಯುವಜನತೆಗೆ ತಿಳಿಸಿಕೊಡಬೇಕಿದೆ ಎಂದು ಅವರು ತಿಳಿಸಿದರು.

ದೇಶವನ್ನು ಮಾರುವುದನ್ನೆ ದೇಶ ಪ್ರೇಮವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಸರಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚಿಸಿ, ಆ ಜಾಗಕ್ಕೆ ಅದಾನಿ, ಅಂಬಾನಿ ಕಂಪೆನಿಗಳನ್ನು ತರಲಾಗುತ್ತಿದೆ. ಇಂತಹ ದೇಶಭಕ್ತಿಯ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ.

- ದೇವನೂರು ಮಹದೇವ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News