ಎಸ್.ಮೂರ್ತಿ ಅಮಾನತು ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2019-03-13 16:08 GMT

ಬೆಂಗಳೂರು, ಮಾ.13: ವಿಧಾನಸಭೆಯ ಕಾರ್ಯದರ್ಶಿ ಸ್ಥಾನದಿಂದ ಎಸ್.ಮೂರ್ತಿ ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ, ಆದೇಶವನ್ನು ಕಾಯ್ದಿರಿಸಿತು.

ಎಸ್.ಮೂರ್ತಿ ಅಮಾನತುಗೊಳಿಸಿರುವ ಆದೇಶವನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಎಸ್.ಮೂರ್ತಿ ಪರ ವಾದಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ಅರ್ಜಿದಾರರನ್ನು ವಿಚಾರಣೆ ನಡೆಸದೆ ಅಮಾನತು ಮಾಡಿರುವುದು ಕಾನೂನುಬಾಹಿರ. ಹೀಗಾಗಿ ವಿಧಾನಸಭೆ ಸ್ಪೀಕರ್ ಆದೇಶವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ವಕೀಲರು, ಮೇಲ್ನೋಟಕ್ಕೆ ಅಪರಾಧ ಎಸಗಿರುವುದು ಸಾಬೀತಾಗಿದೆ. ಹೀಗಾಗಿ ಮೂರ್ತಿಯನ್ನು ಅಮಾನತು ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.

ಪ್ರಕರಣವೇನು: 2016 ಹಾಗೂ 2017ನೆ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಅವರ ಆದೇಶ ಹಾಗೂ ವಿಧಾನಸಭೆ ಸಚಿವಾಲಯದ ವಿಶೇಷ ಮಂಡಳಿಯ ಆದೇಶದ ಅನುಸಾರ ಎನ್. ಮೂರ್ತಿಯವರನ್ನು ಸೇವೆಯಿಂದ ಅಮಾನತುಗೊಳಿಸಿ 2018ರ ಡಿ.27ರಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಸ್ಪೀಕರ ರಮೇಶ್ ಕುಮಾರ್ ಆದೇಶದ ಅನ್ವಯ ಅಮಾನತ್ತು ಮಾಡುವಂತೆ ಆದೇಶ ಹೊರಡಿಸಿದ್ದರು.

ಅರ್ಜಿಯಲ್ಲಿ ಏನಿದೆ: ರಮೇಶ್ ಕುಮಾರ್ ಆದೇಶ ಕಾನೂನು ಬಾಹಿರವಾಗಿದೆ. ರಮೇಶ್ ಕುಮಾರ್ ನಿಯಮ ಉಲ್ಲಂಘಿಸಿ ಆದೇಶಿಸಿದ್ದಾರೆ. ಅವರ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಕಾನೂನಿನ ಅಡಿಯಲ್ಲಿ ಈ ಆದೇಶ ಮಾಡಲು ಸ್ಪೀಕರ್‌ಗೆ ಯಾವುದೇ ಅರ್ಹತೆ ಇರುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News