10 ರೂ. ವೈದ್ಯರೆಂದೇ ಪ್ರಸಿದ್ಧರಾಗಿರುವ ಕರ್ನಾಟಕದ ಡಾ. ಕೈಲಾಶ್ ಮುರಶಿಲಿನ್

Update: 2019-03-14 08:55 GMT

ಬೆಂಗಳೂರು : ಕೆಲ ತಿಂಗಳುಗಳ ಹಿಂದೆ ನಿಧನರಾದ ಚೆನ್ನೈ ನಗರದ ಡಾ. ಎಸ್ ಜಯಚಂದ್ರನ್ ಎರಡು ರೂಪಾಯಿ ವೈದ್ಯರೆಂದೇ ಪ್ರಸಿದ್ಧರಾಗಿದ್ದರು. ಅವರ ಹಾದಿಯಲ್ಲಿಯೇ ಕಳೆದ 22 ವರ್ಷಗಳಿಂದ ನಡೆಯುತ್ತಿರುವ ಕರ್ನಾಟಕದ ಮೈಲಸಮುದ್ರ ಗ್ರಾಮದ ಡಾ. ಕೈಲಾಶ್ ಮುರಶಿಲಿನ್ ಅವರು ಹತ್ತು ರೂಪಾಯಿ ವೈದ್ಯ ಎಂದೇ ಜನಜನಿತರಾದವರು.

ಬಡವರಿಗೆ ಸಹಾಯ ಮಾಡುವುದೇ ತಮ್ಮ ಧ್ಯೇಯವೆಂದು ನಂಬಿರುವ ಡಾ. ಕೈಲಾಶ್ ತಮ್ಮ ಬಡ ರೋಗಿಗಳಿಂದ ಕೇವಲ 10 ರೂ. ಕನ್ಸಲ್ಟೇಶನ್ ಫೀ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಕೆಲ ರೋಗಿಗಳಿಂದ ಅವರು ಚಿಕಿತ್ಸೆಗಾಗಿ ಯಾವುದೇ ಹಣವನ್ನೂ ಪಡೆಯುವುದಿಲ್ಲ. ಸ್ವತಃ ಬಡತನದ ಹಿನ್ನೆಲೆಯಿಂದ ಬಂದಿರುವ ಡಾ. ಕೈಲಾಶ್ ಬಡತನದ ಬೇಗುದಿಗಳನ್ನು ಚೆನ್ನಾಗಿ ಬಲ್ಲವರು. ಚಿಕಿತ್ಸೆಗಾಗಿ ಹಣವಿಲ್ಲದೆ ಕಂಗಾಲಾಗಿದ್ದ ಹಲವರನ್ನು ನೋಡಿ ಕನಿಕರ ಪಟ್ಟವರು. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮನೆಯಲ್ಲಿನ ಬಡತನದಿಂದಾಗಿ ಹಾಲು ಮಾರಾಟ ಮಾಡಿ ಹಣ ಗಳಿಸುವ ಅನಿವಾರ್ಯತೆ ಅವರಿಗಿತ್ತು.

ಬಿಎಎಂಎಸ್ ಶಿಕ್ಷಣ ಪಡೆಯುವ ಮೊದಲು ಅವರು ಡಾ. ಪಿಸಿ ಚಪ್ಪನಮಠ್ ಎಂಬವರಲ್ಲಿ  ಸಹಾಯಕನಾಗಿ  ಕೆಲಸ ಮಾಡಿದರು. ಅವರು ಸೇವೆ ಸಲ್ಲಿಸುತ್ತಿದ್ದ ಮೈಲಸಮುದ್ರದ ಜನರು ತೀರಾ ಬಡವರಾಗಿದ್ದರು. ಮುಂದೆ ಬಿಎಎಂಎಸ್ ಶಿಕ್ಷಣ ಮುಗಿಸಿದ ಬಳಿಕ ಡಾ. ಕೈಲಾಶ್ ಇದೇ ಗ್ರಾಮದಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದರು.

ಪ್ರತಿ ದಿನ ಈ ಗ್ರಾಮಕ್ಕೆ ಸೈಕಲ್ ತುಳಿದುಕೊಂಡು ಬರುವ ಅವರು ಇತರರಿಗೂ ಸೈಕಲ್ ಸವಾರಿ ನಡೆಸುವಂತೆ ಪ್ರೇರೇಪಿಸುತ್ತಾರಲ್ಲದೆ ಇದು ಆರೋಗ್ಯಕರ ವಿಧಾನ ಎಂದೂ ಜನರಿಗೆ ಮನದಟ್ಟು ಮಾಡುತ್ತಾರೆ.

ಹಿರಿಯ ನಾಗರಿಕರ, ಅಂಗವಿಕಲರ ಮನೆಗೆ ತಾವೇ ಸ್ವತಃ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸುವ ಡಾ. ಕೈಲಾಶ್ ಅವರ ಬಗ್ಗೆ ಗ್ರಾಮದ ಜನತೆಗೆ ಅಪಾರ ಅಭಿಮಾನ ಮತ್ತು ಆದರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News