ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರಕಟ
ಬೆಂಗಳೂರು, ಮಾ.13: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನೀಡಲಾಗುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಕನ್ನಡದ 20 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಟ್ರಸ್ಟ್ ಬೆಳ್ಳಿಹಬ್ಬದ ಪ್ರಯುಕ್ತ ಪ್ರಶಸ್ತಿಯನ್ನು ರಾಷ್ಟ್ರಮಟ್ಟಕ್ಕೇರಿಸಿ 2016, 2017, 2018ರ ಮೂರು ವರ್ಷದ ಕೃತಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಸ್ಪರ್ಧೆಗೆ ಬಂದಿದ್ದ 200 ಕ್ಕೂ ಹೆಚ್ಚು ಕೃತಿಗಳನ್ನು ಪರಾಮರ್ಶಿಸಿ, ಹಿರಿಯ ಸಾಹಿತಿಗಳಾದ ಜಯದೇವಪ್ಪ ಜೈನಕೇರಿ, ಡಾ.ರಾಜೇಂದ್ರ ಗಡಾದ, ಅಪ್ಪಾಸಾಹೇಬ ಅಲಿಬಾದಿ ಮತ್ತು ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರ ಸಮಿತಿ ಆಯ್ಕೆ ಮಾಡಿ, ಅಂತಿಮವಾಗಿ 20 ಶ್ರೇಷ್ಠ ಕೃತಿಗಳನ್ನು ಆಯ್ಕೆ ಮಾಡಲಾಗಿದ್ದು, ಲೋಕಸಭಾ ಚುನಾವಣೆಯ ನಂತರ ರಾಮನಗರದಲ್ಲಿ ನಡೆಯಲಿರುವ 10ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಶಾಂತಾನಾಗರಾಜ್- ನೆಮ್ಮದಿಗೊಂದು ಕೈಪಿಡಿ(ಅಂಕಣ ಬರಹ), ಡಾ.ಬಸವರಾಜ ಸಾದರ- ಮೀರುವ ಘನ (ವೈಚಾರಿಕ), ಡಾ.ಜಿ.ವಿ.ಆನಂದ ಮೂರ್ತಿ- ನುಡಿ ಕನ್ನಡಿ(ಅಭಿನಂದನೆ), ಫಕೀರ- ಬೇರು(ಕಾದಂಬರಿ) ಸೇರಿದಂತೆ 20 ಕೃತಿಗಳನ್ನು ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ನಗದು 3 ಸಾವಿರ ರೂ.ಗಳ ಬಹುಮಾನದೊಂದಿಗೆ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.