ಹಡ್ಸನ್ ವೃತ್ತದಿಂದ ಮಾಗಡಿ ರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರಕಾರ ಚಿಂತನೆ

Update: 2019-03-12 17:59 GMT

ಬೆಂಗಳೂರು, ಮಾ.12: ರಾಜ್ಯ ಸರಕಾರವು ನಗರದಲ್ಲಿ ಮತ್ತೊಂದು ಕಾರಿಡಾರ್ ನಿರ್ಮಿಸಲು ಚಿಂತನೆ ನಡೆಸಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಹಡ್ಸನ್ ವೃತ್ತದಿಂದ ಮಾಗಡಿ ರಸ್ತೆಯವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಮುಂದಾಗಿದೆ.

ಈ ಸಂಬಂಧ ಕೆಆರ್‌ಡಿಸಿಎಲ್ ಸೋಮವಾರ ಟೆಂಡರ್ ಕರೆದಿದ್ದು, 10 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ನಗರದಲ್ಲಿ ಒಟ್ಟು 88 ಕಿ.ಮೀ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತದೆ. ಅದರ ಮೊದಲ ಹಂತದಲ್ಲಿ ಟೆಂಡರ್ ಕರೆಯಲಾಗಿದೆ. ಹಾಗೆಯೇ ಹೆಬ್ಬಾಳ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಕಾರಿಡಾರ್ ಯೋಜನೆಗೂ ಟೆಂಡರ್ ಕರೆಯಲಾಗಿದೆ.

ಹಡ್ಸನ್ ವೃತ್ತದಿಂದ ನಿರ್ಮಾಣವಾಗುವ ಕಾರಿಡಾರ್ ಶೇಷಾದ್ರಿ ರಸ್ತೆ, ಓಕಳೀಪುರಂ, ರಾಜಾಜಿನಗರ, ವಿಜಯನಗರ, ಔಟರ್‌ರಿಂಗ್ ರಸ್ತೆ ಮೂಲಕ ಮಾಗಡಿ ರಸ್ತೆ ಸೇರುತ್ತದೆ. ಈ ಹೊಸ ಕಾರಿಡಾರ್ 4 ರಿಂದ 6 ಪಥಗಳಿರುತ್ತವೆ. ಇದರಿಂದ ಬೆಂಗಳೂರಿನ ಟ್ರಾಫಿಕ್‌ ಅನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ.

ಈ ಕುರಿತು ವರದಿ ಸಲ್ಲಿಕೆಗೆ 2 ತಿಂಗಳ ಗಡುವು ನೀಡಲಾಗಿದ್ದು, ಎಲಿವೇಟೆಡ್ ಕಾರಿಡಾರ್‌ನ ಉತ್ತರ-ದಕ್ಷಿಣ ಮಾರ್ಗದ ಮೊದಲ ಹಂತದ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಿದ ಬೆನ್ನಲ್ಲೇ ಸರಕಾರ ಈ ನಿಲುವು ಕೈಗೊಂಡಿದೆ. ಎಸ್ಟೀಮ್ ಮಾಲ್ನಿಂದ ಆರಂಭವಾಗಬೇಕಿದ್ದ ಮೊದಲ ಹಂತ ಎಲಿವೇಟೆಡ್ ಕಾರಿಡಾರ್ ಮಾರ್ಗಕ್ಕೆ ಟ್ರಾಫಿಕ್ ದಟ್ಟಣೆ ಹಾಗೂ ಇತರೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕಿರುವ ಕಾರಣ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿಗೆ ಸ್ಥಳಾಂತರಗೊಂಡಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಮೇಲು ರಸ್ತೆಯ ಹೆಚ್ಚುವರಿ ಪಥ ನಿರ್ಮಾಣದ ಕಾಮಗಾರಿ ನನೆಗುದಿದೆ ಬಿದ್ದಿದೆ. ವರ್ತುಲ ರಸ್ತೆಯ ಸಿಗ್ನಲ್‌ನಲ್ಲಿ ಕೆಳ ರಸ್ತೆ ನಿರ್ಮಿಸುವ ಪ್ರಸ್ತಾಪವೂ ಇದೆ. ಜೊತೆಗೆ ಇಲ್ಲಿನ ರೈಲ್ವೆ ಹಳಿ ಬಳಿ ಪಾದಚಾರಿಗಳ ಅನುಕೂಲಕ್ಕೆ ಸುರಂಗ ಮಾರ್ಗ ನಿರ್ಮಿಸುವ ಉದ್ದೇಶ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News