ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಉತ್ತಮ ಸೇವಾ’ ಪ್ರಶಸ್ತಿ ಗರಿ
ಬೆಂಗಳೂರು, ಮಾ.13: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಕೌನ್ಸಿಲ್ ಸಂಸ್ಥೆ ನೀಡುವ ‘ಉತ್ತಮ ಸೇವಾ’ ಪ್ರಶಸ್ತಿ ಲಭಿಸಿದೆ.
ವಿಮಾನ ನಿಲ್ದಾಣ ಆರಂಭಗೊಂಡು ಹತ್ತು ವರ್ಷ ಕಳೆದಿದ್ದು, ಹಲವು ಸಾಧನೆಗಳನ್ನು ಇದು ಮಾಡಿದೆ. ಅಲ್ಲದೆ, ನೂತನ ಆವಿಷ್ಕಾರಗಳನ್ನು ಅಳವಡಿಸುತ್ತಾ ಬಂದಿದ್ದು, ಮತ್ತಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಈ ಪ್ರಶಸ್ತಿ ದಕ್ಕಿರುವುದು ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ.
ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ನೀಡುತ್ತಿರುವ ಮೂಲಭೂತ ಸೌಕರ್ಯಗಳು ಸೇರಿದಂತೆ ಪ್ರಯಾಣಿಕರನ್ನು ನೋಡಿಕೊಳ್ಳುವ ವ್ಯವಸ್ಥೆ ಉತ್ತಮವಾಗಿದೆ. ಅಲ್ಲದೇ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದೆ. ಹೀಗಾಗಿ, ಏರ್‌ಪೋರ್ಟ್ ಕೌನ್ಸಿಲ್ ಪ್ರಶಸ್ತಿ ನೀಡಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಐಎಎಲ್ ಉಪಾಧ್ಯಕ್ಷ ವೆಂಕಟರಮಣ್, ಪ್ರತಿ ವರ್ಷ ಅಂತರ್‌ರಾಷ್ಟ್ರೀಯ ಏರ್‌ಪೋರ್ಟ್ ಕೌನ್ಸಿಲ್ ಸಂಸ್ಥೆ 100 ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಸುವ ಶೇಕಡಾ 90ರಷ್ಟು ಪ್ರಯಾಣಿಕರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನೀಡುವ ಸೌಲಭ್ಯಗಳ ಕುರಿತಾಗಿ ಮಾಹಿತಿ ಪಡೆದುಕೊಂಡು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ನೀಡುತ್ತಿರುವ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದ್ದಾರೆ.