ಚುನಾವಣಾ ವೆಚ್ಚ-ಅಕ್ರಮಗಳ ಮೇಲೆ ಹದ್ದಿನ ಕಣ್ಣು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2019-03-11 17:17 GMT

ಬೆಂಗಳೂರು, ಮಾ.11: ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಚುನಾವಣಾ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ನಗರದ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಜಿಲ್ಲಾ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಪ್ರತಿ ಅಭ್ಯರ್ಥಿ 70 ಲಕ್ಷ ರೂ.ಗಿಂತ ಅಧಿಕ ಹಣ ಖರ್ಚು ಮಾಡುವಂತಿಲ್ಲ ಎಂದು ತಿಳಿಸಿದರು.

ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಲು ಉದ್ದೇಶಿಸುವ ಬಹಿರಂಗ ಸಭೆ, ಸಮಾರಂಭ, ಪ್ರಚಾರಕ್ಕಾಗಿ ಬಳಕೆ ಮಾಡುವ ಹಣ ಸೇರಿದಂತೆ ಎಲ್ಲ ಹಂತದ ಖರ್ಚು-ವೆಚ್ಚದ ವಿವರಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುವುದು. ಪರಿಶೀಲನೆಯಲ್ಲಿ ಅಭ್ಯರ್ಥಿಗಳು ಸರಿಯಾದ ಮಾಹಿತಿಯನ್ನು ಪ್ರತಿದಿನವೂ ಆಯೋಗದ ಗಮನಕ್ಕೆ ತರಬೇಕು ಎಂದ ಅವರು, ಆಯೋಗ ನಿಗದಿ ಮಾಡಿರುವ 70 ಲಕ್ಷಕ್ಕಿಂತ ಅಧಿಕ ಹಣ ಖರ್ಚು ಮಾಡಿರುವುದು ಸಾಬೀತಾದರೆ ಸುಪ್ರೀಂಕೋರ್ಟ್ ಆದೇಶದನ್ವಯ ಸದಸ್ಯತ್ವ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದೆ. ಅದರ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದವರೆಗೂ ಎರಡು ಸಾವಿರಕ್ಕೂ ಅಧಿಕ ಜಾಹೀರಾತುಗಳನ್ನು ತೆರವು ಮಾಡಲಾಗಿದೆ. ಬಸ್‌ ನಿಲ್ದಾಣ, ಮೇಲುಸೇತುವೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕರು, ಸಚಿವರು ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರುಗಳು ಅಂಟಿಸಿದ್ದ ಬೋರ್ಡ್, ಫ್ಲೆಕ್ಸ್‌ಗಳು ಎಲ್ಲವನ್ನೂ ತೆರವು ಮಾಡಲಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಖರ್ಚು ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಸಲು 3 ಲೋಕಸಭಾ ಕ್ಷೇತ್ರಗಳಲ್ಲಿ 24 ಮುಖ್ಯ ಲೆಕ್ಕ ನಿರ್ವಹಣಾಧಿಕಾರಿ, 24 ಸಹಾಯಕ ವೆಚ್ಚ ವೀಕ್ಷಕರು ಮತ್ತು 24 ಲೆಕ್ಕ ತಂಡದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ. ಪ್ರತಿ ಅಭ್ಯರ್ಥಿಯು ಪ್ರಚಾರಕ್ಕಾಗಿ ನಡೆಸುವ ಸಮಾರಂಭಗಳು ಹಾಗೂ ಇತರ ಮಾದರಿ ಪ್ರಚಾರಗಳನ್ನು ವಿಡಿಯೋ ಮಾಡಲಾಗುವುದು. ಅಭ್ಯರ್ಥಿಗಳು ತಾವು ಖರ್ಚು ಮಾಡುವ ವೆಚ್ಚದ ಪ್ರತಿ ಮಾಹಿತಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಬಿಬಿಎಂಪಿ, ಬಿಡಿಎ, ಜಲ ಮಂಡಳಿ, ಬಿಎಂಆರ್‌ಸಿಎಲ್ ಸೇರಿದಂತೆ ಸರಕಾರಿ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಸರಕಾರಿ ವಾಹನವನ್ನು ಈಗಾಗಲೇ ಹಿಂಪಡೆಯಲಾಗಿದೆ. ಬಿಬಿಎಂಪಿ ಹಾಗೂ ಮತ್ತಿತರೆ ಸರಕಾರಿ ವೆಬ್‌ಸೈಟ್‌ಗಳಲ್ಲಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮೇಯರ್ ಹಾಗೂ ಮತ್ತಿತರೆ ಜನಪ್ರತಿನಿಧಿಗಳ ಭಾವಚಿತ್ರ ಹಾಗೂ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಹೇಳಿಲದರು.

ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ಮಾದರಿ ನೀತಿ ಸಂತೆ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ (99455 36838), ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ (94549 49888) ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಜಯನಗರ 2ನೇ ಹಂತದಲ್ಲಿರುವ ದಕ್ಷಿಣ ವಲಯ ಕಚೇರಿಯಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದರು.

ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 88 ಲಕ್ಷದ 81 ಸಾವಿರದ 66 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನ ಪಟ್ಟಿಯಲ್ಲಿ ಹೆಸರು ಸೇರಿಸಲು ಮಾ.16 ರವರೆಗೂ ಕಾಲಾವಕಾಶವಿದ್ದು, ಅರ್ಹರು ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಆಯುಕ್ತ ಮಂಜುನಾಥ್‌ಪ್ರಸಾದ್ ತಿಳಿಸಿದರು.

ಮಾಜಿ ಯೋಧರು, ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಹೊರತುಪಡಿಸಿ ಅನುಮತಿ ಪಡೆದು ಆಯುಧಗಳನ್ನು ಬಳಕೆ ಮಾಡುತ್ತಿರುವ ಎಲ್ಲರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯುಧಗಳನ್ನು ನೀಡಬೇಕು. ನಗರದಾದ್ಯಂತ 12-13 ಸಾವಿರ ಪೊಲೀಸ್‌ರನ್ನು ನಿಯೋಜನೆ ಮಾಡಲಾಗುವುದು. ಈಗಾಗಲೇ ಕ್ರಿಮಿನಲ್ ಪ್ರಕರಣಗಳಿರುವ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ರೌಡಿಶೀಟರ್‌ಗಳಿಗೆ ನಾನ್‌ಬೇಲಬಲ್ ವಾರೆಂಟ್ ನೀಡಿದ್ದು, ಎಲ್ಲ ಕಡೆ ಕಟ್ಟೆಚ್ಚರ ವಹಿಸಲಾಗಿದೆ.

-ಟಿ.ಸುನೀಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News