ಅಧಿಕಾರಿಗಳಿಂದಲೆ ಬಡವರ ಮನೆಗಳು ಧ್ವಂಸ: ಪುನರ್ ನಿರ್ಮಾಣಕ್ಕೆ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯ

Update: 2019-03-13 16:10 GMT

ಬೆಂಗಳೂರು, ಮಾ.13: ನಗರದ ದೊಡ್ಡನಾಗಮಂಗಲ ಗ್ರಾಮದ ಸರ್ವೇ ನಂ.6ರಲ್ಲಿ ನಿರ್ಮಿಸಲಾಗಿದ್ದ ಬಡವರ ಮನೆಗಳನ್ನು ಸರಕಾರದ ಅಧಿಕಾರಿಗಳೆ ಧ್ವಂಸ ಮಾಡಿದ್ದು, ಅಲ್ಲಿ ವಾಸಿಸುತ್ತಿದ್ದವರನ್ನು ಬೀದಿಪಾಲು ಮಾಡಿದ್ದಾರೆ. ಕೂಡಲೆ ಅವರಿಗೆ ಮನೆಗಳನ್ನು ಸರಕಾರವೆ ಕಟ್ಟಿಸಿಕೊಡಬೇಕೆಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಗೋಪಾಲ್ ಒತ್ತಾಯಿಸಿದ್ದಾರೆ.

ಬುಧವಾರ ನಗರದ ಪುರಭವನದ ಮುಂಭಾಗ ಪ್ರಜಾ ಪರಿವರ್ತನಾ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬಡವರು ಬೀದಿ ಪಾಲಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡವರಿಗೆ ವಾಸಿಸಲು ಸೂಕ್ತ ಜಾಗ ನೀಡುವುದು ಸರಕಾರದ ಕರ್ತವ್ಯವೆಂದು ತಿಳಿಸಿದರು.

ಬೆಂಗಳೂರು ದಕ್ಷಿಣ ತಾಲೂಕು ದೊಡ್ಡನಾಗಮಂಗಲದಲ್ಲಿರುವ ಸವೇ ನಂ.5/4. 6ರಲ್ಲಿ ಜಾಗವನ್ನು ಭೂಗಳ್ಳರು ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ ದಾಖಲೆಗಳನ್ನು ತಿದ್ದಿ, ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ನಂತರ ಈ ಜಾಗವನ್ನು ಬಡವರಿಗೆ ಮಾರಾಟ ಮಾಡಿದ್ದಾರೆ. ಈ ಜಾಗದಲ್ಲಿ ಬಡವರು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದರು. ಆದರೆ, ಡಿ.13, 2018ರಂದು ಅಧಿಕಾರಿಗಳು ಯಾವುದೆ ನೋಟಿಸ್ ನೀಡದೆ, ಈ ಜಾಗದಲ್ಲಿದ್ದ ಮನೆಗಳನ್ನು ಕೆಡವಿ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಸರಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಭೂ ಗಳ್ಳರು ಈ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬಡವರಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿರುವುದರ ಬಗ್ಗೆ ಯಾಕೆ ಕ್ರಮ ವಹಿಸುತ್ತಿಲ್ಲ. ಬಡವರು ಹಣ ಕೊಟ್ಟೆ ಈ ಜಾಗವನ್ನು ಖರೀದಿಸಿ ಮನೆ ನಿರ್ಮಿಸಿದ್ದಾರೆ. ಅಧಿಕಾರಿಗಳು ಹಾಗೂ ಭೂಗಳ್ಳರ ಭ್ರಷ್ಟಾಚಾರಕ್ಕೆ ಬಡವರನ್ನು ನಿಗರ್ತಿಕರನ್ನಾಗಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಹಕ್ಕೊತ್ತಾಯಗಳು

-ದೊಡ್ಡನಾಗಮಂಗಲದ ಸರ್ವೇ ನಂ.5/4, 6ರಲ್ಲಿ ಧ್ವಂಸ ಮಾಡಲಾಗಿದ್ದ ಮನೆಗಳನ್ನು ಪುನಃ ಸರಕಾರವೆ ಕಟ್ಟಿಕೊಡಬೇಕು.

-ಈ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿಕೊಂಡಿರುವ ಭೂಗಳ್ಳರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು.

-ಕಂದಾಯ ಇಲಾಖೆಯ ಸೆಕ್ಷನ್ 57ರ ಪ್ರಕಾರ ಅರ್ಜಿಗಳನ್ನು ಸ್ಥಳದಲ್ಲೆ ಪಡೆದು 4ದಿನಗಳಲ್ಲಿ ಹಕ್ಕು ಪತ್ರಗಳನ್ನು ವಿತರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News