ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಜುವೆಂಟಸ್

Update: 2019-03-14 03:36 GMT

ಟುರಿನ್, ಮಾ.13: ಮುನ್ಪಡೆ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹ್ಯಾಟ್ರಿಕ್ ಗೋಲುಗಳ ಬಲದಿಂದ ಜುವೆಂಟಸ್ ತಂಡವು ಮಂಗಳವಾರ ರಾತ್ರಿ ಎರಡನೇ ಹಂತದ ಚಾಂಪಿಯನ್ಸ್ ಲೀಗ್‌ನ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತನ್ನ ಬದ್ಧ ಎದುರಾಳಿ ಅಥ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ 3-0 ಅಂತರದ ಜಯ ಸಾಧಿಸಿದೆ.

27ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವ ಮೂಲಕ ರೊನಾಲ್ಡೊ ಗೋಲಿನ ಖಾತೆ ತೆರೆದರು. 48ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಾಯಿತು. ಪಂದ್ಯ ಕೊನೆಗೊಳ್ಳಲು 4 ನಿಮಿಷಗಳಿರುವಾಗ ಅಂದರೆ 86ನೇ ನಿಮಿಷದಲ್ಲಿ ರೊನಾಲ್ಡೊಗೆ ಮೂರನೇ ಗೋಲಿನ ಸಂಭ್ರಮ. ಈ ಗೆಲುವಿನ ಮೂಲಕ ಜುವೆಂಟಸ್ ತಂಡ ಅಥ್ಲೆಟಿಕೊ ವಿರುದ್ಧ 3-2 ಗೆಲುವಿನ ಹೆಡ್-ಟು-ಹೆಡ್ ಸಾಧನೆ ಮಾಡಿತು.

ಚಾಂಪಿಯನ್ಸ್ ಲೀಗ್‌ನಲ್ಲಿ ಇದು ರೊನಾಲ್ಡೊ ಸಾಧಿಸಿದ ಎಂಟನೇ ಹ್ಯಾಟ್ರಿಕ್ ಎನ್ನುವುದು ವಿಶೇಷ. ಸದ್ಯ ಅವರು ಬಾರ್ಸಿಲೋನ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಚಾಂಪಿಯನ್ಸ್ ಲೀಗ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಗೋಲು ಸ್ಕೋರರ್ (124) ದಾಖಲೆ ಸದ್ಯ ರೊನಾಲ್ಡೊ ಪಾಲಾಗಿದೆ.

ರಿಯಲ್ ಮ್ಯಾಡ್ರಿಡ್ ತಂಡದ ಮಾಜಿ ಆಟಗಾರನಾಗಿರುವ ರೊನಾಲ್ಡೊ, ಮೂರು ಬೇರೆ ಬೇರೆ ಕ್ಲಬ್‌ಗಳೊಂದಿಗೆ ಆರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿದ್ದಾಗಲೂ ಅವರು ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಈ ಪಂದ್ಯದ ಹ್ಯಾಟ್ರಿಕ್ ಮೂಲಕ ರೊನಾಲ್ಡೊ ಎಲ್ಲ ಟೂರ್ನಿಗಳು ಸೇರಿ ಅಥ್ಲೆಟಿಕೊ ತಂಡದ ವಿರುದ್ಧ 33 ಪಂದ್ಯಗಳಲ್ಲಿ 25 ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News