ಇಂಡಿಯನ್ ವೆಲ್ಸ್: ಫೆಡರರ್, ನಡಾಲ್ ಕ್ವಾರ್ಟರ್‌ಫೈನಲ್‌ಗೆ

Update: 2019-03-14 18:03 GMT

ಇಂಡಿಯನ್ ವೆಲ್ಸ್, ಮಾ.14: ಮಾಜಿ ಚಾಂಪಿಯನ್‌ಗಳಾದ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಲ್ಲಿ ಬುಧವಾರ ರಾತ್ರಿ ತಮ್ಮ ಪ್ರಿಕ್ವಾರ್ಟರ್ ಪಂದ್ಯಗಳನ್ನು ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವದ ನಂ.2 ಆಟಗಾರ ನಡಾಲ್ ಅವರು ಒಂದು ತಾಸು 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸರ್ಬಿಯದ ಕ್ವಾಲಿಫೈಯರ್ ಆಟಗಾರ ಫಿಲಿಪ್ ಕ್ರಾಜಿನೊವಿಕ್ ಅವರನ್ನು 6-3, 6-4ರಿಂದ ಮಣಿಸಿದರು. ಇನ್ನೊಂದೆಡೆ 6ನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ವಿಸ್ ತಾರೆ ಫೆಡರರ್, ಬ್ರಿಟನ್‌ನ ಕೈಲ್ ಎಡ್ಮಂಡ್ ಅವರನ್ನು 64 ನಿಮಿಷಗಳ ಆಟದಲ್ಲಿ 6-3, 6-1 ಸೆಟ್‌ಗಳಿಂದ ಸೋಲಿಸಿ ಮುನ್ನುಗ್ಗಿದರು. 2007, 2008 ಹಾಗೂ 2013ರಲ್ಲಿ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿರುವ ನಡಾಲ್, ತಮ್ಮ ಮುಂದಿನ ಪಂದ್ಯದಲ್ಲಿ ರಶ್ಯದ ಕರೆನ್ ಖಚನೊವ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ. ಮತ್ತೊಂದೆಡೆ ಖಚನೊವ್, ವಿಶ್ವ ನಂ.9 ಆಟಗಾರ ಅಮೆರಿಕದ ಜಾನ್ ಇಸ್ನೆರ್ ಅವರನ್ನು 6-4, 7-6 (7/1) ಸೆಟ್‌ಗಳಿಂದ ಸೋಲಿಸಿದರು.

ಫೆಡರರ್ ತಮ್ಮ ಮುಂದಿನ ಪಂದ್ಯದಲ್ಲಿ 22 ವರ್ಷದ ಪೊಲೆಂಡ್ ಆಟಗಾರ ಹ್ಯುಬರ್ಟ್ ಹರ್ಕಝ್ ಅವರನ್ನು ಎದುರಿಸಲಿದ್ದಾರೆ.

► ಕೆನಡಾದ ಬಿಯಾಂಕಾ ಸೆಮಿಫೈನಲ್‌ಗೆ

ಕೆನಡಾದ ಯುವ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕೂ ಅವರು ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಅವರನ್ನು 6-0, 6-1 ಸೆಟ್‌ಗಳ ಅಂತರದಿಂದ ಮಣಿಸಿ ಇಂಡಿಯನ್ ವೆಲ್ಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಬುಧವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

18 ವರ್ಷದ ಬಿಯಾಂಕಾ ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದರು. 20ನೇ ಶ್ರೇಯಾಂಕದ ಮುಗುರುಝಾ 52 ನಿಮಿಷಗಳ ಆಟದಲ್ಲಿ ಸುಲಭವಾಗಿ ಬಿಯಾಂಕಾಗೆ ಶರಣಾದರು.

►ಕೆಕ್ಮಾನೊವಿಕ್ 8ರ ಘಟ್ಟಕ್ಕೆ

ವಿಶ್ವ ರ್ಯಾಂಕಿಂಗ್‌ನಲ್ಲಿ 130ನೇ ಸ್ಥಾನದಲ್ಲಿರುವ ಸರ್ಬಿಯ ಕೆಕ್ಮಾನೊವಿಕ್ ಅವರು ಜಪಾನ್‌ನ ಯೋಶಿಹಿಟೊ ನಿಶಿಯೊಕಾ ಎದುರು 6-4ರ ಹಿನ್ನಡೆಯಲ್ಲಿದ್ದಾಗ ನಿಶಿಯೊಕಾ ಗಾಯಗೊಂಡು ನಿವೃತ್ತಿಯಾದರು. ಇದರಿಂದ ಕೆಕ್ಮಾನೊವಿಕ್ ಅದೃಷ್ಟ ಖುಲಾಯಿಸಿ ಅವರು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News