×
Ad

ಸರ್ವೋದಯ, ಸಮಪಾಲು ಭಾಷಣಗಳಲ್ಲಿ ನುಸುಳಿ ಮಾಯವಾಗುತ್ತಿವೆ: ಡಾ.ಚಿತ್ತಯ್ಯ ಪೂಜಾರ್

Update: 2019-03-10 22:13 IST

ಬೆಂಗಳೂರು, ಮಾ.10: ಸರ್ವೋದಯ, ಸಮನ್ವಯ, ಸಮಪಾಲು, ಸಮಬಾಳು ಎಂಬ ಮಾತುಗಳು ಅಕ್ಷರಕ್ಕೆ ಅಂಟಿಕೊಂಡು, ಆಗಾಗ ಭಾಷಣಗಳಲ್ಲಿ ಮಾತ್ರ ನುಸುಳಿ ಮಾಯವಾಗುತ್ತಿವೆ ಎಂದು ಸಂಶೋಧಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನ ಸಮ್ಮೇಳನಾಧ್ಯಕ್ಷರ ಭಾಷಣವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾನತೆ ಎಂಬುದು ಭಾಷಣಗಳ ಬಳಕೆ ಪದವಾಗಿದೆಯೇ ಹೊರತು ಅದನ್ನು ಸಾಧಿಸುವಲ್ಲಿ ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಲಿಷ್ಠವಾದ ಆರೋಗ್ಯಪೂರ್ಣ ಯುವಜನತೆಯೇ ಬಲಿಷ್ಠ ದೇಶದ ಶಕ್ತಿಯಾಗಿದೆ. ವಿದ್ಯಾವಂತರು, ವಿಚಾರವಂತರಾಗಿ, ವಿಚಾರಗಳು ವಿವೇಕವನ್ನು ಬೆಳೆಸಬೇಕು. ಆದರೆ, ವಿದ್ಯಾವಂತರೇ ಈ ದೇಶದ ಅನೇಕ ದುರಂತರಗಳಿಗೆ ಕಾರಣರಾಗುತ್ತಿರುವುದು ವಿಪರ್ಯಾಸ. ಸಮಾಜ ಸುಧಾರಕರು ಯುವ ಮನಸ್ಸುಗಳಿಂದ ದೂರವಾಗುತ್ತಿದ್ದಾರೆ. ಆದರ್ಶಗಳು ಅಪಮೌಲ್ಯಗೊಳ್ಳುತ್ತಿವೆ. ಸಂಬಂಧಗಳು ಸಂಕಟಕ್ಕೆ ಕಾರಣವಾಗುತ್ತಿವೆ. ಮಾತುಗಳು ಮಲಿನಗೊಳ್ಳುತ್ತಿವೆ. ಸಂವಾದಗಳು ಸಂಘರ್ಷಕ್ಕೆ ಕಾರಣವಾಗುತ್ತಿವೆ ಎಂದು ವಿಷಾದಿಸಿದರು.

ಬುದ್ಧ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಮೊದಲಾದವರು ಜನರ ಶಾಂತಿ, ನೆಮ್ಮದಿ, ಸಹಬಾಳ್ವೆ, ಸಮಸಮಾಜದ ನಿರ್ಮಾಣಕ್ಕಾಗಿ ಏನೆಲ್ಲ ತ್ಯಾಗ ಮಾಡಿದರು. ಈಗ ಅವರ ಸಿದ್ಧಾಂತಗಳು ಕೊನೆಗೆ ಅವರ ಭಾವಚಿತ್ರಗಳು ಏತಕ್ಕಾಗಿ ಬಳಕೆಯಾಗುತ್ತಿವೆ ಎಂಬುದನ್ನು ಕಂಡರೆ ಬೇಸರವಾಗುತ್ತದೆ. ಆಯಾ ಮತದವರು ಜನಾಂಗದವರು ಅವರನ್ನು ಮತ್ತೆ ತಂದು ಅದೇ ಗೂಟಕ್ಕೆ ಕಟ್ಟುತ್ತಿದ್ದಾರೆ. ಇದೆಲ್ಲ ಬದಲಾಗಿ ಅವರ ಆದರ್ಶಗಳು, ಕನಸುಗಳು, ಸಾಕಾರಗೊಳ್ಳಲು ನಾವುಗಳೆಲ್ಲ ಪಣತೊಡಬೇಕಾಗಿದೆ ಎಂದು ಸಲಹೆ ನೀಡಿದರು.

ಸೋಮಾರಿತನ, ದ್ವೇಷ, ಅಸೂಯೆ, ಅತಿಯಾದ ಭಾವುಕತೆ, ಭ್ರಷ್ಟಾಚಾರ, ಅಸಹಕಾರ, ಅಸಹಿಷ್ಣತೆಗಳಿಂದ ಮುಕ್ತರಾಗಿ ಸಹಕಾರ, ಭ್ರಾತೃತ್ವ, ಸೋದರತೆ ಹೊಂದಾಣಿಕೆ, ತ್ಯಾಗ ಹಾಗೂ ಅಹಿಂಸೆಯಂತಹ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಹಿರಿಯರು, ಮಕ್ಕಳು, ಸ್ತ್ರೀಯರು ಹಾಗೂ ನೆರೆಹೊರೆಯ ಭಾಷೆ, ಸಂಸ್ಕೃತಿ ಮತ್ತು ದೇಶವನ್ನು ಗೌರವಿಸಬೇಕು ಎಂದು ನುಡಿದರು.

