ಸಂವಿಧಾನದ ಹಿರಿಮೆ ಬಗ್ಗೆ ಜನತೆಗೆ ತಿಳಿಸಲು ಸರಕಾರಗಳು ವಿಫಲ: ನಿವೃತ್ತ ನ್ಯಾ.ನಾಗಮೋಹನ ದಾಸ್

Update: 2019-03-12 16:04 GMT

ಬೆಂಗಳೂರು, ಮಾ.12: ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಗೊಂಡು 70 ವರ್ಷ ಕಳೆದರೂ ಸಂವಿಧಾನದ ಹಿರಿಮೆ, ಅದರ ಪ್ರಾಮುಖ್ಯತೆಯ ಕುರಿತು ಜನತೆಗೆ ತಿಳಿಸುವಲ್ಲಿ ನಮ್ಮ ಸರಕಾರಗಳು ವಿಫಲವಾಗಿವೆ ಎಂದು ನಿವೃತ್ತ ನ್ಯಾ.ನಾಗಮೋಹನ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಹಾಗೂ ಕಾನೂನು ಅಧ್ಯಯನ ವಿಭಾಗದ ವತಿಯಿಂದ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾದರು.

ಎಲ್ಲ ಸಮುದಾಯಗಳು ಸಮಾನತೆಯೆಡೆಗೆ ಬರುವಲ್ಲಿ ಸಂವಿಧಾನದ ಪಾತ್ರ ಅದ್ವಿತೀಯವಾದದ್ದು. ನಮ್ಮ ಸಂವಿಧಾನದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸಮಸ್ಯೆ ಇರುವುದು ಸರಕಾರದ ಆಡಳಿತ ವರ್ಗದ ನಿರಾಸಕ್ತಿ, ಜನವಿರೋಧಿ ನೀತಿಗಳ ಮೇಲೆ. ಸಂವಿಧಾನ ರಚನೆಗೊಂಡ ಪ್ರಾರಂಭದ ವರ್ಷಗಳಲ್ಲೆ ನಮ್ಮ ಸರಕಾರಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಿದ್ದರೆ, ಭಾರತ ಪ್ರಪಂಚದಲ್ಲೇ ಮುಂಚೂಣಿ ಸ್ಥಾನದಲ್ಲಿ ಇರುತ್ತಿತ್ತು ಎಂದು ಅವರು ಅಭಿಪ್ರಾಯಿಸಿದರು.

ಸಮುದಾಯ ಸಂಘಟನೆಯ ಸುರೇಂದ್ರರಾವ್ ಮಾತನಾಡಿ, ಕೆಲವು ಕೋಮುವಾದಿ ಶಕ್ತಿಗಳು ಸಂವಿಧಾನದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಓದಿ, ಜನರು ಇದನ್ನು ಪೂರ್ಣವಾಗಿ ಅರ್ಥೈಸಿಕೊಂಡು ಪ್ರಜಾಪ್ರಭುತ್ವದಲ್ಲಿ ಭಾಗವಹಿಸಬೇಕು. ಈ ಹಿನ್ನೆಲೆಯಲ್ಲಿ ಸಮುದಾಯ ಕರ್ನಾಟಕ ಸಂಘಟನೆಯು ಸಂವಿಧಾನದ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲು ಈ ಸಂವಿಧಾನ ಅಭಿಯಾನ ಕಾರ್ಯಕ್ರಮವನ್ನು ಎಲ್ಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಡಾ.ಸುದೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್. ಸತೀಶ್‌ಗೌಡ ಸ್ವಾಗತ ಕೋರಿದರು. ಸಂಶೋಧನಾ ವಿದ್ಯಾರ್ಥಿನಿ ಪಾರ್ವತಿ ನಿರೂಪಣೆ ಮಾಡಿದರು.

ಭಾರತದ ಸಂವಿಧಾನ ಎನ್ನುವುದು ಕತೆ, ಕಾದಂಬರಿಯಲ್ಲ, ಊಳಿಗಮಾನ್ಯ ಪದ್ಧತಿಯನ್ನು ತೆಗೆದುಹಾಕಿ, ಪ್ರಜಾಪ್ರಭುತ್ವದ ತಳಹದಿಯನ್ನು ಸ್ಥಾಪಿಸಿದಂತಹ ದಾಖಲಾತಿ. ಭಾರತದ ಇತಿಹಾಸವನ್ನು ಅರ್ಥಮಾಡಿಕೊಳ್ಳದೆ, ಭಾರತ ಸಂವಿಧಾನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಅರ್ಥಮಾಡಿಕೊಳ್ಳದೆ, ದೇಶದ ಮೂಲಭೂತ ಅಂಶಗಳನ್ನು ಕಾಣಲು ಸಾಧ್ಯವಿಲ್ಲ. ನಮ್ಮ ದೇಶ ಬಹುತ್ವ ಭಾರತ. ಇಲ್ಲಿ ಭಾಷೆ, ಧರ್ಮ, ಸಂಸ್ಕೃತಿ, ಆಹಾರ, ಉಡುಗೆ-ತೊಡುಗೆಗಳೆಲ್ಲ ಭಿನ್ನವಾಗಿದ್ದರೂ ನಾವೆಲ್ಲರೂ ಒಂದೇ. ಅದಕ್ಕೆ ಕಾರಣ ನಮ್ಮ ಸಂವಿಧಾನ.

-ನಾಗಮೋಹನ ದಾಸ್, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News