ರಾಜಕೀಯ ಸಮಾನತೆ ಬಂದಾಗ ಮಾತ್ರ ಮಹಿಳಾಪರ ಕಾನೂನು ಅನುಷ್ಠಾನ ಸಾಧ್ಯ: ಪಾರಿಜಾತ

Update: 2019-03-12 15:55 GMT

ಬೆಂಗಳೂರು, ಮಾ.12: ಮಹಿಳೆಗೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮಾನವಾದ ಅವಕಾಶಗಳು ಬಂದಾಗ ಮಾತ್ರ ಮಹಿಳಾ ಪರವಾದ ಕಾನೂನುಗಳು ರೂಪಗೊಳ್ಳಲು ಸಾಧ್ಯವೆಂದು ಗೃಹ ಕಾರ್ಮಿಕರ ಹಕ್ಕುಗಳ ಸಂಘಟನೆಯ ಹೋರಾಟಗಾರ್ತಿ ಪಾರಿಜಾತ ಅಭಿಪ್ರಾಯಿಸಿದರು.

ಮಂಗಳವಾರ ಸ್ತ್ರೀ ಜಾಗೃತಿ ಸಮಿತಿ ವತಿಯಿಂದ ನಗರದ ಎಸ್ಸಿಎಂ ಹೌಸ್‌ನಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆಲ್ಲಾ ಮಹಿಳಾ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲದೆ, ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ವಿಷಾದಿಸಿದರು.

ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರು ಬಿಟ್ಟಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಸಂವಿಧಾನದ ಮೂಲಕ ನಿರ್ಮೂಲನೆ ಮಾಡುವಂತಹ ಕಾನೂನನ್ನು ರೂಪಿಸಿದ್ದಾರೆ. ಆದರೆ, ಆಡಳಿತದಲ್ಲಿರುವ ಪುರುಷ ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ಅಧಿಕಾರಕ್ಕಾಗಿ ಮಹಿಳೆಗೆ ಸಮಾನವಾದ ಅವಕಾಶಗಳನ್ನು ನೀಡುತ್ತಿಲ್ಲ. ಹೀಗಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಸಮುದಾಯ ಮುನ್ನೆಲೆಗೆ ಬಂದಾಗ ಮಾತ್ರ ಮಹಿಳಾ ದೌರ್ಜನ್ಯ ವಿರುದ್ಧ ಕಟ್ಟುನಿಟ್ಟಿನಲ್ಲಿ ಕಾನೂನುಗಳು ಜಾರಿ ಆಗಲು ಸಾಧ್ಯವೆಂದು ಅವರು ಹೇಳಿದರು.

ಮಹಿಳಾ ಆಯೋಗದ ಸದಸ್ಯೆ ಆರತಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ದವಾಗಿ ರಾಜ್ಯ ಮಹಿಳಾ ಆಯೋಗ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಈಡಾದ ಮಹಿಳೆಗೆ ನೀಡುವ ಪರಿಹಾರದ ಮೊತ್ತವನ್ನು 3ಲಕ್ಷ ರೂ.ನಿಂದ 6ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಗೃಹ ಕಾರ್ಮಿಕರ ಹಕ್ಕುಗಳ ಸಂಘಟನೆ ಹೋರಾಟಗಾರ್ತಿ ದೀಪಾ, ಪವಿತ್ರಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ತ್ರೀ ಜಾಗೃತಿ ಸಮಿತಿಯ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News