ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಭೇದಿಸಿದ ಸಿಸಿಬಿ: ಜೆಡಿಎಸ್ ನಾಯಕಿ ಪುತ್ರಿ ಸೇರಿ ಆರು ಮಂದಿಯ ಸೆರೆ
ಬೆಂಗಳೂರು, ಮಾ.12: ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸೇರಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮಂಗಳವಾರ ಆರೋಪಿಗಳಿಗೆ 1ನೇ ಎಸಿಎಂಎಂ ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ಆದೇಶಿಸಿದೆ.
ಜೆಡಿಎಸ್ ಮಹಿಳಾ ನಾಯಕಿಯ ಪುತ್ರಿ ವರ್ಷಿಣಿ(21) ಪ್ರಕರಣದ ಎರಡನೇ ಆರೋಪಿಯಾಗಿದ್ದಾಳೆ. ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ ನಿವಾಸಿ ರೂಪೇಶ್ ಆರ್.(25) ಕೊಲೆ ಕೃತ್ಯದ ಪ್ರಮುಖ ರೂವಾರಿ. ಅದೇ ರೀತಿ, ನಾಗರಭಾವಿ ನಿವಾಸಿ ದೇವರಾಜ(24), ಹೊಸಹಳ್ಳಿ ವರಣ್ ಕುಮಾರ್(24) ಮಾಗಡಿ ನಿವಾಸಿ ಮಧುಕುಮಾರ್(21) ಹಾಗೂ ಚಿಕ್ಕಅರಸಿಕೆರೆಯ ಗೋಪನಹಳ್ಳಿ ಗ್ರಾಮದ ಅಲೋಕ ಬಂಧಿತರು ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಘಟನೆ ವಿವರ: ವರ್ಷಿಣಿ ಮತ್ತು ರೂಪೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ವರ್ಷಿಣಿ ತಂದೆ ರೂಪೇಶ್‌ಗೆ ಬುದ್ಧಿ ಹೇಳುವಂತೆ ಲಕ್ಷ್ಮಣನ ಬಳಿ ಹೇಳಿದ್ದರು. ಬಳಿಕ ಲಕ್ಷ್ಮಣ, ವರ್ಷಿಣಿ ಸಹವಾಸಕ್ಕೆ ಬರದಂತೆ ರೂಪೇಶ್‌ಗೆ ಬೆದರಿಕೆ ಹಾಕಿದ್ದ. ಈ ಘಟನೆ ಬಳಿಕ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ಸಲುಗೆ ಹೆಚ್ಚಾಗಿತ್ತು. ಇಬ್ಬರ ನಡುವೆ ಸಂಬಂಧವಿತ್ತು ಎಂದು ತಿಳಿದುಬಂದಿದೆ.
ತಮ್ಮ ಪ್ರೀತಿಗೆ ಅಡ್ಡವಾದ ಲಕ್ಷ್ಮಣನನ್ನು ಹತ್ಯೆ ಮಾಡಲು ಕ್ಯಾಟ್ ರವಿ ಜೊತೆ ಸೇರಿ ರೂಪೇಶ್ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಅದಕ್ಕಾಗಿ ವರ್ಷಿಣಿ ಸಹಾಯ ಪಡೆದಿದ್ದ. ಅದರಂತೆ ಮಾ.7ರಂದು ಲಕ್ಷ್ಮಣನ ಮೇಲೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮಗಳ ಪಾತ್ರವಿಲ್ಲ: ಕೊಲೆಯಲ್ಲಿ ನನ್ನ ಮಗಳ ಪಾತ್ರವಿಲ್ಲ. ರಾಜಕೀಯ ದ್ವೇಷದಿಂದ ಅವಳ ಹೆಸರು ಸೇರಿಸಲಾಗಿದೆ. ಬದುಕಿದ್ದಾಗಲೂ ಲಕ್ಷ್ಮಣ ನಮ್ಮ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದ. ಮೃತಪಟ್ಟ ನಂತರವೂ ತೊಂದರೆ ನೀಡುತ್ತಿದ್ದಾನೆ ಎಂದು ವರ್ಷಿಣಿ ತಾಯಿ ಸುದ್ದಿಗಾರರಿಗೆ ಹೇಳಿದರು.
ಶಾಸಕನ ಮನೆಗೆ ಕನ್ನ ?
ಮಳವಳ್ಳಿ ಶಾಸಕ ಕೆ.ಅನ್ನದಾನಿ ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ರೂಪೇಶ್ ಜೈಲು ಸೇರಿದ್ದ. ಬಳಿಕ, ಜೈಲಿನಲ್ಲಿ ಕೆಲವರನ್ನು ಪರಿಚಯ ಮಾಡಿಕೊಂಡಿದ್ದ. ಈತ ಸಿನಿಮಾ, ಧಾರಾವಾಹಿಗಳ ಸಹ ನಿರ್ದೇಶಕ ಎನ್ನಲಾಗಿದ್ದು, ನೃತ್ಯ ತರಗತಿ ನಡೆಸುತ್ತಿದ್ದ ವೇಳೆ ವರ್ಷಿಣಿ ಪರಿಚಯವಾಗಿತ್ತು ಎಂದು ಹೇಳಲಾಗುತ್ತಿದೆ.
ರೌಡಿ ಲಕ್ಷ್ಮಣನ ಹಿನ್ನೆಲೆ
ಲಕ್ಷ್ಮಣ್ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿ 20ಕ್ಕೂ ಅಧಿಕ ಪ್ರಕರಣಗಳಿವೆ. ಕೆಂಗೇರಿ ಠಾಣೆಯಲ್ಲಿ ಬಿ ರೌಡಿಪಟ್ಟಿ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎ ರೌಡಿಪಟ್ಟಿ ಮತ್ತು ರಿಯಲ್ ಎಸ್ಟೆಟ್ ಉದ್ಯಮಿ ಮಿರ್ಲೆ ವರದರಾಜ್ ಪ್ರಕರಣದಲ್ಲಿ ಸಿಸಿಬಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಎನ್ನಲಾಗಿದೆ. ಮಿರ್ಲೆ ಪ್ರಕರಣದಲ್ಲಿ ಮದ್ದೂರಿನ ಮಲನಗುಪ್ಪೆತೋಟದ ಮನೆಯಿಂದ ಬಂಧಿಸಿ ಜೈಲಿಗೆ ತಳ್ಳಿದ್ದರು. ಬಳಿಕ ಆರೋಪಿ ಜಾಮೀನು ಪಡೆದು ಕಳೆದ ಫೆ.20ರಂದು ಹೊರಬಂದಿದ್ದ ಎಂದು ಆರೋಪಿಸಲಾಗಿದೆ.