ನಾಟಕಗಳನ್ನೂ ಬಿಡದ ಚುನಾವಣಾ ನೀತಿ ಸಂಹಿತೆ: ರಾತ್ರಿ ಪ್ರದರ್ಶನ ರದ್ದು ಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ

Update: 2019-03-12 15:47 GMT

ಬೆಂಗಳೂರು, ಮಾ.12: ಚುನಾವಣಾ ನೀತಿ ಸಂಹಿತೆ ವಿವಿಧ ಕ್ಷೇತ್ರಗಳ ಮೇಲೆ ಹೇರಲ್ಪಡುತ್ತಿದ್ದು, ಇದೀಗ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ನಾಟಕ ಪ್ರದರ್ಶನಗಳನ್ನು ರದ್ದು ಪಡಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಜಾತ್ರೆಯಲ್ಲಿ ಗುಬ್ಬಿಯ ಬಿಎಸ್‌ಆರ್ ನಾಟಕ ಕಂಪೆನಿ ಹಾಗೂ ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘಗಳು ಕ್ಯಾಂಪ್ ಹಾಕಿವೆ. ಮಂಗಳೂರು ಹುಡುಗ ಹುಬ್ಬಳ್ಳಿ ಹುಡುಗಿ ಹಾಗೂ ಬಂದರ ನೋಡಾ ಬಂಗಾರಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಈ ನಾಟಕಗಳ ಪ್ರದರ್ಶನಕ್ಕೆ ಅಧಿಕೃತವಾಗಿ ಒಂದು ತಿಂಗಳ ಅನುಮತಿಯನ್ನು ಈಗಾಗಲೆ ಪಡೆಯಲಾಗಿದೆ. ಆದರೆ, ರಾತ್ರಿ ಪ್ರದರ್ಶನ ರದ್ದು ಮಾಡಿ ಎಂದು ಹಗರಿಬೊಮ್ಮನಹಳ್ಳಿಯ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮೌಖಿಕ ಆದೇಶ ನೀಡಿ ಮಾ.11ರಿಂದ ಪ್ರದರ್ಶನ ನಿಲ್ಲಿಸಿದ್ದಾರೆ. ಮಾಡುವುದಿದ್ದರೆ ಸಂಜೆ 6ಗಂಟೆಗೆ ನಾಟಕ ಆಡಿ ರಾತ್ರಿ 9ಗಂಟೆಯ ಪ್ರದರ್ಶನ ರದ್ದು ಮಾಡಿ ಎಂದು ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಾತ್ರಿ ನಾಟಕ ಮಾಡಬಾರದು ಎಂದು ಯಾವ ಚುನಾವಣಾ ನೀತಿ ಸಂಹಿತೆಯ ಕಾನೂನಿನಲ್ಲಿದೆ. ನಾಟಕ ಪ್ರದರ್ಶನಗಳಿಗೆ ಹಾಕಿದ ನಿರ್ಬಂಧಗಳು ಸಿನೆಮಾ ಪ್ರದರ್ಶನಗಳಿಗೆ ಯಾಕಿಲ್ಲ. ಎರಡೂ ಮನರಂಜನಾ ಮಾಧ್ಯಮಗಳೇ ಆಗಿದ್ದರೂ ರಾತ್ರಿ ಸಿನೆಮಾಗಳನ್ನು ಪ್ರದರ್ಶಿಸಬಹುದು. ಆದರೆ, ನಾಟಕ ಪ್ರದರ್ಶನ ಮಾಡಬಾರದು ಎನ್ನುವುದು ತಾರತಮ್ಯ ಧೋರಣೆಯೆಂದು ಕಲಾವಿದ ಶಶಿಕಾಂತ ಯಡಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಟಕ ಪ್ರದರ್ಶನವನ್ನೆ ನಂಬಿ ನಾಟಕ ಕಂಪೆನಿಯಲ್ಲಿ ಮೂವತ್ತಕ್ಕ್ಕೂ ಹೆಚ್ಚು ಕಲಾವಿದರು ಬದುಕುತ್ತಿರುತ್ತಾರೆ. ಲಕ್ಷಾಂತರ ರೂ.ಖರ್ಚು ಮಾಡಿ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡು ಪರವಾನಿಗೆ ಪಡೆದಿರುತ್ತಾರೆ. ಹೀಗಾಗಿ ಪ್ರದರ್ಶನಗಳನ್ನು ರದ್ದು ಪಡಿಸುವುದರಿಂದ ಕಲಾವಿದರಿಗೆ ಹಾಗೂ ನಾಟಕ ಕಂಪೆನಿಯ ಮಾಲಕರಿಗೆ ಸಮಸ್ಯೆ ಆಗಲಿದೆ ಎಂದು ಬರೆದುಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬಾರದು. ನಾಟಕ ನಡೆಯುವುದೆ ರಾತ್ರಿ ವೇಳೆ. ಮನರಂಜನೆಗಾಗಿ ನಾಟಕ ಮಾಡುವುದೆ ವಿನಃ ಇದರಲ್ಲಿ ರಾಜಕೀಯ ಸ್ವಹಿತಾಸಕ್ತಿ ಇರುವುದಿಲ್ಲ. ಹೀಗಾಗಿ ಅಧಿಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ ಎಂದು ರಂಗಕಲಾವಿದ ಗಣೇಶ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News