ನಾನು ಮೋದಿ ಅವರಂತೆ ಹುಸಿ ಭರವಸೆ ನೀಡಲಾರೆ: ರಾಹುಲ್ ಗಾಂಧಿ

Update: 2019-03-14 17:28 GMT

ತ್ರಿಶೂರ್, ಮಾ. 14: ನಾನು ನರೇಂದ್ರ ಮೋದಿ ಅವರಂತೆ ಅಲ್ಲ. ನಾನು ಹುಸಿ ಭರವಸೆ ನೀಡಲಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆಲ್ ಇಂಡಿಯಾ ಫಿಶರ್‌ಮೆನ್ ಕಾಂಗ್ರೆಸ್ ಇಲ್ಲಿಗೆ ಸಮೀಪದ ತರಿಪ್ರಯಾರ್ ನಲ್ಲಿ ಗುರುವಾರ ಆಯೋಜಿಸಿದ್ದ ನ್ಯಾಶನಲ್ ಫಿಶರ್‌ಮೆನ್ ಪಾರ್ಲಿಮೆಂಟ್‌ನಲ್ಲಿ ಮೀನುಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಮುಖವಾದ ಅಂಶವೆಂದರೆ ಈ ಜನರಿಗೆ ಧ್ವನಿ ನೀಡುವುದು ಎಂದರು. ರೈತರು, ಮೀನುಗಾರರು ಹಾಗೂ ಸಣ್ಣ ಉದ್ಯಮಿಗಳ ಧ್ವನಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಎನ್‌ಡಿಎ ಸರಕಾರ ಕೇವಲ ಅನಿಲ್ ಅಂಬಾನಿ ಹಾಗೂ ನೀರವ್ ಮೋದಿಯವರಂತಹ ಉದ್ಯಮಿಗಳ ಧ್ವನಿಯನ್ನು ಮಾತ್ರ ಆಲಿಸುತ್ತದೆ ಎಂದಿದ್ದಾರೆ.

ಇಂದಿನ ಸರಕಾರದಲ್ಲಿ ಅನಿಲ್ ಅಂಬಾನಿ ಅಥವಾ ನೀರವ್ ಮೋದಿಗೆ ಅತಿಯಾದ ಧ್ವನಿ ಇದೆ. ಏನು ಹೇಳಬೇಕೋ ಅದನ್ನು ಅವರು 10 ಸೆಕೆಂಡ್‌ಗಳಲ್ಲಿ ಪ್ರಧಾನಿ ಅವರಿಗೆ ತಿಳಿಸುತ್ತಾರೆ. ಅವರು ಬೊಬ್ಬೆ ಹಾಕಬೇಕಾಗಿಲ್ಲ. ಅವರು ಪಿಸುಗುಟ್ಟಿದರೆ ಸಾಕು. ಆದರೆ, ರೈತರು, ಮೀನುಗಾರರು ಹಾಗೂ ಸಣ್ಣ ಉದ್ಯಮಿಗಳು ಸರಕಾರದ ಮುಂದೆ ಗಟ್ಟಿಯಾಗಿ ಬೊಬ್ಬೆ ಹೊಡೆಯಬೇಕು ಎಂದು ಅವರು ಹೇಳಿದರು. ಮೋದಿ ಅವರೊಂದಿಗಿರುವ ಅಪ್ರಾಮಾಣಿಕ ಜನರ ಬಗ್ಗೆ ನಾನು ಮಾತ ನಾಡುತ್ತಿದ್ದೇನೆ. ಇದು ನಿಜವಾಗಿ ಕಾಂಗ್ರೆಸ್ ಹಾಗೂ ಮೋದಿ ನಡುವಿನ ಹೋರಾಟ ಎಂದು ರಾಹುಲ್ ಗಾಂಧಿ ಹೇಳಿದರು.

ಮಾರುಕಟ್ಟೆ ಮಾಡಲು ಮೋದಿ ಅವರಿಗೆ ಅಪ್ರಾಮಾಣಿಕ ಜನರು ಸಹಾಯ ನೀಡುತ್ತಾರೆ ಎಂದು ಆರೋಪಿಸಿದ ಅವರು, ನಾನು ಅನಿಲ್ ಅಂಬಾನಿಯನ್ನು ಅನಿಲ್ ಭಾ, ನೀರವ್ ಮೋದಿಯನ್ನು ನೀರವ್ ಭಾ, ಮೆಹುಲ್ ಚೋಕ್ಸಿಯನ್ನು ಮೆಹುಲ್ ಭಾ ಎಂದು ನಾನು ಕರೆಯಲಾರೆ ಎಂದರು. ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News