×
Ad

ಎಸೆಸೆಲ್ಸಿ ಪರೀಕ್ಷೆಗೆ ದಿನಗಣನೆ: ವಿದ್ಯಾರ್ಥಿಗಳಿಗೆ ಹಗಲು-ರಾತ್ರಿ ತರಗತಿಗಳ ಮೂಲಕ ಅಭ್ಯಾಸ

Update: 2019-03-13 18:53 IST

ಬೆಂಗಳೂರು, ಮಾ.13: ಎಸೆಸೆಲ್ಸಿ ಪರೀಕ್ಷೆಗಳ ಆರಂಭಕ್ಕೆ 9 ದಿನಗಳಿದ್ದು, ರಾಜ್ಯದ ಹಲವು ಗ್ರಾಮಾಂತರ ಪ್ರದೇಶಗಳ ಸರಕಾರಿ ಶಾಲೆಗಳಲ್ಲಿ ಹಗಲು-ರಾತ್ರಿ ತರಗತಿಗಳನ್ನು ನಡೆಸುವ ಮೂಲಕ ಉತ್ತಮ ಫಲಿತಾಂಶಕ್ಕಾಗಿ ಪಣತೊಟ್ಟಿದ್ದಾರೆ.

ಸರಕಾರಿ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ತಯಾರಾಗಿ ನಿಂತಿದ್ದು, ಖಾಸಗಿ ಶಾಲೆಗಳ ಸಮವಾಗಿ ಫಲಿತಾಂಶ ಬರಬೇಕು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದಾರೆ. ಅಲ್ಲದೆ, ಶಾಲೆಗಳಲ್ಲಿಯೇ ಓದಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಶಿಕ್ಷಕರೇ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಎಬ್ಬಿಸಿ ಓದುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಾಯಂಕಾಲದವರೆಗೆ ಶಿಕ್ಷಕರು ತರಗತಿಯನ್ನು ತೆಗೆದುಕೊಂಡು ಬೆಳಗ್ಗೆ ಬೇಗನೆ ಶಾಲೆಗೆ ಕರೆತರುತ್ತಿದ್ದಾರೆ. ಈ ಕುರಿತು ನಗರದ ಹೆಬ್ಬಾಳದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಶಾಲಾ ಅವಧಿ ಮುಗಿದ ಬಳಿಕವೂ ನಾವು ವಿದ್ಯಾರ್ಥಿಗಳಿಗೆ ಓದಲು ಅಭ್ಯಾಸ ಮಾಡಿಸುತ್ತಿದ್ದೇವೆ. ಸಾಯಂಕಾಲ 6.45ರವರೆಗೆ ಶಾಲೆ ತೆಗೆದುಕೊಳ್ಳುತ್ತೇವೆ. ಇದಕ್ಕೆ ಪೋಷಕರ ಒಪ್ಪಿಗೆಯೂ ಇದೆ. ಹೀಗೆ ಮಕ್ಕಳಿಗೆ ಹೇಳಿಕೊಡುವ ಮುನ್ನ ಎಸ್‌ಡಿಎಂಸಿ ಜೊತೆ ಸಭೆ ನಡೆಸಿ ಪೋಷಕರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಂಡೆವು ಎಂದಿದ್ದಾರೆ. 

ಇನ್ನು ಬೆಂಗಳೂರಿನ ರಾಜಾನುಕುಂಟೆಯ ಸರಕಾರಿ ಶಾಲೆಯಲ್ಲಿ 48 ಮಕ್ಕಳಿದ್ದು, ಪ್ರತಿ ಶಿಕ್ಷಕರು 10 ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕ ಕೆ.ಎಂ.ವೆಂಕಟೇಶ್ ಮಾತನಾಡಿ, ಶಾಲಾ ಅವಧಿ ಮುಗಿದ ನಂತರ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ, ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಸಾಯಂಕಾಲ ಸ್ನಾಕ್ಸ್ ಕೊಡುತ್ತೇವೆ ಎಂದರು.

ವಿದ್ಯಾನಗರದ ಸರಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಜಿ.ಕೆ.ಗೋಪಾಲಕೃಷ್ಣ ಮಾತನಾಡಿ, ನಮ್ಮಲ್ಲಿ ಹತ್ತನೇ ತರಗತಿಯಲ್ಲಿ ಸುಮಾರು 60 ಮಕ್ಕಳಿದ್ದು ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಶೇಕಡಾ 93ರಷ್ಟು ಮತ್ತು ಈ ವರ್ಷ ಶೇಕಡಾ 100ರಷ್ಟು ಫಲಿತಾಂಶ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಚಿಕ್ಕಮಗಳೂರಿನ ಬೊಗಸೆ ಕುಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿನ ಶಿಕ್ಷಕರು ಕಳೆದ ಮೂರು ತಿಂಗಳಿನಿಂದ ಮಕ್ಕಳಿಗೆ ರಾತ್ರಿ ಶಾಲೆಯನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ನಮ್ಮ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷ ಅದನ್ನು ಕಾಪಾಡಬೇಕು. ಅದಕ್ಕಾಗಿ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಎಸೆಸ್ಸೆಲ್ಸಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳುತ್ತೇವೆ ಎಂದರು.

ಗ್ರಾಮಗಳಲ್ಲಿರುವ ಮಕ್ಕಳು 8ರಿಂದ 10 ಕಿಲೋಮೀಟರ್ ನಡೆದುಕೊಂಡು ಬರುತ್ತಾರೆ. ಪರೀಕ್ಷೆ ಮುಗಿಯುವವರೆಗೆ ಮಕ್ಕಳಿಗೆ ಶಾಲೆಯಲ್ಲಿ ಇರಲು ಸೌಲಭ್ಯ ಮಾಡಿಕೊಡುತ್ತೇವೆ. ರಾತ್ರಿ ಸಮಯದಲ್ಲಿ ಪ್ರತಿದಿನ ಒಬ್ಬರಂತೆ ಒಬ್ಬ ವಿದ್ಯಾರ್ಥಿಯ ಪೋಷಕರು ಇರಬೇಕು. ಬೆಳಗ್ಗೆ 4 ಗಂಟೆಗೆ ಯೋಗ ತರಗತಿ ಮಾಡುತ್ತೇವೆ. ನಂತರ 5.30ರ ನಂತರ ಓದು ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News