543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎಗೆ 564 ಸೀಟುಗಳು !

Update: 2019-03-11 05:04 GMT

ಹೊಸದಿಲ್ಲಿ, ಮಾ.11: ಸಿ-ವೋಟರ್ ಜತೆಗೂಡಿ ನಡೆಸಲಾದ ಚುನಾವಣಾ ಸಮೀಕ್ಷಾ ಫಲಿತಾಂಶವನ್ನು ರವಿವಾರ ಪ್ರಸಾರ ಮಾಡಿದ ಸುದ್ದಿವಾಹಿನಿ ಎಬಿಪಿ ನ್ಯೂಸ್ ತನ್ನ ಪ್ರಮಾದವೊಂದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿ ಸಾಕಷ್ಟು ಕುತೂಹಲಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬಹುಮತಕ್ಕೆ ಅಗತ್ಯವಾದ 273 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳು ದೊರಕಬಹುದು ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದೆ. ಆದರೆ ಈ ಸುದ್ದಿ ಬಿತ್ತರಿಸುವ ಸಂದರ್ಭ ಸುದ್ದಿ ವಾಹಿನಿಯ ಪರದೆಯ ಮೇಲೆ ಮೂಡಿದ ಸಂಖ್ಯೆಗಳೇ ಎಡವಟ್ಟಿಗೆ ಕಾರಣವಾಗಿದೆ.

ಎನ್‌ಡಿಎಗೆ 264 ಸ್ಥಾನಗಳು ಲಭಿಸಬಹುದೆಂದು ಈ ಸಮೀಕ್ಷೆ ಅಂದಾಜಿಸಿದೆ. ಆದರೆ ಟಿವಿ ಪರದೆಯ ಮೇಲೆ ಮೂಡಿದ ಸಂಖ್ಯೆ ಮಾತ್ರ 264ರ ಬದಲು 564 ಆಗಿದೆ. ಪರದೆಯಲ್ಲಿ ಕಾಣಿಸಿದಂತೆ ಒಟ್ಟು 543 ಸ್ಥಾನಗಳ ಪೈಕಿ ಎನ್‌ಡಿಎಗೆ 564 ಸ್ಥಾನಗಳು ಹಾಗೂ ಯುಪಿಎಗೆ 141 ಸ್ಥಾನಗಳು ಎಂದು ಬರೆಯಲಾಗಿತ್ತು.

ಈ ಸುದ್ದಿವಾಹಿನಿ ಬಿಜೆಪಿ ಪರ ಎಂದು ಇತ್ತೀಚೆಗೆ ಹಲವು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದದಿಂದಾಗಿ ವಾಹಿನಿ ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಕೆಲವರು ಸುದ್ದಿ ವಾಹಿನಿಯ‘ಆಪ್ಕೋ ರಖೇ ಆಗೆ’ ಘೋಷ ವಾಕ್ಯವನ್ನೇ ಅಣಕವಾಡಿದ್ದಾರೆ. ‘‘ಎಬಿಪಿ ನ್ಯೂಸ್ ನಿಮ್ಮನ್ನು ಸದಾ ಮುಂದಿರುವಂತೆ ಮಾಡುತ್ತದೆ, ಅದೆಷ್ಟು ಮುಂದೆ ಆಂದರೆ ಅದು ಈಗಷ್ಟೇ 564 ಸ್ಥಾನಗಳೊಂದಿಗೆ ಮೋದಿ ನೇತೃತ್ವದ ಸರಕಾರ ರಚಿಸಿದೆ’’ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೋದಿ ಸರಕಾರವನ್ನು ಟೀಕಿಸಿ ವರದಿಗಳನ್ನು ಪ್ರಕಟಿಸಿದ ತನ್ನ ಆಡಳಿತ ಸಂಪಾದಕ ಸೇರಿದಂತೆ ಮೂವರು ಹಿರಿಯ ಪತ್ರಕರ್ತರನ್ನು ಉಚ್ಛಾಟಿಸಿ ಈ ಸುದ್ದಿ ವಾಹಿನಿ ಕಳೆದ ವರ್ಷ ಸುದ್ದಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News