ಲೋಕಸಭೆ ಚುನಾವಣೆ ಪ್ರಕ್ರಿಯೆ: ಬೆಂಗಳೂರಿನೆಲ್ಲೆಡೆ ನಾಕಾಬಂಧಿ

Update: 2019-03-13 15:52 GMT

ಬೆಂಗಳೂರು, ಮಾ.13: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಬೆಂಗಳೂರು ನಗರದ ಪ್ರಮುಖ ದಿಕ್ಕುಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ವಿಧಿಸಲಾಗಿದ್ದು, ಎಲ್ಲ ರೀತಿಯ ವಾಹನಗಳ ತಪಾಸಣೆ ಆರಂಭವಾಗಿದೆ ಎಂದು ಬೆಂ.ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಪ್ರವೇಶಿಸುವ ಹಾಗೂ ಹೊರ ಹೋಗುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ನಿರ್ಮಿಸಲಾಗಿದ್ದು, ಎಲ್ಲ ರೀತಿಯ ವಾಹನಗಳ ತಪಾಸಣೆ ಪ್ರಕ್ರಿಯೆ ಮುಂದುವರೆದಿದೆ ಎಂದರು.

ಮಾ.12ರಿಂದಲೇ ವಾಹನಗಳ ತಪಾಸಣೆ ಚಾಲ್ತಿಯಲ್ಲಿದ್ದು, ಇದುವರೆಗೂ ಯಾವುದೇ ನಗದು, ವಸ್ತುಗಳ ಅಕ್ರಮ ಸಾಗಾಟ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದ ಅವರು, ಚುನಾವಣೆ ಪ್ರಕ್ರಿಯೆ ಮುಗಿಯುವರೆಗೂ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗುವುದು. ಪ್ರಭಾವಿ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾಹೀರಾತು ಫಲಕಗಳ ಸಂಬಂಧ ಜನಪ್ರತಿನಿಧಿಗಳ ಭಾವಚಿತ್ರಗಳಿಗೆ ಈಗಾಗಲೇ ಬಿಳಿ ಚೀಟಿ ಅಂಟಿಸಲಾಗಿದೆ. ಯಲಹಂಕ ಹಾಗೂ ರಾಜರಾಜೇಶ್ವರಿ ನಗರದ ಕೆಲವು ಕಡೆ ಇನ್ನೂ ಭಾವಚಿತ್ರಗಳಿಗೆ ಚೀಟಿ ಅಂಟಿಸದಿರುವುದರ ಬಗ್ಗೆ ದೂರುಗಳು ಬಂದಿದ್ದು, ಅಧಿಕಾರಿಗಳು ಇದನ್ನು ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮೂರು ಲೋಕಸಭಾ ಕ್ಷೇತ್ರ ಒಳಗೊಂಡಿರುವ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಆಮಿಷ, ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಸಭೆ, ಸಮಾರಂಭಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗುವುದು. ಈ ಸಮಯದಲ್ಲಿ ಮತದಾರರಿಗೆ ಆಮಿಷವೊಡ್ಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದೆಂದು ಮಂಜುನಾಥ್ ಪ್ರಸಾದ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News