ಇಂದಿನ ಹೋರಾಟಗಳು, ಚಳುವಳಿಗಳು, ಸುಧಾರಣೆ ಹೆಸರಿನಲ್ಲಿ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಮಾಜ ಕಂಟಕಗಳಿಗೆ ದಾರಿಯಾಗುತ್ತಿವೆ. ಸ್ವಾರ್ಥದಿಂದ ಕೂಡಿದ್ದ ಏಕವ್ಯಕ್ತಿಯ ಏಕೋದ್ದೇಶಕ್ಕಾಗಿ ನಡೆಯುತ್ತಿದ್ದು, ಸಾಮಾಜಿಕವಾದ- ಸಮಾಜಮುಖಿಯಾದ ಕಾಳಜಿ ಕಾಣದಂತೆ ಆಗಿದೆ. ಅಲ್ಲದೆ, ಹದಗೆಟ್ಟು ಗಬ್ಬುನಾರುತ್ತಿರುವ ರಾಜಕರಣವನ್ನು ಇಂದಿನ ಯುವಪೀಳಿಗೆ ಶುದ್ಧೀಕರಿಸಿ ಸ್ಥಿರಿಕರಿಸಬೇಕಾಗಿದೆ. ಜಾತಿರಹಿತ, ಸ್ವಾರ್ಥರಹಿತ, ಸಮೃದ್ಧಿ ‘ಕಲ್ಯಾಣ ಕರ್ನಾಟಕ’ ನಮ್ಮ ಗುರಿಯಾಗಬೇಕಾಗಿದೆ ಎಂದರು.

ಯುವಜನತೆ ರಾಜಕಾರಣಿಗಳ ಗುಲಾಮರಾಗುತ್ತಿದ್ದಾರೆ. ಡ್ರಗ್ ಮಾಫಿಯಾಗಳಿಗೆ ದಲ್ಲಾಳಿಗಳಾಗುತ್ತಿದ್ದಾರೆ. ಇದರಿಂದ ಹಳ್ಳಿ- ನಗರವೆಂಬ ಭೇದಭಾವವಿಲ್ಲದೆ ಯುವ ಸಮೂಹ ಹಾಳಾಗುತ್ತಿದೆ. ಇದರಿಂದ ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಹಗಲು ದರೋಡೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು, ಅಸಹಾಯಕರು, ಅಮಾಯಕರು ಆತಂಕದಲ್ಲಿ ಬದುಕುತ್ತಿದ್ದಾರೆ. ಅದಕ್ಕೆಲ್ಲ ಯಾರು ಕಾರಣ? ಯಾರನ್ನು ದೂರುವುದು? ಪ್ರಭುತ್ವವೇ ಎಲ್ಲದಕ್ಕೂ ಕಾರಣವೇ? ನಮ್ಮ ಪಾಲು ಇಲ್ಲವೆ ಚಿಂತಿಸಬೇಕಾಗಿದೆ ಎಂದು ಹೇಳಿದರು.

ಜಾತಿ-ಧರ್ಮ ಮೀರಿದ ಸಾಮಾಜಿಕ ಮತ್ತು ಸಾಮೂದಾಯಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಯುವ ಜನಾಂಗಬೇಕಾಗಿದ್ದು, ಸಾಹಿತ್ಯದ ಓದು, ಚರ್ಚೆ, ಅಂತರಂಗವನ್ನು ಒಮ್ಮೆ ಕೇಳಿಕೊಂಡು ಮುಂದಿನ ನಡೆಯನ್ನು ನಿರ್ಧರಿಸುವುದು, ಪರಂಪರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಹಾಗೂ ಹಿರಿಯರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಇಂದಿನ ಶತ್ರುಗಳು ಕೋಮುವಾದ, ಜಾತೀವಾದ, ಭ್ರಷ್ಟಚಾರವಾಗಿದ್ದು, ದಿನೇ ದಿನೆ ಕೆಲವರೇ ಶ್ರೀಮಂತರಾಗುವ, ನೈಸರ್ಗಿಕ ಸಂಪತ್ತು ಕೆಲವರ ಪಾಲಾಗುತ್ತಿರುವ, ಅಧಿಕಾರ ರಾಜಕಾರಣ ಶ್ರೀಮಂತ ಪರವಾಗಿರುವ ವಾತಾವರಣ ಬದಲಾಗಬೇಕಿದೆ. ಈ ಜವಾಬ್ದಾರಿ ಮುಂದಿನ ತಲೆಮಾರಿನ ಮೇಲಿದೆ.

- ಡಾ.ಡಿ.ಕೆ.ಚಿತ್ತಯ್ಯ ಪೂಜಾರ್, ಸಂಶೋಧಕ

21ನೇ ಶತಮಾನದಲ್ಲಿ ಜನಜಾಗೃತಿಗಿಂತ ಜಾತಿ, ಒಳಜಾತಿ, ಪಂಗಡ- ಒಳಪಂಗಡ, ಧರ್ಮ, ವರ್ಗಗಳ ಜಾಗೃತಿಗಳು ಹೆಚ್ಚಾಗಿ ನಡೆಯುತ್ತವೆ. ಅಂದರೆ ಸಂಘಟನೆಗಳು ಹೋಳಾಗಿ ವಿಘಟನೆಗಳು ಪ್ರಧಾನವಾಗುತ್ತಿವೆ. ಇದು ಸಾಧಕವೋ-ಬಾಧಕವೋ ಚಿಂತಿಸಬೇಕಾಗಿದೆ.

- ಡಾ.ಡಿ.ಕೆ.ಚಿತ್ತಯ್ಯ ಪೂಜಾರ್, ಸಂಶೋಧಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News