×
Ad

ಸಾಹಿತ್ಯದ ಓದನ್ನು ಆಸ್ವಾದಿಸಬೇಕು: ವಿಮರ್ಶಕ ಡಾ.ಎಚ್.ಎಸ್ ಶಿವಪ್ರಕಾಶ್

Update: 2019-03-12 22:41 IST

ಬೆಂಗಳೂರು, ಮಾ.12: ಸಾಹಿತ್ಯ ಇರುವುದು ಕೇವಲ ಓದಿಗಾಗಿ ಅಲ್ಲ, ಜ್ಞಾನವನ್ನು ವೃದ್ಧಿಸಿಕೊಳ್ಳಲು. ಸಾಹಿತ್ಯದ ಓದನ್ನು ಆಸ್ವಾದಿಸಬೇಕು ಎಂದು ವಿಮರ್ಶಕ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯದ ಓದು ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪುಸ್ತಕದ ಜ್ಞಾನ ಪಡೆಯದೇ ಹೋದರೆ ಅಂತದ ಓದಿನಿಂದ ಪ್ರಯೋಜನವಿಲ್ಲ. ಓದಿನ ಜ್ಞಾನ ಬೆಳೆಯದಿದ್ದಲ್ಲಿ ಪ್ರಪಂಚವು ಮತ್ತಷ್ಟು ಅಧೋಗತಿಗೆ ಹೋಗುವುದರಲ್ಲಿ ಅನುಮಾನವಿಲ್ಲ. ಸಾಹಿತ್ಯದೊಳಗಿನ ಅಕ್ಷರಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಸಾಹಿತ್ಯದ ನೈಜ ಸ್ವರೂಪ ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಸಾಹಿತ್ಯ ಓದುವುದಕ್ಕಾಗಿಯೇ ರಚಿತಗೊಂಡಿದೆ. ಅಕ್ಷರಗಳ ಹಿಂದಿರುವ ಅರ್ಥ ತಿಳಿಯದಿದ್ದರೆ ನಾವು ಓದುವ ಅಕ್ಷರಗಳು ಕೇವಲ ಪದಗಳಾಗಿಯೇ ಉಳಿದುಬಿಡುತ್ತವೆ ಎಂದ ಅವರು, ಊರಿಗೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಕಟ್ಟಲಾಗಿದೆ. ನಾವು ಓದುವುದು ಮತ್ತು ಕೇಳುವುದನ್ನು ಕಲಿಯದಿದ್ದರೆ ಮಾಧ್ಯಮಗಳ ಜಾಹೀರಾತುಗಳ ಮಂಕುಬೂದಿಗೆ ಬಲಿಯಾಗಬೇಕಾಗುತ್ತದೆ ಎಂದರು.

ಸಾಹಿತ್ಯಕ್ಕೆ ಅಕ್ಷರ ಜ್ಞಾನ ಇದ್ದವರಿಗಿಂತ, ಇಲ್ಲದವರೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಇದಕ್ಕೆ ಜಾನಪದ, ವಚನ ಸಾಹಿತ್ಯವೇ ಸಾಕ್ಷಿಯಾಗಿದೆ. ಓದುವ ಸಾಹಿತ್ಯ ಎನ್ನುವುದು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿದ್ದು, ಆದರೆ, ನಮ್ಮ ನಡುವೆಯೇ ಹುಟ್ಟಿದ ಜಾನಪದ ಸೇರಿದಂತೆ ಇನ್ನಿತರೆ ದೇಶಿ ಸಾಹಿತ್ಯವನ್ನು ಕಡೆಗಣಿಸುವ ಸ್ಥಿತಿಗೆ ತಲುಪಿದ್ದೇವೆ ಎಂದು ಹೇಳಿದರು. ಆಧುನಿಕ ಸಂಸ್ಕೃತಿಯನ್ನು ನಮ್ಮ ಸಂವೇದನೆಯನ್ನು ಪಂಚೇಂದ್ರಿಯಗಳ ಬದಲಿಗೆ ಏಕ ಇಂದ್ರೀಯಕ್ಕಿಳಿಸಿದೆ ಎಂದ ಅವರು, ಶಾಸನ ಸೇರಿದಂತೆ ಇನ್ನಿತರ ಇತಿಹಾಸದ ಪುಟಗಳನ್ನು ನಂಬುವಂತಿಲ್ಲ. ಶಿವಾಜಿ ಆದಿವಾಸಿಯಾಗಿದ್ದ. ಅಲ್ಲದೆ, ಒಂದೆರಡು ಹಳ್ಳಿಗಳನ್ನು ಆಳಿದವರನ್ನೂ ರಾಜರು ಎಂದು ಗುರುತಿಸಲಾಗಿದೆ. ರಾಜರಿಂದ ಗೋದಾನ, ಭೂದಾನ ಮಾಡಿಸಿಕೊಂಡು, ಬಿರುದುಗಳನ್ನು ನೀಡಿದ್ದಾರೆ ಎಂದು ದೂರಿದರು.

ಯಾವುದೇ ಒಂದು ಕವನ, ಸಾಹಿತ್ಯ ರಚನೆ ಮಾಡಿದಾಗ, ನಾವು ಕಾಯಬೇಕು. ಆದರೆ, ಸಾಹಿತ್ಯ ರಚನೆ ಇಂದು ಬಹುಮಾನ, ಪ್ರಶಸ್ತಿಗಳ ಸರಕು ಆಗುತ್ತಿದೆ. ಎಷ್ಟು ಓದಿದರೂ ಅಂತಿಮ ಅರ್ಥವನ್ನು ನಿರ್ಧರಿಸಲಾಗದ ಸ್ಥಿತಿಯಿದೆ. ಕಾಯುವಿಕೆ ಮಾಗಿದರೆ ಕಾವ್ಯವೂ ಮಾಗುವುದು. ಆದರೆ, ಇಂದಿನವರಿಗೆ ಕಾಯುವ ಪುರುಸೊತ್ತಿಲ್ಲ. ನಾಳೆಯೇ ಜ್ಞಾನಪೀಠ ಪ್ರಶಸ್ತಿ ಸಿಗಬೇಕು ಎಂದು ಬಯಸುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಭಾಷಣಿಕೆ ಮುಖ್ಯಸ್ಥೆ ಡಾ.ಬಿ.ಎನ್.ಪೂರ್ಣಿಮಾ, ಉದಯಭಾನು ಕಲಾ ಸಂಘದ ಎಂ.ನರಸಿಂಹ, ಡಾ.ಎಚ್.ಎಸ್.ರಾಘವೇಂದ್ರ, ಫಾದರ್ ಡಾ.ವಿಕ್ಟರ್ ಲೋಬೋ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News