×
Ad

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯ ರಕ್ಷಣೆ: ಆ್ಯಸ್ಟರ್ ಸಿಎಂಐ ವೈದ್ಯರ ಸಾಧನೆ

Update: 2019-03-13 21:19 IST

ಬೆಂಗಳೂರು, ಮಾ.13: ಮಾರಿಷಸ್‌ನ 13 ವರ್ಷದ ಬಾಲಕಿ ಸಿಯಾರ(ಹೆಸರು ಬದಲಿಸಲಾಗಿದೆ) ತನ್ನ 2ನೇ ವರ್ಷದಿಂದ ಅತೀ ಅಪರೂಪವಾದ ‘ಕಾಂಪ್ಲಿಮೆಂಟ್ ಡಿಫಿಷಿಯೆನ್ಸಿ’ ಎಂಬ ಅನುವಂಶಿಕ ಕಾಯಿಲೆ, ಸಿ1ಕ್ಯೂ ನ್ಯೂನತೆಯಿಂದ ಬಳಲುತ್ತಿದ್ದು, ಏಷ್ಯಾದಲ್ಲೇ ಈ ಜಟಿಲವಾದ ಸ್ಥಿತಿಯಿಂದ ಬಳಲುತ್ತಿರುವ ಮೂಳೆ ಮಜ್ಜೆಯ ಕಸಿ ಅಗತ್ಯವಿರುವ ಮೊದಲ ಬಾಲಕಿ ಎನಿಸಿಕೊಂಡಿದ್ದಳು. ಬೆಂಗಳೂರಿನ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರ ತಂಡ ಆಕೆಗೆ ಹೊಸ ಜೀವನವನ್ನು ನೀಡಿದೆ. ಸಿಯಾರ ಮರುಕಳಿಸುವ ಚರ್ಮದ ಗಾಯಗಳು ಮತ್ತು ಕಿಡ್ನಿ ತೊಂದರೆಯನ್ನು ಸುಮಾರು ಒಂದು ದಶಕದಿಂದಲೇ ಅನುಭವಿಸುತ್ತಿದ್ದಳು ಮತ್ತು ದೇಹದ ಕೆಲ ಅಂಗಗಳ ಮರಗಟ್ಟುವಿಕೆಯಿಂದ ಇತ್ತೀಚೆಗೆ ಆಕೆಗೆ ನಡೆಯುವುದೂ ಕಷ್ಟವಾಗಿತ್ತು.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ಸಿಇಓ ಡಾ.ನಿತೀಶ್ ಶೆಟ್ಟಿ ಮಾತನಾಡಿ, ಕಸಿ ಮಾಡುವ ತನಕ, ಸಿಯಾರ, ಸಿಸ್ಟಮಿಕ್ ಲಪಸ್ ಎರಿಥೆಮಾಟೊಸಸ್- ಸ್ವಯಂ ನಿರೋಧಕ ಸ್ಥಿತಿಯನ್ನು ನಿಯಂತ್ರಿಸಲು ಬಹು ರೋಗ ನಿರೋಧಕ ನಿಗ್ರಾಹಕಗಳನ್ನು ಆಕೆಗೆ ನೀಡಲಾಗಿತ್ತು ಎಂದರು.

