ಸರಕಾರಿ ಆಸ್ಪತ್ರೆಗಳಲ್ಲಿ ಗೊಂದಲ..!

Update: 2019-03-14 18:02 GMT

ಮಾನ್ಯರೇ,

ರಾಜ್ಯದಲ್ಲಿರುವ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ ಖಾಸಗಿ ವೈದ್ಯರನ್ನು ಅವಲಂಬಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಗೊಂದಲ ವೊಂದು ಸೃಷ್ಟಿಯಾಗಿದೆ. ಅದೇನೆಂದರೆ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ವೇಳೆ ಹೆಚ್ಚಿನ ಚಿಕಿತ್ಸೆ ನೀಡುವಾಗ ಹೆಚ್ಚಾಗಿ ಖಾಸಗಿ ವೈದ್ಯರ ಸಹಾಯ ಪಡೆಯಲಾಗುತ್ತಿರುವುದು. ಇದಕ್ಕಾಗಿ ರೋಗಿಗಳು ಬೇರೆಯೇ ಶುಲ್ಕ ನೀಡಬೇಕು. ಇದೀಗ ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ತಜ್ಞ ವೈದ್ಯರಿಂದ ಪಡೆಯುವ ಸೇವೆಗೆ ಕೊಡುವ ಶುಲ್ಕ ಪರಿಷ್ಕರಣೆಗೆ ಮುಂದಾಗಿದೆ.
ಸರಕಾರಿ ಆಸ್ಪತ್ರೆ ಅಂದರೆ ಎಲ್ಲವೂ ಉಚಿತ ಎಂಬ ಭಾವನೆ ಇದೆ. ಈ ಮಧ್ಯೆ ಇಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ವೈದ್ಯರಿಂದ ಸೇವೆ ಪಡೆದಾಗ ಶುಲ್ಕ ನೀಡಬೇಕೆಂಬ ಮಾಹಿತಿ ಜನಸಾಮಾನ್ಯರಿಗೆ ಇಲ್ಲ. ಇದು ಗೊಂದಲ ಸೃಷ್ಟಿಸಿದೆ. ಅಲ್ಲದೆ ಈ ಕಾಲಘಟ್ಟದಲ್ಲೂ ಸರಕಾರಕ್ಕೆ ಬಡವರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಿಸಲು ಅಸಾಧ್ಯವಾಗಿರುವುದು ಖೇದಕರ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಕ್ಷೇತ್ರಕ್ಕಾಗಿ ಕೋಟಿ ಕೋಟಿ ರೂ. ಅನುದಾನ ಮೀಸಲಿಟ್ಟಿವೆ. ಇದೆಲ್ಲಾ ಏನಾಗುತ್ತಿದೆ..? ಉಪಯೋಗಕ್ಕೆ ಬಂದಿದೆಯೋ? ಇಲ್ಲವೋ..? ಎಂಬ ಅನುಮಾನಕ್ಕೆೆ ಉತ್ತರ ಕೊಡುವವರು ಯಾರು?.
ಸೂಕ್ತ ವೈದ್ಯರು ಇಲ್ಲದೇ ಇರುವುದರಿಂದ ಸರಕಾರಿ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿವೆ. ಇವುಗಳು ಕೇವಲ ಔಷಧಿ ನೀಡುವ ಕೇಂದ್ರಗಳಾಗಿಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡಲೇ ತಜ್ಞ ವೈದ್ಯರ ಕೊರತೆಯನ್ನು ಪಟ್ಟಿ ಮಾಡಬೇಕು. ಜೊತೆಗೆ ಈ ಸಮಸ್ಯೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ‘ಬಡವರ ಆಸ್ಪತ್ರೆ’ಗಳ ಹೆಸರಲ್ಲಿ ಏನೇನೋ ಮಾರ್ಪಾಡು ಮಾಡುವವರಿಗೆ ಶಿಕ್ಷೆ ನೀಡುವವರು ಯಾರು..?

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News