×
Ad

ಡಿಕೆಶಿ ವಿರುದ್ಧ ದಾಖಲಿಸಿರುವ ಪ್ರಕರಣ ಸರಿಯಾಗಿದೆ: ಹೈಕೋರ್ಟ್‌ಗೆ ತಿಳಿಸಿದ ಜಾರಿ ನಿರ್ದೇಶನಾಲಯ

Update: 2019-03-12 22:12 IST

ಬೆಂಗಳೂರು, ಮಾ.12: ಹೊಸದಿಲ್ಲಿಯ ಫ್ಲಾಟ್‌ಗಳಲ್ಲಿ ದೊರೆತ ಹಣವನ್ನು ಅಕ್ರಮವಾಗಿ ಹವಾಲಾ ಮುಖಾಂತರ ಸಾಗಿಸಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಐವರು ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 120(ಬಿ) ಅನುಸಾರ ಪ್ರಕರಣ ದಾಖಲಿಸಿರುವುದು ಸರಿಯಾಗಿಯೇ ಇದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಹೈಕೋರ್ಟ್‌ಗೆ ತಿಳಿಸಿದೆ.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸೇರಿ ಐವರು ಆರೋಪಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಪೀಠದಲ್ಲಿ ನಡೆಯಿತು.

ಇಡಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಹವಾಲಾ ದಂಧೆ ಅಷ್ಟೇ ಅಲ್ಲದೇ ಯಾವುದೇ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾದರೂ ಆರೋಪಿಗಳ ವಿರುದ್ಧ 120(ಬಿ) ಅನುಸಾರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿತು. ಖುದ್ದು ಸಚಿವ ಡಿಕೆಶಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜ.17ರಂದು ಇಡಿ ಸಮನ್ಸ್ ನೀಡಿತ್ತು. ಡಿಕೆಶಿ ವಿರುದ್ಧ 276ಸಿ, 277 ಐಟಿ ಕಾಯ್ದೆ, 120 ಬಿ ಐಪಿಸಿ ಅಡಿಯಲ್ಲಿ ಐಟಿ ಇಲಾಖೆ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News