ಗಂಭೀರ ಚರ್ಮದ ಕಾಯಿಲೆ, ಕಿಡ್ನಿ ಸಮಸ್ಯೆ ಮತ್ತು ಶ್ವಾಸಕೋಶದ ಅಧಿಕ ರಕ್ತದೊತ್ತಡಕ್ಕಾಗಿ 10ಕ್ಕೂ ಅಧಿಕ ಔಷಧಿಗಳಿಂದ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಕೆಯ ತಂದೆ ತಮ್ಮ ಮೂಳೆ ಮಜ್ಜೆಯನ್ನು ಸಿಯಾರಳಿಗೆ ದಾನ ಮಾಡಿದರು ಮತ್ತು ಈಗ ಆಕೆಯ ಸಮಸ್ಯೆ ಗುಣವಾಗಿ ಸಾಮಾನ್ಯ ಜೀವನ ನಡೆಸುವುದು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಕೆ ಔಷಧಗಳನ್ನು ಸೇವಿಸುತ್ತಿದ್ದು, ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಅನುಸರಣೆ ಅಗತ್ಯವಿದೆ. ಆಕೆಯ ಕುಟುಂಬ 26.5 ಲಕ್ಷ ರೂ.ಗಳಷ್ಟು ಮೊತ್ತವನ್ನು ಒಗ್ಗೂಡಿಸಲು ಆಸ್ಪತ್ರೆಯ ಪ್ರಯತ್ನಗಳಿಂದ ಸಹಾಯವಾಗಿದೆ. ಗುಂಪು ನಿಧಿ ಸಂಗ್ರಹ ವೇದಿಕೆಯು ಯಶಸ್ವಿ ಕಸಿ ಮಾಡುವಿಕೆ ಸಾಧ್ಯವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಈವರೆಗೆ, ಜಗತ್ತಿನಲ್ಲಿ 10ಕ್ಕೂ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಯಶಸ್ವಿಯಾಗಿ ಇಂತಹ ಕಸಿ ಮಾಡಲಾಗಿದೆ. ಮೊದಲನೆಯದನ್ನು ಬ್ರಿಟನ್‌ನಲ್ಲಿ 2014ರಲ್ಲಿ ಮಾಡಲಾಗಿತ್ತು. ನಮ್ಮ ಆಸ್ಪತ್ರೆಯ ಪಿಡಿಯಾಟ್ರಿಕ್ ಇಮ್ಯುನಾಲಜಿ ಮತ್ತು ರೂಮಟಾಲಜಿ ವಿಭಾಗದ ಸಲಹಾ ತಜ್ಞ ಡಾ.ಸಾಗರ್ ಭಟ್ಟಾದ್ ಮತ್ತು ಪಿಡಿಯಾಟ್ರಿಕ್ ಹೆಮಟಾಲಜಿ ಮತ್ತು ಬಿಎಂಟಿ ವಿಭಾಗದ ಸಲಹಾತಜ್ಞ ಡಾ.ಸ್ಟಾಲಿನ್ ರಾಮ್ ಪ್ರಕಾಶ್ ಮತ್ತು ಡಾ.ಸಿ.ಪಿ.ರಘುರಾಮ್ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಈ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ಹೇಳಿದರು.

ಬೇರೆ ದೇಶದ ಪುಟ್ಟ ಜೀವವೊಂದು ಭಾರತದಲ್ಲಿ ಹೊಸದಾಗಿ ಅರಳುವಂತಾಗಿದ್ದು ತುಂಬಾ ಸಂತೋಷದ ವಿಷಯ. ನಮ್ಮ ವೈದ್ಯರ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು. ನಾವು ಒಂದು ಬದ್ಧತೆಯುಳ್ಳ ಎಫ್ಪಿಐಡಿಯಿಂದ ಶ್ರೇಷ್ಠತೆಯ ಕೇಂದ್ರವೆಂದು ಗುರುತಿಸಲ್ಪಟ್ಟ ಇಮ್ಯುನಾಲಜಿ ಮತ್ತು ಮೂಳೆ ಮಜ್ಜೆಯ ಕಸಿ ಘಟಕ (ಬಿಎಂಟಿ)ವನ್ನು ಹೊಂದಿರುವುದಕ್ಕೆ ಸಂತಸವಾಗುತ್ತಿದೆ ಎಂದು ಅವರು ತಿಳಿಸಿದರು.

ವಿಶ್ವದಾದ್ಯಂತ ನಡೆಸಿದ ಸಂಶೋಧನೆಯ ಪ್ರಕಾರ, 2,000 ಮಕ್ಕಳಲ್ಲಿ 1 ಮಗು ರೋಗ ನಿರೋಧಕ ಕೊರತೆಯಿಂದ ಬಳಲುತ್ತಿದೆ. ಈ ಅಂಕಿ ಅಂಶಗಳನ್ನು ಬೆಂಗಳೂರಿಗೆ ಪರಿಗಣಿಸಿದರೆ, ಸುಮಾರು 5,000 ಮಕ್ಕಳಲ್ಲಿ ರೋಗ ನಿರೋಧಕ ಕೊರತೆ ಇರುತ್ತದೆ ಎಂದು ನಿತೀಶ್ ಶೆಟ್ಟಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News