‘ದಿ ವೈರ್’ ವಿರುದ್ಧ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅಪೀಲನ್ನು ವಜಾಗೊಳಿಸಿದ ನ್ಯಾಯಾಲಯ ಹೇಳಿದ್ದೇನು?

Update: 2019-03-14 11:38 GMT

ಹೊಸದಿಲ್ಲಿ : “ಮಾಧ್ಯಮವು ಸಂವಿಧಾನದ ಕಣ್ಗಾವಲಾಗಿ ಕಾರ್ಯಾಚರಿಸುವುದರಿಂದ  ಸರಕಾರದ ನೀತಿಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವುದು ಮಾಧ್ಯಮದ ಜವಾಬ್ದಾರಿ. ಸರಕಾರದ ಅಥವಾ ಸರಕಾರಿ ನೌಕರರ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸುವುದಕ್ಕೆ ಮಾಧ್ಯಮದ ಮೇಲೆ ನಿರ್ಬಂಧ ಹೇರಿದಲ್ಲಿ ಅದು ಮಾಧ್ಯಮ ಮಂದಿಯ  ಕರ್ತವ್ಯ ನಿಭಾಯಿಸುವ ಹಕ್ಕನ್ನು ಮೊಟಕುಗೊಳಿಸಿದಂತೆ,'' ಎಂಬುದು  ‘ದಿ ವೈರ್’ ಸುದ್ದಿ ತಾಣದ ಪರ  ಬೆಂಗಳೂರು ಸೆಶನ್ಸ್ ಕೋರ್ಟ್ ನ್ಯಾಯಾಧೀಶ ರವೀಂದ್ರ ಜೋಷಿ ತಮ್ಮ ತೀರ್ಪು ನೀಡುವ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯವಾಗಿತ್ತು.

ಫೆಬ್ರವರಿ 26ರಂದು ನೀಡಿದ ಈ ತೀರ್ಪು ಉದ್ಯಮಿ ಹಾಗೂ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು  ತಮ್ಮ ಕುರಿತಾಗಿ ‘ಅರ್ನಬ್ಸ್ ರಿಪಬ್ಲಿಕ್, ಮೋದೀಸ್ ಐಡಿಯಾಲಜಿ,’ ಹಾಗೂ `ಇನ್ ಹೂಸ್ ಇಂಟ್ರಸ್ಟ್ಸ್ ಡು ಅವರ ಸೋಲ್ಜರ್ಸ್ ಮಾರ್ಚ್?' ಎಂಬ ಎರಡು ಲೇಖನಗಳನ್ನು ದಿ ವೈರ್ ಪ್ರಕಟಿಸದಂತೆ ಖಾಯಂ ನಿರ್ಬಂಧಕಾಜ್ಞೆ ವಿಧಿಸಬೇಕೆಂದು ಕೋರಿದ್ದ ಅಪೀಲನ್ನು ವಜಾಗೊಳಿಸಿದೆ. ಈ ಲೇಖನಗಳನ್ನು  ಮೂಲತಃ ದಿ ವೈರ್ ಜನವರಿ 25 ಹಾಗೂ ಫೆಬ್ರವರಿ 17, 2017ರಮದು ಪ್ರಕಟಿಸಿತ್ತು. ಎರಡು ವರ್ಷಗಳ ಹಿಂದೆ ಈ ಲೇಖನ ಪ್ರಕಟಣೆಯ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನು ಚಂದ್ರಶೇಖರ್ ಪಡೆದುಕೊಂಡಾಗ ಅಂತೆಯೇ ನಡೆದುಕೊಂಡಿದ್ದ ದಿ ವೈರ್ ನಂತರ ಈ ಆದೇಶವನ್ನು ಪ್ರಶ್ನಿಸಿತ್ತು.

ಕಳೆದ ತಿಂಗಳಿನ ಬೆಂಗಳೂರು ಸೆಶನ್ಸ್ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಈ ಎರಡೂ ಲೇಖನಗಳು ಮತ್ತೆ ದಿ ವೈರ್ ವೆಬ್ ತಾಣದಲ್ಲಿವೆ.

ಮೇಲಿನ ಆದೇಶದ ವಿರುದ್ಧ  ಕರ್ನಾಟಕ ಹೈಕೋರ್ಟಿನ ಕದವನ್ನು ಚಂದ್ರಶೇಖರ್ ತಟ್ಟಿದ್ದಾರೆ. ರಾಜ್ಯದ ಅಟಾರ್ನೀ ಜನರಲ್ ಕೂಡ ಆಗಿರುವ ಹಿರಿಯ ವಕೀಲರಾದ ಉದಯ ಹೊಳ್ಳ ಅವರ ಪರ ವಕೀಲರಾಗಿದಾರೆ.

ದಿ ವೈರ್ ಪ್ರಕಟಿಸಿದ ಎರಡೂ ಲೇಖನಗಳು ಚಂದ್ರಶೇಖರ್ ಅವರು ರಾಜಕಾರಣಿ, ಸಂಸದರಾಗಿ ಒಂದೆಡೆ ಹಾಗೂ ಉದ್ಯಮಿಯಾಗಿ ಮಾಧ್ಯಮ ಮತ್ತು ರಕ್ಷಣಾ ರಂಗಗಳಲ್ಲಿ ಕೈಯ್ಯಾಡಿಸಿರುವ ಬಗ್ಗೆ ಹಾಗೂ ಈ ಕ್ಷೇತ್ರಗಳಲ್ಲಿನ ಅವರ ಆಸಕ್ತಿಗಳನ್ನು ಪರಾಮರ್ಶಿಸುತ್ತವೆ. ಚಂದ್ರಶೇಖರ್ ಅವರು ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್ಜಿ ಔಟ್ಲಿಯರ್ ಮೀಡಿಯಾ ಏಷ್ಯಾ ನ್ಯೂಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿದ್ದರೂ ಎಪ್ರಿಲ್ 2018ರಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News