ಸಹಕಾರ ಸಂಘದಿಂದ ಇನ್ನಷ್ಟು ಪತ್ರಕರ್ತರಿಗೆ ಸಹಾಯವಾಗಲಿ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-03-12 16:02 GMT

ಬೆಂಗಳೂರು, ಮಾ.12: ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ಸತತ ಏಳು ದಶಕಗಳಿಂದ ಗೊಂದಲಗಳಿಲ್ಲದೇ ಲಾಭದಲ್ಲಿ ನಡೆಸಿಕೊಂಡು ಹೋಗುತ್ತಿರುವ ವಿಷಯ ನಿಜಕ್ಕೂ ಸಂತಸ ತಂದಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70 ವಾರ್ಷಿಕೋತ್ಸವ ಹಿನ್ನೆಲೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ನಿ., ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ವಿಚಾರಗೋಷ್ಠಿ ಉದ್ಘಾಟಿಸಿ ಅವರ ಮಾತನಾಡಿದರು.

ಸ್ವಾತಂತ್ರ ಬಂದ ಆಸುಪಾಸಿನ ದಿನಗಳಲ್ಲಿ ಆರಂಭವಾಗಿರುವ ಕರ್ನಾಟಕ ಪತ್ರಕರ್ತರ ಸಂಘವು ಇಂದಿನವರೆಗೂ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಹಣಕಾಸಿನ ವಹಿವಾಟು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ವಿಚಾರ. ಈ ಸಮನ್ವಯತೆ ಹಾಗೂ ಲಾಭಕ್ಕೆ ಪತ್ರಕರ್ತರ ಜವಾಬ್ದಾರಿಯುತ ನಡೆಯೇ ಕಾರಣ, ಪ್ರಸ್ತುತ ಸಂಘದ ಸದಸ್ಯತ್ವ 2,600 ಇದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಾಗಿ ಇನ್ನಷ್ಟು ಪತ್ರಕರ್ತರಿಗೆ ಸಹಾಯವಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಉಪಾಧ್ಯಕ್ಷ ಎನ್.ಚಂದ್ರಪ್ಪ ಮಾತನಾಡಿ, ಪತ್ರಕರ್ತರ ಸಹಕಾರಿ ಸಂಘ ಕ್ರೆಡಿಟ್ ಮಾದರಿಯದ್ದಾಗಿದ್ದು, 29 ಕೋಟಿ ರೂ.ವಾರ್ಷಿಕ ವಹಿವಾಟು ಹೊಂದಿರುವುದಲ್ಲದೇ ಶೇ.14 ಡಿವಿಡೆಂಟ್ ಹಂಚಿಕೆ ಮಾಡಿದೆ. ಇದಕ್ಕೆ ಪ್ರಜ್ಞಾವಂತರೆಂದು ಕರೆಸಿಕೊಳ್ಳುವ ಪತ್ರಕರ್ತರ ಒಗ್ಗಟ್ಟು ಕಾರಣ ಎಂದು ನುಡಿದರು.

ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ಹಾಗೂ ಆರ್‌ಐಸಿಎಂ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಎ.ಸಿದ್ಧಾಂತಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿ, ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಉಪಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ, ಖಜಾಂಚಿ ಯತಿರಾಜು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್‌ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News