×
Ad

ಮಹಿಳೆಯರು ಹೆಚ್ಚೆಚ್ಚು ರಾಜಕಾರಣಕ್ಕೆ ಬರುವುದು ಅವಶ್ಯ: ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ

Update: 2019-03-10 22:23 IST

ಬೆಂಗಳೂರು, ಮಾ.10: ಇಂದಿನ ರಾಜಕೀಯಕ್ಕೆ ಹೆಚ್ಚೆಚ್ಚು ಮಹಿಳೆಯರು ಬರುವುದು ಅವಶ್ಯಕತೆಯಿದ್ದು, ಪ್ರಭುದ್ಧ ಮಹಿಳೆಯರು ಸಂಘಟನೆಯ ಮುಖಾಂತರ ಚುನಾವಣಾ ಕಣಕ್ಕೆ ಧುಮುಕಬೇಕೆಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಕರೆ ನೀಡಿದರು. 

ರವಿವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆಡಳಿತವನ್ನು 16 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ ಇಂದಿರಾಗಾಂಧಿ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದರು.

ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಯೋಗದ ಅಭಿಯಾನ ನಿರ್ದೇಶಕರಾದ ಡಾ.ಬಿ.ಆರ್.ಮಮತಾ ಮಾತನಾಡಿ, ನಮ್ಮ ಕಣ್ಣ ಮುಂದೆ ಅನೇಕ ಸಾಧಕ ಮಹಿಳೆಯರು ಇದ್ದಾರೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾವು ಕೆಲಸ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಹೇಳಿದರು. 

ಮಹಿಳೆಯರು ಸ್ವಾವಲಂಬಿಯಾಗಲು ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅದರ ಸೌಲಭ್ಯ ಪಡೆಯಬಹುದು. ಅಲ್ಲದೆ, ಸೇವಾ ಕ್ಷೇತ್ರದಲ್ಲಿ ತುಮಕೂರಿನ ದಾಸೋಹಿ ಎಂದೇ ಹೆಸರಾದ ಸಿದ್ಧಗಂಗಮ್ಮ ಮತ್ತು ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತೆ ಗೀತಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಮಂಗಲಿ ಸೇವಾ ಆಶ್ರಮದ ಎಸ್.ಜಿ.ಸುಶೀಲಮ್ಮ ಮಾತನಾಡಿ, ಮಹಿಳೆಯರ ಸ್ಥೈರ್ಯ, ಧೈರ್ಯ ಇಂದು ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು. ಪತ್ರಕರ್ತೆ ಎಚ್.ಜಿ.ಶೋಭಾ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಮತವನ್ನು ಯೋಚಿಸಿ ಅರ್ಹರಿಗೆ ಚಲಾವಣೆ ಮಾಡಬೇಕೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News