×
Ad

ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಗುಂಡಿಕ್ಕಿ ಮತ್ತೋರ್ವ ಆರೋಪಿಯ ಬಂಧನ

Update: 2019-03-13 18:06 IST

ಬೆಂಗಳೂರು, ಮಾ.13: ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಇನ್ನೊಬ್ಬ ಆರೋಪಿಯ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಸೋಲದೇವನಹಳ್ಳಿ ನಿವಾಸಿ ಆಕಾಶ್ ಅಲಿಯಾಸ್ ಮಳೆರಾಯ (24) ಸಿಸಿಬಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ ಎಂದು ತಿಳಿದುಬಂದಿದೆ.

ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಉತ್ತರಹಳ್ಳಿಯ ಪೂರ್ಣಪ್ರಜ್ಞ ನಗರದ ನಿರ್ಜನ ಪ್ರದೇಶದ ಬಳಿ ಆಕಾಶ್ ಇರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ಮುರುಗೇಂದ್ರಯ್ಯ, ಮುಖ್ಯಪೇದೆ ಅರುಣ್ ಮತ್ತು ಸಿಬ್ಬಂದಿಗಳಾದ ಶಾಂತರಾಜು, ಸತೀಶ್ ಅವರನ್ನೊಳಗೊಂಡ ತಂಡ ಸ್ಥಳಕ್ಕೆ ತೆರಳಿದೆ. ಈ ವೇಳೆ ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿಗೆ ಮುಂದಾಗಿದ್ದ ವೇಳೆ ಹಲ್ಲೆ ನಡೆಸಿ, ಪರಾರಿಯಾಗಲು ಆಕಾಶ್ ಯತ್ನಿಸಿದ್ದಾನೆ ಎನ್ನಲಾಗಿದೆ.

ತಕ್ಷಣ ಇನ್‌ಸ್ಪೆಕ್ಟರ್ ಮುರುಗೇಂದ್ರಯ್ಯ ಅವರು ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಆರೋಪಿ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಹಾರಿಸಿದ ಗುಂಡು ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಸುತ್ತುವರಿದು ಆರೋಪಿ ಆಕಾಶ್‌ನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತೆಗೆ ದಾಖಲಿಸಿದ್ದಾರೆ.

ಆಕಾಶ್ ವಿರುದ್ಧ ಚನ್ನಪಟ್ಟಣ, ಸೋಲದೇವನಹಳ್ಳಿ ಮುಂತಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಇದುವರೆಗೆ ಯುವತಿ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News