ಕನ್ನಡ ನಾಡಿಗೆ ಕೋ.ಚೆನ್ನಬಸಪ್ಪನವರ ಕೊಡುಗೆ ಅಪಾರ: ನ್ಯಾ.ಕೆ.ಎಲ್.ಮಂಜುನಾಥ್

Update: 2019-03-12 15:57 GMT

ಬೆಂಗಳೂರು, ಮಾ.12: ಹಿರಿಯ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪನವರು ಕ್ವಿಟ್ ಇಂಡಿಯಾ ಚಳುವಳಿ ಸೇರಿ ಇನ್ನಿತರ ಚಳುವಳಿಗಳಲ್ಲಿ ಭಾಗವಹಿಸಿ ಈ ನಾಡನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾ.ಕೆ.ಎಲ್.ಮಂಜುನಾಥ್ ಹೇಳಿದ್ದಾರೆ.

ಮಂಗಳವಾರ ಹೈಕೋರ್ಟ್‌ನ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ನಿಧನ ಹೊಂದಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಹಿರಿಯ ಸಾಹಿತಿ ನಾಡೋಜ ಕೋ.ಚನ್ನಬಸಪ್ಪರವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಗಿನ ಕಾಲಕ್ಕೆ ಬಳ್ಳಾರಿ ಜಿಲ್ಲೆಯನ್ನು ತಮಿಳುನಾಡಿಗೆ ಸೇರಿಸಬೇಕೆಂಬ ಹೋರಾಟಗಳು ನಡೆದಿದ್ದವು. ತುಂಗಭದ್ರಾ ನದಿ ಆಂಧ್ರಪ್ರದೇಶದ ಪಾಲಾಗುತ್ತಿತ್ತು. ಆದರೆ, ಕೋ.ಚೆನ್ನಬಸಪ್ಪನವರು ತಮ್ಮ ಹೋರಾಟದಿಂದಲೇ ಬಳ್ಳಾರಿ ಜಿಲ್ಲೆ ಹಾಗೂ ತುಂಗಭದ್ರಾ ನದಿಯನ್ನು ಕರ್ನಾಟಕದಲ್ಲಿಯೇ ಉಳಿಯುವಂತೆ ಮಾಡಿದರು ಎಂದು ಹೇಳಿದರು. ಸಮಾಜದ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡಿದ್ದ ಚೆನ್ನಬಸಪ್ಪನವರು ನ್ಯಾಯಾಧೀಶರಾಗುವುದರ ಜೊತೆಗೆ 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. 

ನ್ಯಾಯಮೂರ್ತಿ ಎಸ್.ಸುಜಾತ ಮಾತನಾಡಿ, ಕೋ.ಚೆನ್ನಬಸಪ್ಪನವರು ಜ್ಞಾನದ ಭಂಡಾರವೆ ಅವರಾಗಿದ್ದರು. ನಾನೂ ವಕೀಲ ವೃತ್ತಿಯನ್ನು ಆರಂಭಿಸಿದಾಗ ಅವರ ಬಳಿಯೆ ಜ್ಯೂನಿಯರ್ ಆಗಿ ಸೇರಿಕೊಂಡಿದ್ದೆ. ಅವರು ನನ್ನನ್ನು ತಮ್ಮ ಮಗಳಂತೆ ಕಂಡು ತಮಗಿರುವ ವಿದ್ಯೆಯನ್ನು ನನಗೂ ಹಂಚುತ್ತಿದ್ದರು. ಇಂದು ನಾನು ನ್ಯಾಯಮೂರ್ತಿ ಆಗಲು ಅವರ ಕೊಡುಗೆಯೂ ಇದೆ ಎಂದು ಹೇಳಿದರು.

ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ರವಿವರ್ಮಕುಮಾರ್ ಮಾತನಾಡಿ, ಕೋ.ಚೆನ್ನಬಸಪ್ಪನವರು ಕಾರ್ಮಿಕರ ಬಗ್ಗೆ ಹಾಗೂ ಸಂವಿಧಾನದ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡಿದ್ದರು ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಡಿ.ಸಿ.ಪರಮೇಶ್ವರಯ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News