ರಾಜಧಾನಿಯಲ್ಲಿ 'ಹಾಫ್ ಬಕೆಟ್ ಚಾಲೆಂಜ್' ಅಭಿಯಾನ
ಬೆಂಗಳೂರು, ಮಾ.12: ಬೇಸಿಗೆಯಲ್ಲಿ ರಾಜಧಾನಿಯಲ್ಲಿ ನೀರಿಗೆ ಬರ ಎದುರಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟವು ಸಾಮಾಜಿಕ ಜಾಲತಾಣಗಳಲ್ಲಿ ಹಾಫ್ ಬಕೆಟ್ ಚಾಲೆಂಜ್ ಎಂಬ ಅಭಿಯಾನ ಆರಂಭಿಸಿದೆ.
ಈ ಅಭಿಯಾನದ ಮೂಲಕ ಅರ್ಧ ಬಕೆಟ್‌ನಲ್ಲಿಯೇ ಸ್ನಾನ ಮುಗಿಸಿ ಎಂಬ ಸಂದೇಶವನ್ನು ಸಾರಲಾಗುತ್ತಿದೆ. ಚಾಲೆಂಜ್ ಒಪ್ಪಿಕೊಳ್ಳುವ ಪ್ರತಿಯೊಬ್ಬರೂ ಬಳಕೆಯಾಗುವ ಅರ್ಧದಷ್ಟು ಪ್ರಮಾಣದ ನೀರು ಉಳಿತಾಯ ಮಾಡಬಹುದು ಎಂದು ಒಕ್ಕೂಟದ ಪದಾಧಿಕಾರಿಗಳು ಹೇಳಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ನಗರಕ್ಕೆ ತನ್ನದೇ ನೀರಿನ ಮೂಲ ಇಲ್ಲದಿರುವುದರಿಂದ ನೀರಿನ ಸದ್ಬಳಕೆ ಕಡೆಗೆ ಒತ್ತು ನೀಡಬೇಕಿದೆ. ಅದಕ್ಕಾಗಿ ವಿಶೇಷ ರೀತಿಯ ಅಭಿಯಾನವನ್ನು ಬಿಎಎಫ್ ಹಾಫ್ ಬಕೆಟ್ ಚಾಲೆಂಜ್ ಅಡಿಯಲ್ಲಿ ನಡೆಸುತ್ತಿದ್ದೇವೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.
ಖುಷಿ ನೀಡಿದೆ: ಕಳೆದ ವಾರ ಒಕ್ಕೂಟದ ಸಭೆಯಲ್ಲಿ ಅಭಿಯಾನದ ಬಗ್ಗೆ ಪ್ರಸ್ತಾಪಗೊಂಡಾಗ ಬೆಂಗಳೂರಿಗರ ಸ್ಪಂದನೆ ಹೇಗಿರುತ್ತದೆ ಎಂಬ ಕುತೂಹಲವಿತ್ತು. ನಮ್ಮ ಸವಾಲನ್ನು ಜನ ಸ್ವೀಕರಿಸಿದ ರೀತಿ ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಅಭಿಯಾನವನ್ನು ಜನರಿಗೆ ತಲುಪಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರು ಅಪಾರ್ಟ್‌ಮೆಂಟ್ ಒಕ್ಕೂಟದಲ್ಲಿ 400 ಅಪಾರ್ಟ್‌ಮೆಂಟ್‌ಗಳ ಸಂಘಟನೆಯಿದ್ದು, 2 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ. ಇಡೀ ಬೆಂಗಳೂರಿಗೆ ಅಭಿಯಾನ ತಲುಪಿಸುವ ಗುರಿಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.